Go to full page →

ದೇವಜನರು ಬಿಡುಗಡೆ ಹೊಂದುವರು ಕೊಕಾಘ 157

ಸೈತಾನನ ದೂತರು ಮತ್ತು ಲೋಕದ ದುಷ್ಟರು ನೀತಿವಂತರನ್ನು ಸುತ್ತುಗಟ್ಟಿಕೊಂಡು ಅವರನ್ನು ನಾಶಮಾಡಬಹುದೆಂದು ಅಟ್ಟಹಾಸದಿಂದ ಉನ್ಮತ್ತರಾಗಿರುವರು. ಯಾಕೆಂದರೆ ದೇವಜನರಿಗೆ ತಪ್ಪಿಸಿಕೊಳ್ಳಲು ಯಾವುದೇ ದಾರಿಯಿರುವುದಿಲ್ಲ. ಆದರೆ ದುಷ್ಟರ ಅಟ್ಟಹಾಸದ ವಿಜಯದ ನಗುವಿನ ನಡುವೆ ಗುಡುಗಿನ ಮಹಾಶಬ್ದವು, ಆರ್ಭಟದಂತೆ ಮೊಳಗುವುದು, ಆಕಾಶವು ದಟ್ಟವಾದ ಮೋಡದಿಂದ ಕಾರ್ಗತ್ತಲಿನಂತೆ ಕಪ್ಪಾಗುವುದು, ಕಣ್ಣು ಕೋರೈಸುವ ಬೆಳಕು ಹಾಗೂ ಪರಲೋಕದ ಮಹಾಭಯಂಕರವಾದ ಮಹಿಮೆಯಿಂದ ದೇವರು ತನ್ನ ಪರಿಶುದ್ಧ ಸ್ಥಳದಿಂದ ಮಹಾಶಬ್ದದಿಂದ ಮಾತಾಡುವಾಗ, ಆಕಾಶವು ಝಗಮಗಿಸುವುದು. ಕೊಕಾಘ 157.3

ಭೂಮಿಯ ಅಸ್ತಿವಾರಗಳು ಕದಲುವವು, ಲೋಕದ ಅತಿ ಎತ್ತರವಾದ ಕಟ್ಟಡಗಳೂ ಸೇರಿದಂತೆ, ಎಲ್ಲವೂ ನೆಲಸಮವಾಗುವವು. ಸಮುದ್ರವು ಮಣ್ಣಿನ ಮಡಿಕೆಯಂತೆ ಕುದಿಯುವುದು ಹಾಗೂ ಸಮಸ್ತ ಲೋಕದಲ್ಲಿ ಭಯಂಕರವಾದ ಕೋಲಾಹಲ ಉಂಟಾಗುವುದು. ನೀತಿವಂತರ ಸೆರೆವಾಸ ಮುಕ್ತಾಯವಾಗಿ ಅವರೆಲ್ಲರೂ ಒಟ್ಟಾಗಿ ಮಧುರವಾದ ಹಾಗೂ ಗಂಭೀರವಾದ ಮೇಲುಸ್ತರದಲ್ಲಿ ಒಬ್ಬರಿಗೊಬ್ಬರು ‘ನಮಗೆ ಬಿಡುಗಡೆಯಾಯಿತು, ಇದು ದೇವರ ಸ್ವರ ಎಂದು ಹೇಳುವರು (ಟೆಸ್ಟಿಮೊನೀಸ್‌ ಸಂಪುಟ 1, ಪುಟ 353, 354). ಕೊಕಾಘ 157.4

ಸೆರೆಮನೆಯಲ್ಲಿ ಬೆಟ್ಟಗುಡ್ಡಗಳು, ಗುಹೆಗಳಲ್ಲಿ ಮರೆಯಾಗಿ ಜೀವಿಸುತ್ತಿರುವ ದೇವರ ಮಕ್ಕಳು ದೈವೀಕ ರಕ್ಷಣೆಗಾಗಿ ಇನ್ನೂ ಮೊರೆಯಿಡುತ್ತಿರುವರು. ಕೆಟ್ಟವರು ಶಸ್ತ್ರಸಜ್ಜಿತರಾಗಿ, ಸೈತಾನನಿಂದ ಪ್ರೇರಿತವಾಗಿ ದೇವಜನರನ್ನು ಕೊಲ್ಲಬೇಕೆಂದು ಸಿದ್ದರಾಗುವರು. ಇವರು ಆರ್ಭಟಿಸುತ್ತಾ, ಕೂಗಾಡುತ್ತಾ ಭಕ್ತರ ಮೇಲೆ ದಾಳಿ ಮಾಡಬೇಕೆಂದು ಕೋಪದಿಂದ ಕುದಿಯುತ್ತಾ ಬರುವಾಗ, ರಾತ್ರಿಯ ಕತ್ತಲೆಗಿಂತಲೂ ದಟ್ಟವಾದ ಕತ್ತಲೆಯು ಲೋಕದಲ್ಲಿ ಕಂಡುಬರುವುದು. ಕೊಕಾಘ 157.5

ದೇವರು ಮಧ್ಯರಾತ್ರಿಯಲ್ಲಿ ತನ್ನ ಜನರನ್ನು ಬಿಡಿಸಲು ತನ್ನ ಪರಾಕ್ರಮ ತೋರಿಸುವನು... ಆಕಾಶದ ದಟ್ಟವಾದ ಕಾರ್ಮೋಡಗಳ ನಡುವಿನಿಂದ ವರ್ಣಿಸಲಾಗದಂತ ವೈಭವದ ಒಂದು ನಿರ್ದಿಷ್ಟವಾದ ಸ್ಥಳದಿಂದ “ಆಯಿತು’ ಎಂಬ ಜಲಪ್ರವಾಹದ ಘೋಷದಂತಿರುವ ದೇವರ ಶಬ್ದವು ಕೇಳಿಸುವುದು (ಪ್ರಕಟನೆ 16:17). ಆ ಮಹಾಶಬ್ದದಿಂದ ಭೂಮಿ ಮತ್ತು ಆಕಾಶಗಳು ಕದಲುವವು... ಕೊಕಾಘ 157.6

ಜಗತ್ತಿನ ಮಹಾದುಷ್ಟ ನಗರಗಳು ನೆಲಸಮವಾಗುವವು. ತಮ್ಮ ವೈಭವ ತೋರಿಸುವುದಕ್ಕಾಗಿ ಮಹಾನ್ ವ್ಯಕ್ತಿಗಳು ಅಪಾರ ಸಂಪತ್ತನ್ನು ವಿನಿಯೋಗಿಸಿ ಕಟ್ಟಿರುವ ಭವ್ಯವಾದ ಅರಮನೆಗಳು ಅವರ ಕಣ್ಣೆದುರಿಗೆ ಬೀಳುವವು. ಸೆರೆಮನೆಯ ಗೋಡೆಗಳು ಬಿದ್ದುಹೋಗಿ, ತಮ್ಮ ನಂಬಿಕೆಗಾಗಿ ಅಲ್ಲಿ ದಾಸ್ಯದಲ್ಲಿದ್ದ ದೇವಜನರು ಬಿಡುಗಡೆಯಾಗುವರು (ಗ್ರೇಟ್ ಕಾಂಟ್ರೊವರ್ಸಿ, 635-637). ಕೊಕಾಘ 158.1

*****