Go to full page →

ಅಧ್ಯಾಯ 08. - ಕ್ರಿಸ್ತನ ವಿಚಾರಣೆ GCKn 65

ದೂತರು ಪರಲೋಕವನ್ನು ಬಿಡುವಾಗ ತಮ್ಮ ಹೊಳೆಯುವ ಮುಕುಟವನ್ನು ದಃಖದಿಂದ ತೆಗೆದಿಟ್ಟರು. ತಮ್ಮ ಅದಿಪತಿಯು ಮುಳ್ಳಿನ ಕಿರೀಟ ಧರಿಸಿ ಹಿಂಸೆಪಡುತ್ತಿರುವಾಗ ಅವರಿಗೆ ಧರಿಸಲು ಅಸಾದ್ಯವಾಯಿತು. ಇತ್ತ ಮನುಷ್ಯತ್ವವನ್ನು, ಸಹಾನುಭೂತಿಯನ್ನು ನಾಶಮಾಡಲು ಸೈತಾನನೂ ಆತನ ದೂತನ ವಿಚಾರಣಾ ಅಂಗಳದಲ್ಲಿ ಗಡಬಿಡಿಯಾಗಿದ್ದರು. ಅವರ ಪ್ರಭಾವದಿಂದ ವಾತಾರಣವೆಲ್ಲಾ ಭಾರವಾಗಿಯೂ, ಮಲಿನವಾಗಿಯೂ ಇತ್ತು. ಮಹಾಯಜಕರೂ ಹಿರಿಯರೂ ಮನುಷ್ಯಮಾತ್ರದವರು ಸಹಿಸಲಾಗದ ದೂಷಣೆ ಮತ್ತು ಅಪಮಾನವನ್ನು ಯೇಸುವಿಗೆ ಮಾಡುವಂತೆ ಸೈತಾನ ಮತ್ತು ದೂತರಿಂದ ಪ್ರಚೋದಿಸಲ್ಪಟ್ಟರು. ಈ ಹಿಂಸೆಯು ದೇವಕುಮಾರನನ್ನು ಗೊಣಗುವಂತೆ ಮಾಡುವುದು; ಅಥವಾ ತನ್ನ ದೈವ ಶಕ್ತಿಯನ್ನು ಪ್ರಕಟಿಸುವಂತೆ ಮಾಡಿ ಜನರ ಗುಂಪಿನ ಹಿಡಿತದಿಂದ ತನ್ನನ್ನು ಬಿಡಿಸಿಕೊಳ್ಳಲು ಬಲಾತ್ಕರಿಸಬಹುದು, ಹೀಗೆ ಅಂತಿಮವಾಗಿ ರಕ್ಷಣಾಯೋಜನೆಯು ಸೋಲಬಹುದು ಎಂದು ಸೈತಾನನು ನಿರೀಕ್ಷಿಸಿದನು. GCKn 65.1

ಕರ್ತನನ್ನು ವಶಪಡಿಸಿಕೊಟ್ಟಮೇಲೆ ಪೇತ್ರನು ಹಿಂಬಾಲಿಸಿದನು. ಯೇಸುವಿಗೆ ಏನಾಗಬಹುದುದೆಂದು ಅವನು ತಿಳಿಯಲು ಕಾತುರನಾಗಿದ್ದನು. ಅವನನ್ನು ಶಿಷ್ಯರಲ್ಲಿ ಒಬ್ಬನೆಂದು ಜನರು ಗುರುತಿಸಿದಾಗ ಒಪ್ಪಿಕೊಳ್ಳಲಿಲ್ಲ; ಅವನಿಗೆ ಪ್ರಾಣಭಯ ಆವರಿಸಿ, “ಆ ಮನುಷ್ಯನನ್ನು ನಾನರಿಯನು” ಎಂದನು. ಶಿಷ್ಯರು. ಅವರ ಸ್ಪಷ್ಟಶುದ್ಥ ಭಾಷಯಿಂದ ಗುರುತಿಸಲ್ಪಡುತ್ತಿದ್ದರು. ಪೇತ್ರನು, ಜನರನ್ನು ಮೋಸಗೊಳಿಸಿ ಕ್ರಿಸ್ತನ ಶಿಷ್ಯರಲ್ಲಿ ಒಬ್ಬನಲ್ಲವೆಂದು ಒಪ್ಪಿಸಲು, ಮೂರನೇ ಭಾರಿ ಆಣೆ ಪ್ರಮಾಣಗಳಿಂದ ಬೊಂಕಿದನು, ಪೇತ್ರನಿಂದ ಸ್ವಲ್ಪ ದೂರದಲ್ಲಿದ್ದ ಯೇಸು ಯಾತನೆ ತುಂಬಿದ ಆಕ್ಷೇಪಣಾ ದೃಷ್ಟಿಯನ್ನು ಅವನ ಮೇಲೆ ಹರಿಸಿದನು. ಆಗ ತಾನೇ ಮೇಲುಪ್ಪರಿಗೆಯಲ್ಲಿ ಯೇಸು ತನ್ನೊಂದಿಗೆ ಆಡಿದ ಮಾತು, ಆ ಮಾತಿಗೆ ತನ್ನ ಹುರುಪಿನ ಹೇಳಿಕೆ ‘ನಿನ್ನನ್ನು ಎಲ್ಲರೂ ಬಿಟ್ಟುಹೋದರು ನಾನು ಹಿಂಜರಿಯೆನು’ ಎಂದಿದ್ದು ನೆನಪಾಯಿತು. ಅವನು ಕರ್ತನನ್ನು ಆಣೆಪ್ರಮಾಣಗಳಿಂದ ಬೊಂಕಿದನು; ಆದರೆ ಯೇಸುವಿನ ನೋಟ ಅವನನ್ನು ಕರಗಿಸಿತ್ತು ಮತ್ತು ರಕ್ಷಿಸಿತು. ತಾನು ಮಾಡಿದ ಮಹಾಪಾಪಕ್ಕಾಗಿ ಬಹುವಾಗಿ ಅಳುತ್ತಾ ಪಶ್ಚಾತ್ತಾಪ ಪಟ್ಟನು ಮತ್ತು ಪರಿವರ್ತನೆ ಹೊಂದಿದನು ನಂತರ ಸಹೋದರರನ್ನು ಧೃಡಪಡಿಸಲು ಸಿದ್ದನಾದನು. GCKn 65.2

ಜನರಗುಂಪು ಯೇಸುವಿನ ರಕ್ತಕ್ಕಾಗಿ ತಗಾದೆ ಮಾಡಲಾರಂಭಿಸಿತು. ಅವನು ಕ್ರೂರವಾಗಿ ಕೊರಡೆಯಿಂದ ಬಾರಿಸಿದರು. ಅವನ ಮೇಲೆ ಒಂದು ಹಳೆಯ ಕೆಂಪು ರಾಜವಲ್ಲಿಯನ್ನು ಹೊದಿಸಿದರು ಮತ್ತು ಮುಳ್ಳುಗಳಿಂದ ಹೆಣೆದ ಕಿರೀಟವನ್ನು ಆತನ ತಲೆಗೆ ತೊಡಿಸಿದರು. ಬೆತ್ತ ಒಂದನ್ನು ಆತನ ಕೈಗೆ ಕೊಟ್ಟು ಗೇಲಿಮಾಡುತ್ತಾ ಮುಂದೆ ಬಾಗಿ ಯಹೂದ್ಯ ಅರಸನೇ, ನಿನಗೆ ನಮಸ್ಕಾರ ಎಂದರು. ನಂತರ ಬೆತ್ತವನ್ನು ಕಸಗೊಂಡು ಆತನ ತಲೆಮೇಲೆ ಹೊಡೆಯಲು ಮುಳ್ಳುಗಳೆಲ್ಲಾ ಹಣೆಗೆ ಚುಚ್ಚಿ ರಕ್ತವು ಹನಿಹನಿಯಾಗಿ ಹರಿದು ಆತನ ಗಡ್ಡ ಮತ್ತು ಮುಖದ ಮೇಲೆ ಹರಿಯಿತು. GCKn 66.1

ದೇವದೂತರಿಗೆ ಈ ದೃಶ್ಯವನ್ನು ತಾಳಿಕೊಳ್ಳಲು ಅಸಾದ್ಯವಾಯಿತು. ಅವರ ಕೈಗಳಿಂದ ಯೇಸುವನ್ನು ಬಿಡಿಸಬಹುದಿತ್ತು. ಆದರೆ ಪ್ರಧಾನ ದೂತರು, ಸೈರಿಸಿಕೊಳ್ಳಬೇಕೆಂದು ತಿಳಿಸಿ, ಈ ಘಟನೆಯು ಮಾನವನ ಬಿಡುಗಡೆಗಾಗಿ ಕೊಡುತ್ತಿರುವ ಮಹಾಕ್ರಯ; ಈ ಹಿಂಸೆ ಪರಿಪೂರ್ಣವಾಗಿ ಸಂಭವಿಸಿ ಮರಣದ ಮೇಲೆ ಅಧಿಕಾರವಿರುವಾತನನ್ನು ಮರಣಕ್ಕೆ ಒಪ್ಪಿಸುತ್ತದೆ ಎಂದರು. ಯೇಸುವಿಗಾಗುತ್ತಿದ್ದ ಈ ಹೀನೈಸುವಿಕೆಯನ್ನೆಲ್ಲಾ ದೂತರು ಕಾಣುತ್ತಿದ್ದಾರೆಂಬುದು ಆತನಿಗೆ ತಿಳಿದಿತ್ತು. ದೂತರಲ್ಲಿ ಅತಿ ನಿರ್ಬಲದೂತನು ಜನರಗುಂಪನ್ನು ನಿತ್ರಾಣಗೊಳಿಸಿ ಯೇಸುವನ್ನು ಬಿಡಿಸಬಲ್ಲ ಶಕ್ತನಾಗಿರುವುದನ್ನು ನಾನು ಕಂಡೆನು. ಒಂದುವೇಳೆ ಯೇಸುವು ತಂದೆಯಿಂದ ಅಪೇಕ್ಷಿಸಿದ್ದರೆ ದೂತರು ತತ್ ಕ್ಷಣವೆ ಬಿಡುಗಡೆ ಮಾಡಬಲ್ಲವರಾಗಿದ್ದರು. ಅದರೆ ರಕ್ಷಣಾಯೋಜನೆಯನ್ನು ನೇರವೇರಿಸಲು ಯೇಸು ಈ ದುಷ್ಟರ ಹಲವು ಕೃತ್ಯಗಳನ್ನು ಅನುಭವಿಸಲೇ ಬೇಕಾಗಿತ್ತು. GCKn 67.1

ರೊಚ್ಚಿಗೆದ್ದ ಜನರಗುಂಪು ಅತಿತುಚ್ಛವಾಗಿ ತೆಗೆದುಕೊಳ್ಳುತ್ತಿದ್ದಾಗ ಯೇಸು ಧೀನನಾಗಿ, ನಮ್ರನಾಗಿ ನಿಂತಿದ್ದನು ಯೇಸುವಿನ ಯಾವ ಮುಖವು;ನೋಡಲಾಗದೆ ಬಚ್ಚಿಟ್ಟುಕೊಳ್ಳುವರೋ, ದೇವರ ರಾಜ್ಯಕ್ಕೆ ಪ್ರಕಾಶ ಪ್ರಸಾದಿಸುತ್ತದೋ, ಸೂರ್ಯನಿಗಿಂತ ತೀವ್ರವಾಗಿ ಹೊಳೆಯಬಲ್ಲದೋ, ಆ ಮುಖದ ಮೇಲೆ ಉಗುಳಿದರು. ಇಂಥ ಆಕ್ರಾಮಣಕಾರರ ಮೇಲೆ ಆತನು ಕೋಪದ ದೃಷ್ಟಿಯನ್ನಾದರೂ ಹರಿಸಲಿಲ್ಲ. ಬಹು ವಿನೀತಿನಾಗಿ ತನ್ನ ಕೈಗಳಿಂದ ಉಗುಳನ್ನು ಒರೆಸಿಕೊಂಡನು.ಅವರು ಹಳೆಯ ವಸ್ತ್ರಗಳನ್ನು ಆತನ ಮೇಲೆ ಹೊದಿಸಿದರು; ಏನೂಕಾಣಲಾಗದಂತೆ ಮಾಡಿ ಮುಖದ ಮೇಲೆ ಹೊಡೆದರು. ನಿನ್ನನ್ನು ಯಾರು ಹೊಡೆದರೆಂದು ಪ್ರವಾಧನೆ ಹೇಳು? ಎಂದು ಕೂಗಿದರು. ಈಗ ದೂತರಲ್ಲಿ ಕೋಲಾಹಲವಾಯಿತು. ಅವರು ಆ ಕ್ಷಣವೇ ಯೇಸುವನ್ನು ಬಿಡಿಸಬಲ್ಲವರಾಗಿದ್ದರು; ಆದರೆ ಪ್ರಧಾನ ದೂತರು ಅವರನ್ನು ನಿಗ್ರಹಿಸಿದರು, GCKn 67.2

ಯೇಸು ಇದ್ದೆಡೆಗೆ ಹೋಗಿ ವಿಚಾರನೆಯನ್ನು ಕಾಣಲು ಶಿಷ್ಯರಿಗೆ ವಿಶ್ವಾಸ ಉಂಟಾಯಿತು. ಆತನು ತನ್ನ ದೇವಬಲವನ್ನು ಪ್ರಯೋಗಿಸಿ, ಶತೃಗಳ ಕೈಯಿಂದ ಬಿಡಿಸಿಕೊಂಡು ಅವರ ಕ್ರೂರತ್ವವನ್ನು ಶಿಕ್ಷಿಸುವನೆಂದು ಭಾವಿಸಿದರು. ಒಂದೊಂದೇ ದೃಶ್ಯವನ್ನು ನೋಡುತ್ತ ಹೋದಾಗ ಅವರ ನಿರೀಕ್ಷೆ ಏರುಪೇರಾಗುತ್ತಿತ್ತು. ಕೆಲವುಬಾರಿ ತಾವು ಮೋಸಹೋದೆವು ಎಂದುಕೊಂಡರು ಆದರೆ ರೂಪಾಂತರ ಬೆಟ್ಟದಲ್ಲಿ ಅವರು ಕಂಡ ಪ್ರಕಾಶ ಹಾಗೂ ವಾಣಿಯು ಈತನು ದೇವಕುಮಾರನೇ ಎಂದು ನಂಬುವಂತೆ ಮಾಡಿ ಬಲಪಡಿಸಿತು. ತಾವು ಕಣ್ಣಾರೆ ನೋಡಿದ ದೃಶ್ಯಗಳಿಗೆ ಸಾಕ್ಷಿಯಾದುದು ನೆನಪಾಯಿತು. ರೋಗಗಳನ್ನು ವಾಸಿಮಾಡಿದುದು. ಕುರುಡರಿಗೆ ಕಣ್ಣುಕೊಟ್ಟಿದು, ಕಿವುಡರನ್ನು ಕೇಳುವಂತೆ ಮಾಡಿದ್ದು, ದೆವ್ವಗಳನ್ನು ಬಿಡಿಸಿ ಖಂಡಿಸಿದ್ದು, ಸತ್ತವರನ್ನು ಎಬ್ಬಿಸಿದ್ದು, ಮಾತ್ರವಲ್ಲದೆ ಬಿರುಗಾಳಿಯನ್ನು ಗದರಿಸಿದ್ದಾಗ ಅದು ವಿಧೇಯವಾದದ್ದು ಎಲ್ಲವೂ ನೆನಪಿಗೆ ಬಂದವು. ಯೇಸು ತನ್ನ ಬಲದಿಂದ ಸಿಡೆದ್ದೆದ್ದು ಅಧಿಕಾರವಾಣಿಯಿಂದ ರಕ್ತಪಿಪಾಸು ಜನಜಂಗುಳಿಯನ್ನು ಚದುರಿಸಬಹುದು ಎಂದು ಎದುರು ನೋಡಿದರು. ಏಕೆಂದರೆ ಅಂದು ದೇವಾಲಯವನ್ನು ವ್ಯಾಪಾರ ಕೇಂದ್ರವನ್ನಾಗಿ ಮಾಡಿಕೊಂಡಿರುವುದನ್ನು ಕಂಡು ಕೋಪದಿಂದ ಓಡಿಸಿದಾಗ, ಸಶಸ್ತ್ರ ಸೈನಿಕರ ಗುಂಪು ಎದುರಿಸುತ್ತಿದೆಯೋ ಎಂಬಂತೆ ಜನರು ಚದುರಿದ್ದನ್ನು ಕಂಡಿದ್ದರು. ಆತನು ಸಾಯುವನೆಂಬುದನ್ನು ನಂಬಲಾಗಲಿಲ್ಲ. ಯೇಸುವು ತನ್ನ ಪರಾಕ್ರಮ ಪ್ರದರ್ಶಿಸಿ, ತಾನು ಇಸ್ರಾಯೇಲಿನ ಅರಸನೇ ಎಂಬುದನ್ನು ಮನದಟ್ಟು ಮಾಡಿಕೊಡುವನೆಂದುಕೊಂಡರು. GCKn 68.1

ಯೂದನು ಯೇಸುವನ್ನು ಹಿಡಿದುಕೊಡುವ ತನ್ನ ವಿಶ್ವಾಸಘಾತುಕ ಕೃತ್ಯಕ್ಕಾಗಿ ತೀವ್ರ ಪಶ್ಚಾತ್ತಾಪ ಪಟ್ಟು ನಾಚಿಕೊಂಡನು. ಆತನ ಹಿಂಸೆಯನ್ನು ಕಂಡು ಎಚ್ಚೆತ್ತುಕೊಂಡನು. ಅವನು ಯೇಸುವನ್ನು ಪ್ರೀತಿಸಿದನು ಆದರೆ ಹಣವನ್ನು ಯೇಸುವಿಗಿಂತ ಹೆಚ್ಚಾಗಿ ಪ್ರೀತಿಸಿದನು. ತಾನೇ ನಡೆಸಿದ ಜನರಗುಂಪಿನಿಂದಲೇ ಸಂಕಟಕ್ಕೆ ಒಳಗಾಗುವೆನೆಂದು ಯೂದನಿಗೆ ತಿಳಿದಿರಲಿಲ್ಲ. ಯೇಸು ಯಾವುದಾದರು ಅದ್ಬುತ ಪವಾಡ ತೋರಿ ಜನರಿಂದ ಬಿಡಿಸಿಕೊಳ್ಳುವನೆಂದು ಯೋಚಿಸಿದ್ದನು. ಆದರೆ ದೇವಾಲಯದ ಅಂಗಳದಲ್ಲಿ ಉರಿದ್ದೆದ ಜನರು ಆತನ ರಕ್ತಕ್ಕಾಗಿ ಕೂಗಾಡುತ್ತಿದ್ದಾಗ ತನ್ನ ಅಳುಕನ್ನು ಅರಿತನು. ಬಹುಮಂದಿ ಆವೇಶದಿಂದ ದೂಷಿಸುತ್ತಿದ್ದಾಗ ಯೂದನು ಮದ್ಯ ನುಸುಳಿ “ತಪ್ಪಿಲ್ಲದವನನ್ನು ಹಿಡಿದುಕೊಟ್ಟು ಪಾಪ ಮಾಡಿದ್ದೇನೆ” ಎಂದು ಅರಿಕೆ ಮಾಡಿದನು. ಅವನು ತೆಗೆದುಕೊಂಡಿದ್ದ ಹಣವನ್ನು ಹಿಂತಿರುಗಿಸಿ ಬೇಡಿಕೊಳ್ಳುತ್ತಾ ಯೇಸುವನ್ನು ಬಿಡಬೇಕೆಂದೂ ಅವನು ಮುಗ್ದನೆಂದು ಪ್ರಚುರ ಪಡಿಸಿದನು. ಈ ಗಲಿಬಿಲಿ ಮತ್ತು ಕಾಟವು ಯಾಜಕರನ್ನು ಸ್ವಲ್ಪಕಾಲದ ಮಟ್ಟಿಗೆ ಸದ್ದಿಲ್ಲದಂತೆ ಸುಮ್ಮನಾಗಿಸಿತು. ತಾವು ಯೇಸುವನ್ನು ಹಿಂಡಿಯಲು ಆತನ ಶಿಷ್ಯರಲ್ಲಿ ಒಬ್ಬನನ್ನು ಹಣಕ್ಕೆ ಕೊಂಡುಕೊಂಡದ್ದು ಜನರಿಗೆ ತಿಳಿಯಬಾರದೆಂದಿದ್ದರು. ಯೇಸುವನ್ನು ಕಳ್ಳನಂತೆ ರಹಸ್ಯವಾಗಿ ಬೇಟೆಯಾಡಿ ಮುಚ್ಕಿಡಲು ಬಯಸಿದರು. ಆದರೆ ಯೂದನು ಅರಿಕೆಯು, ಆತನ ಅಳುಕು ತುಂಬಿದ್ದ, ಕಂಗೆಟ್ಟು ವಿಕಾರವಾದ ಮುಖವು, ಯಾಜಕರಿಗೆ ಯೇಸುವಿನ ಮೇಲಿದ್ದ ಹಗೆಯೇ ಆತನನ್ನು ಹಿಡಿಯಲು ಕಾರಣವಾದದ್ದನ್ನು ಜನರಿಗೆ ತೋರಿಸುತ್ತದೆ ಎಂದು ತಿಳಿದರು. ‘ಯೂದನು ತಪಿಲ್ಲದವನನ್ನು ಮರಣಕ್ಕೆ ಒಪ್ಪಿಸಿ ಪಾಪ ಮಾಡಿದೆನು’ ಎಂದು ಜೋರಾಗಿ ಕೂಗಿದಾಗ - ಅದು ನಮಗೇನು? ನೀನೆ ನೋಡಿಕೊ ಅಂದರು. ಯೇಸು ಅವರ ಹಿಡಿತದಲ್ಲಿದ್ದನು ಮತ್ತು ತಾವು ನೆಡೆಸಿದಂತೆ ಕೊನೆಗಾಣಿಸಲು ನಿರ್ಧರಿಸಿದರು. ಯೂದನು ಬೇಗುದಿಗೊಂಡವನಾಗಿ ತನ್ನನ್ನು ಕೊಂಡುಕೊಂಡವರ ಕಾಲಬುಡದಲ್ಲಿ ಹಣವನ್ನು ಬಿಸಾಟುಬಿಟ್ಟು ಸಂಕಟ ಹಾಗೂ ಭಯಭರಿತನಾಗಿ ಉರ್ಲುಹಾಕಿಕೊಂಡು ಸತ್ತನು. GCKn 69.1

ಆ ಉದ್ರೇಕಗೊಂಡ ಜನರ ಗುಂಪಿನ ಮದ್ಯೆ ಯೇಸುವಿನ ಮೇಲೆ ಅನುಕಂಪವಿದ್ದವರಿಗೆ ಆತನು ಬಹುಪ್ರಶ್ನೆಗಳಿಗೆ ಉತ್ತರಿಸದೆ ಮೌನವಾಗಿದ್ದದ್ದು ಆಶ್ಚರ್ಯ ತಂದಿತು. ಅವರು ಎಲ್ಲಾ ಅಪಮಾನ, ವ್ಯಂಗ್ಯಕ್ಕೆ ಯಾವುದೇ ಅಸಮಾಧಾನ ಅಥವಾ ಸಂಕಟದ ಮುಖಭಾಗವಾಗಲೀ ಅವನಲ್ಲಿ ಕಂಡುಬರಲಿಲ್ಲ. ಆತನು ಗಂಭೀರವಾಗಿ ಸ್ಥಿಮಿತದಿಂದಿದ್ದನು. ಪರಿಪೂರ್ಣ ಉದ್ದಾತ್ತ ಶೀಲಾನಾಗಿದ್ದನು. ವೀಕ್ಷಕರು ಆಶ್ಚರ್ಯದಿಂದ ನೋಡುತ್ತಿದರು. ನ್ಯಾಯವಿಚಾರಣೆ ಮಾಡುತ್ತಿದ್ದವರೊಡನೆ ಈತನ ಪರಿಪೂರ್ಣ ರೂಪ, ದೃಡಚಿತ್ತ, ಗಂಭೀರತೆಯನ್ನು ಹೋಲಿಸಿ ನೋಡಿತ್ತಾ, ಇತರ ಆಡಳಿತ ವರ್ಗದವರಿಗಿಂತ ಈತನು ರಾಜ್ಯಭಾರವನ್ನು ಹೊರಿಸಬಹುದಾದ ಅರಸನಂತೆ ಕಾಣುತ್ತಿರುವನಲ್ಲವೆ? ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು. ಅಪರಾಧಿಯ ಯಾವ ಕುರುಹು ಇವನಲ್ಲಿರಲಿಲ್ಲ. ಆತನ ಕಣ್ಣುಗಳು ಶುದ್ದವಾಗಿ, ಕಳಂಕವಿಲ್ಲದೆ ಶಾಂತವಾಗಿತ್ತು. ಅಗಲವಾದ ಎತ್ತರದ ಹಣೆ, ದಯಾಪರತೆ ಹಾಗೂ ಉದಾತತ್ತೆಯ ಶೇಷ್ಠಸ್ವರೂಪ ಅವನದಾಗಿತ್ತು. ಮಾನವರಲ್ಲಿ ಕಂಡುಬರದ ತಾಳ್ಮೆ ದೀರ್ಘಶಾಂತಿಯಿಂದ ಜನರು ನಡುಗಿದರು. ಈತನ ದೈವತ್ವ ತುಂಬಿದ ಅಸ್ತಿತ್ವದಿಂದ ಹೆರೋದನೂ, ಪಿಲಾತನೂ ಹೆಚ್ಚಾಗಿ ತಳಮಳಗೊಂಡರು. GCKn 70.1

ಯೇಸುವು ಸಾಧಾರಣ ವ್ಯಕ್ತಿಯಲ್ಲ, ಅತ್ಯುನ್ನತ ಗುಣವುಳ್ಳವನೆಂದು ಪಿಲಾತನು ಮೊದಲಿನಿಂದಲೇ ಮನಗಂಡಿದ್ದನು. ಆತನು ಪೂರ್ಣವಾಗಿ ಮುಗ್ದನೆಂದು ನಂಬಿದನು. ಪಿಲಾತನು ಮನಗಂಡಿದನ್ನು, ಯೇಸುವಿನಲ್ಲಿದ್ದ ಅನುಕಂಪ ಮತ್ತು ಕನಿಕರವನ್ನು ನೋಡಿ ದೂತರು ಯೇಸುವನ್ನು ಕ್ರೂಜೆಗೆ ಒಪ್ಪಿಸುವ ಘೋರಕ್ರಿಯೆಯಿಂದ ತಪ್ಪಿಸಲು, ಒಬ್ಬ ದೂತನನ್ನು ಪಿಲಾತನ ಹೆಂಡತಿಯ ಬಳಿಗೆ ಕಳುಹಿಸಿ, ಕನಸಿನ ಮೂಲಕ ಅವಳಿಗೆ ಪಿಲಾತನ ವಿಚಾರನ ಕಾರ್ಯದಲ್ಲಿ ನರಳುತ್ತಿರುವ ಈ ಮುಗ್ದವ್ಯಕ್ತಿಯು ದೇವರ ಮಗನೆಂಬುದನ್ನು ತಿಳಿಸಿದರು. ಆಕೆ ತತ್ ಕ್ಷಣವೇ ಪಿಲಾತನಿಗೆ ವಿಷಯ ಮುಟ್ಟಿಸಿ, ಯೇಸುವಿನ ಪರವಾಗಿ ಕನಸಿನಲ್ಲಿ ಬಹಳ ತೊಂದರೆಗೆ ಒಳಗಾಗಿರುವಳೆಂತಲೂ, ಆ ಪವಿತ್ರ ವ್ಯಕ್ತಿಯ ಗೊಡವೆಗೆ ಹೋಗಬಾರದೆಂದು ಎಚ್ಚರಿಸಿದಳು. ಈ ವಿಷಯವನ್ನು ಹೊತ್ತ ಸಂದೇಶಕನು ಶೀಘ್ರವಾಗಿ ಜನಸಮೂಹದ ಮದ್ಯೆ ಹಾಯ್ದು ಅದನ್ನು ಪಿಲಾತನಿಗೆ ಕೊಟ್ಟನು. ಅದನ್ನು ಓದಿದ್ದೇ ತಡ ಪಿಲಾತನು ನಡುಗಿ ಬಿಳಿಚಿಕೊಂಡನು. ಈ ವಿಷಯದಲ್ಲಿ ತಲೆ ಹಾಕುವುದಿಲ್ಲ ಎಂದು ಯೋಚಿಸಿದ್ದನು; ಯೇಸುವಿನ ರಕ್ತಕ್ಕಾಗಿ ಜನರು ಒತ್ತಾಯಿಸಿದರೂ ತಾನು ಅದಕ್ಕೆ ಸಮ್ಮತಿಸದೆ ಆತನನ್ನು ವಿಮೋಚಿಸಲು ಶ್ರಮವಹಿಸುವೆನೆಂದುಕೊಂಡನು. GCKn 71.1

ಹೆರೋದನು ಯೆರಸಲೇಮಿನಲ್ಲಿರುವನೆಂದು ತಿಳಿದು ಪಿಲಾತನಿಗೆ ಸಂತೋಷವಾಯಿತು. ಯೇಸುವಿನ ಮೇಲೆ ತಪ್ಪು ಹೊರಿಸಲು ಯಾವುದೇ ಕಾರಣವಿಲ್ಲದ ಪ್ರಯುಕ್ತ ಎಲ್ಲಾ ಅಸಮ್ಮತ ವಿಷಯಗಳಿಂದ ದೊರವಿರಲು ಬಯಸಿದನು. ಯೇಸುವಿನೊಂದಿಗೆ ಫಿರ್ಯಾದಿಗಳನ್ನು ಹೆರೋದನ ಬಳಿಗೆ ಕಳುಹಿಸಿದನು. ಹೆರೋದನು ಕಠಿಣ ವ್ಯಕ್ತಿಯಾಗಿದ್ದನು. ಸ್ನಾನಿಕನಾದ ಯೋಹಾನನನ್ನು ಕೊಲ್ಲಿಸಿದ ಕಳಂಕದಿಂದ ಮುಕ್ತನಾಗದ ಅಳುಕು ಮನಸ್ಸಾಕ್ಷಿ ತುಂಬಿದವನಾಗಿದ್ದನು. ಯೇಸುವಿನ ಹಾಗೂ ಆತನ ಅದ್ಬುತ ಕಾರ್ಯಗಳ ಬಗೆಗ್ಗೆ ಕೇಳಿದ್ದು, ಯೋಹಾನನೇ ಯೇಸುವಿನ ರೂಪದಲ್ಲಿ ಹುಟ್ಟಿಬಂದಿದ್ದಾನೆ ಎಂದುಕೊಂಡನು. ಆದ್ದರಿಂದ ಭಯಪಟ್ಟು ನಡುಗಿದನು. ಯೇಸು ಪಿಲಾತನಿಂದ ಹರೋದನ ಕೈಗೆ ವರ್ಗಾಯಿಸಲ್ಪಟ್ಟನು. ಈ ಕಾರ್ಯದಿಂದ ತನ್ನ ಬಲ, ಶಕ್ತಿ, ಅಧಿಕಾರ ಹಾಗೂ ನ್ಯಾಯತೀರ್ಪನ್ನು ಮಾನ್ಯಮಾಡಲಾಗಿದೆ ಎಂಬುವುದು ಹೆರೋದನ ಅನಿಸಿಕೆಯಾಯಿತು. ಈ ಮೊದಲು ಅವರೀರ್ವರೂ ಶತೃಗಳಾಗಿದ್ದರು. ಈ ಘಟನೆಯಿಂದ ಸ್ನೇಹಿತರಾದರು ಯೇಸುವನ್ನು ಕಂಡು ಹೆರೋದನು ಸಂತೋಷಪಟ್ಟನು. ಏಕೆಂದರೆ ಯೇಸು ಯಾವುದಾದರು ಅದ್ಬುತ ಕಾರ್ಯವನ್ನು ಮಾಡಬಹುದೆಂದು ಅವನು ಎದುರು ನೋಡಿದನು. ಇವನ ಕುತೂಹಲವನ್ನು ತಣಿಸುವುದು ಯೇಸುವಿನ ಕಾರ್ಯವಾಗಿರಲಿಲ್ಲ. ಈತನ ದೈವತ್ವದ ಅದ್ಬುತ ಶಕ್ತಿಯನ್ನು ಇತರರ ರಕ್ಷಣೆಗಾಗಿಯೇ ಹೊರೆತು ತನ್ನ ಸ್ವಂತಕ್ಕಾಗಿ ಪ್ರಯೋಗಿಸಬಾರದಾಗಿತ್ತು. GCKn 72.1

ಹೆರೋದನ ಅಸಂಖ್ಯಾತ ಪ್ರಶ್ನೆಗಳಿಗೆ ಯೇಸು ಉತ್ತರಿಸಲಿಲ್ಲ; ಅವೇಶದಿಂದ ದೂರುತ್ತಿದ್ದ ಶತೃವರ್ಗವನ್ನು ಮಾನ್ಯಮಾಡಲಿಲ್ಲ. ಆತನ ಬಲ ಶಕ್ತಿಗಾಗಲೀ, ಸೈನ್ಯಕ್ಕಾಗಲೀ, ಅವರ ಬೈಗುಳ, ವ್ಯಂಗ್ಯಕ್ಕಾಗಲ್ಲಿ ಯೇಸು ಭಯಪಡದೆ ಇದ್ದಾಗ ಹೆರೋದನು ಉದ್ರೇಕಗೊಂಡನು. ಯೇಸುವಿನ ದಿವ್ಯ ಉದಾತ್ತೆ ಸ್ವರೂಪವನ್ನು ಕಂಡ ಹೆರೋದನು ಉದ್ರೇಕಗೊಂಡನು, ಆತನನ್ನು ದೂಷಿಸಲು ಭಯಪಟ್ಟವನಾಗಿ ಮತ್ತೆ ಪಿಲಾತನಿಗೆ ಒಪ್ಪಿಸಿದನು. GCKn 73.1

ಸೈತಾನನೂ ಅತನು ದೂತರೂ ಪಿಲಾತನನ್ನು ಶೋಧನೆಗೊಳಗಾಗಿಸಿ ಅತನ ಸ್ವನಾಶಕ್ಕೆ ನಡೆಸಲು ಪ್ರಯತ್ನಿಸಿದರು. ಅವರು ನೀನಲ್ಲದಿದ್ದರೆ ಮತ್ತೊಬ್ಬರು ಯೇಸುವಿನ ನ್ಯಾಯಕ್ಕೆಳೆಸುವರು ಎಂದರು. ಜನಸಮೂಹವು ರಕ್ತಕ್ಕಾಗಿ ಹಾತೊರೆಯುತ್ತಿದ್ದಾರೆಂದು; ಶಿಲುಬೆಗೆ ಹಾಕಲು ಅವರ ಕೈಗೆ ಒಪ್ಪಿಸಿದಿದ್ದರೆ, ಆತನ ಸ್ಥಾನ ಹಾಗೂ ಲೌಕಿಕ ಗೌರವಕ್ಕೆ ಧಕ್ಕೆ ಬರಬಹುದೆಂದೂ; ಇಲ್ಲದಿದ್ದರೆ ಅವರೇ ಹೇಳಿದಂತೆ ಸೋಗುಗಾರನಲ್ಲಿ ಭರವಸವಿಟ್ಟಿರುವನೆಂದು ತಳ್ಳಿಬಿಡಲಾಗುವುದೆಂದು ಸೈತಾನನ ಗುಂಪು ಸೂಚಿಸಿದರು. ಈ ಭಯದಿಂದ ಯೇಸುವಿನ ಮರಣಕ್ಕೆ ಒಪ್ಪಿಗೆ ಕೊಟ್ಟನು. ಆದ್ದರಿಂದ ದೊಷಿಸಿದವರ ಮೇಲೆ ಯೇಸುವಿನ ರಕ್ತದ ಹೊಣೆ ಹೊರಿಸಿದರು. ಜನರು, ಅತನ ರಕ್ತಕ್ಕೆ ಅವರೂ ಅವರ ಮಕ್ಕಳೂ ಹೊಣಿಯಾಗುತ್ತೇವೆಂದು ಕೂಗಿದರು. ಆದರೂ ಕ್ರಿಸ್ತನ ರಕ್ತದ ಅಳುಕು ಅವನಲ್ಲಿದ್ದ ಕಾರಣ ಪಿಲಾತನು ಮುಕ್ತನಾಗಲಿಲ್ಲ. ತನ್ನ ಸ್ಥಾನಮಾನದ ಆಕರ್ಷಣೆಯಿಂದಲೂ, ಈ ಲೋಕದ ಮಹಾಜನರಿಂದ ಮರ್ಯಾದೆ ಪಡೆದುಕೊಳ್ಳುವ ಸಲುವಾಗಿ ಒರ್ವ ಮುಗ್ದ ತಪ್ಪಿಲ್ಲದವನನ್ನು ಮರಣಕ್ಕೆ ಒಪ್ಪಿಸಿದನು. ಒಂದುವೇಳೆ ಪಿಲಾತನು ತನ್ನ ಮನಃಸಾಕ್ಷಿಗೆ ಒಳಗಾಗಿದ್ದಲ್ಲಿ ಯೇಸುವಿನ ತೀರ್ಪಿನಲ್ಲಿ ಪಾಲುಗಾರನಾಗುತ್ತಿರಲಿಲ್ಲ. GCKn 73.2

ಯೇಸುವಿನ ವಿಚಾರಣೆ ಮತ್ತು ತೀರ್ಪು ಹಲವರ ಮನಸ್ಸಿನ ಮೇಲೆ ಪರಿಣಾಮ ಬೀರಿತು. ಆದರ ಪ್ರಭಾವ ಆತನ ಪುನುರುತ್ಥಾನದ ನಂತರ ಪ್ರಕಟಗೊಳ್ಳುವುದಾಗಿತ್ತು; ಯೇಸುವಿನ ವಿಚಾರಣೆಯ ಕಾಲದಲ್ಲಿದ್ದು ಪ್ರತ್ಯಕ್ಷ ಅನುಭವವಿದರು ಬಹು ಜನರು ಸಭೆಯಾಗಿ ಸೇರುತ್ತಿದ್ದರು. ಸೈತಾನನು, ಮಹಾಯಾಜಕರ ಮುಖಾಂತರ ಕ್ರಿಯೆಗೊಂಡು ಕ್ರೂರತ್ವವೆಲ್ಲಾ ಯೇಸುವನ್ನು ಗುಣಗುಟ್ಟುವಂತೆ ಮಾಡಲಾಗಲಿಲ್ಲವಲ್ಲಾ ಎಂದು ಬಹು ಕೋಪಗೊಂಡನು. ಯೇಸುವು ಮಾನವ ಸ್ವಭಾವ ಹೊಂದಿದ್ದರೂ ದಿವ್ಯಶಕ್ತಿಯು ಕೋಟೆಯೋಪಾದಿಯಲ್ಲಿದ್ದು ಯಾವ ಕಿರು ಶೋಧನೆಯು ಅತನನ್ನು ತಂದೆಯ ಚಿತ್ತದಿಂದ ಬೇರ್ಪಡಿಸಲಾಗದುದನ್ನು ನಾನು ಕಂಡೆನು. GCKn 74.1

ನೋಡಿ: ಮತ್ತಾಯ 26:57-75; 27:1-31; ಮಾರ್ಕ 14:53-72; 15:1-20; ಲೂಕ 22:47-71; 23:1-25; ಯೋಹಾನ 18; 19:1-16. GCKn 75.1