ನನ್ನ ಪ್ರಿಯ ಯುವಕ,ಯುವತಿಯರೇ, ನೀವು ಬಿತ್ತಿದ್ದನ್ನೇ ನೀವು ಕೊಯ್ಯಬೇಕು. ಈಗ ನೀವು ಬಿತ್ತುವಸಮಯ. ಆದರೆ ಯಾವುದನ್ನು ನೀವು ಬಿತ್ತುವಿರಿ? ಅದರಿಂದ ಬರುವ ಫಸಲು ಯಾವುದು? ನೀವು ಮಾತಾಡುವ ಪ್ರತಿಯೊಂದು ಮಾತು, ಮಾಡುವ ಪ್ರತಿಯೊಂದು ಕಾರ್ಯವು ಒಂದು ಬೀಜವಾಗಿದ್ದು, ಅದು ಒಳ್ಳೆಯ ಅಥವಾ ಕೆಟ್ಟ ಫಲ ಬಿಡುತ್ತದೆ. ಇದು ಬಿತ್ತುವವನಿಗೆ ದುಃಖ ಅಥವಾ ಸಂತೋಷದ ಬೆಳೆ ತರುತ್ತದೆ. ಬೀಜ ಬಿತ್ತಿದಂತೆಯೇ ಬೆಳೆಯೂ ಇರುವುದು. ದೇವರು ನಿಮಗೆ ದೊಡ್ಡಬೆಳಕನ್ನು ಮತ್ತು ವಿಶೇಷವಾದ ಅನೇಕ ಸೌಲಭ್ಯಗಳನ್ನು ಕೊಟ್ಟಿದ್ದಾನೆ. ಈ ಬೆಳಕು ಕೊಟ್ಟ ನಂತರ, ನಿಮಗಿರುವ ಅಪಾಯಗಳು ನಿಮ್ಮಮುಂದೆ ಸ್ಪಷ್ಟವಾಗಿ ತೋರಿಸಲ್ಪಟ್ಟ ಮೇಲೆ, ಜವಾಬ್ದಾರಿಯು ನಿಮ್ಮಮೇಲಿದೆ. ದೇವರು ನಿಮಗೆ ಕೊಡುವ ಬೆಳಕನ್ನು ನೀವು ಹೇಗೆ ಪರಿಗಣಿಸುತ್ತೀರಿ ಎಂಬುದರಮೇಲೆ ನಿಮಗೆ ಸಂತೋಷ ಅಥವಾ ದುಃಖವುಂಟಾಗುತ್ತದೆ. ನಿಮ್ಮ ಸಂಕಲ್ಪವನ್ನು ನೀವೇ ನಿರ್ಧರಿಸುವಿರಿ. KanCCh 218.1
ನೀವೆಲ್ಲರೂ ಸಹ ಇತರರ ಮನಸ್ಸು ಹಾಗೂ ಸ್ವಭಾವಗಳ ಮೇಲೆ ಒಳ್ಳೆಯದಕ್ಕೋ ಅಥವಾ ಕೆಟ್ಟದ್ದಕ್ಕೂ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿರುವಿರಿ. ನೀವು ಬೀರುವ ಪರಿಣಾಮವು ಪರಲೋಕದ ಪುಸ್ತಕದಲ್ಲಿ ಬರೆದಿರುವುದು. ಒಬ್ಬ ದೇವದೂತನು ನಿಮ್ಮ ಜೊತೆಯಲ್ಲಿದ್ದು ನಿಮ್ಮ ಮಾತುಗಳು ಮತ್ತು ಕ್ರಿಯೆಗಳನ್ನು ಬರೆದಿಡುತ್ತಾನೆ. ನೀವು ಬೆಳಿಗ್ಗೆ ಹಾಸಿಗೆ ಬಿಟ್ಟು ಎದ್ದಾಗ, ಯುವಕ ಯುವತಿಯರೇ, ನಿಮಗೆ ಅಸಹಾಯಕತೆಯ ಭಾವನೆ ಉಂಟಾಗಿ, ದೇವರ ಬಲದ ಅಗತ್ಯವಿದೆ ಎಂದು ಎನಿಸುವುದೇ? ನೀವು ನಮ್ರತೆಯಿಂದಲೂ ಹಾಗೂ ಮನಃಪೂರ್ವಕವಾಗಿ ನಿಮ್ಮೆಲ್ಲಾ ಬೇಡಿಕೆಗಳನ್ನು ಪರಲೋಕದ ತಂದೆಯ ಮುಂದೆ ತಿಳಿಸುವಿರಾ? ಹಾಗಿದ್ದಲ್ಲಿ, ದೇವದೂತರು ನಿಮ್ಮ ಪ್ರಾರ್ಥನೆಯನ್ನು ಪರಿಶೀಲಿಸುತ್ತಾರೆ. ನಿಮ್ಮ ಪ್ರಾರ್ಥನೆಯಲ್ಲಿ ಕಪಟತನ ಅಥವಾ ಬೂಟಾಟಿಕೆ ಇಲ್ಲದಿದ್ದಾಗ, ನೀವು ತಿಳಿಯದೆ ತಪ್ಪು ಮಾಡುವ ಹಾಗೂ ಇತರರಿಗೂ ತಪ್ಪು ಮಾಡುವಂತೆ ಪ್ರೇರಿಸುವ ಅಪಾಯದಲ್ಲಿದ್ದಾಗ, ದೇವದೂತನು ನಿಮ್ಮ ಬಳಿಯಲ್ಲಿದ್ದು, ನೀವು ಆ ಮಾರ್ಗವನ್ನು ಬಿಡುವಂತೆ ಮಾಡುತ್ತಾನೆ. ಅಲ್ಲದೆ ನಿಮ್ಮ ಮಾತುಗಳಿಗೂ ಹಾಗೂ ಕಾರ್ಯಗಳಿಗೂ ಮಾರ್ಗದರ್ಶನ ನೀಡುವನು. KanCCh 218.2
ನಮಗೆ ಯಾವುದೇ ಅಪಾಯವಿಲ್ಲವೆಂದು ನೀವು ಭಾವಿಸಿ, ಶೋಧನೆಗಳನ್ನು ಎದುರಿಸಲು ಬೇಕಾದ ಬಲ ಹಾಗೂ ಸಹಾಯಕ್ಕಾಗಿ ದೇವರಿಗೆ ಪ್ರಾರ್ಥಿಸದಿದ್ದಲ್ಲಿ, ನೀವು ಖಂಡಿತವಾಗಿಯೂ ಕೆಟ್ಟ ಮಾರ್ಗ ಹಿಡಿಯುವಿರಿ. ನಿಮ್ಮ ಕರ್ತವ್ಯದಲ್ಲಿ ನೀವು ತೋರಿದ ನಿರ್ಲಕ್ಷವನ್ನು ಪರಲೋಕದ ದೇವರ ಪುಸ್ತಕದಲ್ಲಿ ದೇವದೂತನು ಬರೆಯುವನು ಮತ್ತು ಶೋಧನೆ ಉಂಟಾದಾಗ ಅದನ್ನು ಎದುರಿಸಲು ಸಹಾಯವಿಲ್ಲದೆ ಬಿದ್ದು ಹೋಗುವಿರಿ. KanCCh 218.3
ಯುವಕ, ಯುವತಿಯರೇ ನಿಮ್ಮ ಗೆಳೆಯ, ಗೆಳತಿಯರಲ್ಲಿ ಕೆಲವರು ಸತ್ಯವೇದದ ವಾಕ್ಯದ ಪ್ರಕಾರ ನಡೆಯುವವರು ಇರಬಹುದು. ಬೇರೆ ಕೆಲವರು ನಿಜಜೀವನದಲ್ಲಿ ಆತ್ಮಿಕವಾಗಿ ನಾಶವಾಗಿರುವವರೂ ಇರುವರು. ಅಂತವರು ಜೀವನದಲ್ಲಿ ಏನೂ ಪ್ರಯೋಜನಕ್ಕೆ ಬಾರದವರಾಗಿದ್ದಾರೆ. ಈ ಲೋಕದಲ್ಲಿಯೇ ಅವರು ನಿಷ್ಟಯೋಜಕರಾಗಿದ್ದಲ್ಲಿ, ನಿರ್ಮಲತ್ವ, ಪರಿಶುದ್ಧತೆ ಹಾಗೂ ಸಾಮರಸ್ಯ ತುಂಬಿರುವ ಪರಲೋಕವನ್ನು ಅವರು ಹೇಗೆ ನಿರೀಕ್ಷಿಸಬಹುದು? ಇಂತಹ ಅನೇಕ ವ್ಯಕ್ತಿಗಳ ಬಗ್ಗೆ ಶ್ರೀಮತಿ ವೈಟಮ್ಮನವರು ಪ್ರಾರ್ಥಿಸಿದ್ದಾರೆ ಹಾಗೂ ವೈಯಕ್ತಿಕವಾಗಿ ಭೇಟಿ ಮಾಡಿ ಬುದ್ಧಿವಾದ ಹೇಳಿದ್ದಾರೆ. ಇಂತವರು ಇತರರ ಮೇಲೆ ಪ್ರಭಾವ ಬೀರಿ ಅವರನ್ನೂ ಸಹ ನಿತ್ಯಜೀವದ ಮಾರ್ಗದಿಂದ ತಪ್ಪಿಸಿ ಲೌಕಿಕ ಆಕರ್ಷಣೆಯ ಕಡೆಗೆ ಸೆಳೆಯುವರು. ಇವರು ತಮ್ಮ ಕೆಟ್ಟ ಮಾರ್ಗವನ್ನು ಬಿಟ್ಟು ಅಹಂಕಾರದ ಹೃದಯಗಳನ್ನು ದೇವರ ಮುಂದೆ ತಗ್ಗಿಸಿಕೊಂಡು, ಪಾಪಗಳನ್ನು ಒಪ್ಪಿ ಅರಿಕೆ ಮಾಡಿ ಮಾನಸಾಂತರಪಟ್ಟು ಬದಲಾವಣೆ ಹೊಂದುವುದೇ ಅವರಿಗಿರುವ ಏಕೈಕ ನಿರೀಕ್ಷೆಯಾಗಿದೆ. KanCCh 219.1