ಇಂದಿನ ಕಾಲದಲ್ಲಿ ಪೋಷಕರು ಮಕ್ಕಳಿಗೆ ಯಥೋಚಿತವಾದ ಹಾಗೂ ಯೋಗ್ಯವಾದ ಶಿಸ್ತು ಕಲಿಸುವುದಕ್ಕೆ ಬದಲಾಗಿ, ಅವರ ಮನಸ್ಸಿನಂತೆ ನಡೆಯಲು ಬಿಡುತ್ತಿದ್ದಾರೆ. ಬಾಲ್ಯದಲ್ಲಿ ಮಕ್ಕಳು ಒರಟಾಗಿ ಬೆಳೆಯುತ್ತಿದ್ದಲ್ಲಿ 16-20 ವರ್ಷ ವಯಸ್ಸಾದಾಗ ಅವರಿಗೆ ವಿವೇಚನೆ ಬಂದು ತಮ್ಮ ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಒಳ್ಳೆಯವರಾಗುತ್ತಾರೆಂದು ತಂದೆ-ತಾಯಿಯರು ಹೇಳುತ್ತಾರೆ. ಇದು ಎಂತಹ ದೊಡ್ಡ ತಪ್ಪಾಗಿದೆ ಗೊತ್ತೇ? ಅನೇಕ ವರ್ಷಗಳ ಕಾಲ ಸೈತಾನನೆಂಬ ವೈರಿಯು ಯೌವನಸ್ಥರ ಹೃದಯವೆಂಬ ತೋಟದಲ್ಲಿ ಕೆಟ್ಟಬೀಜಗಳನ್ನು ಬಿತ್ತುವುದಕ್ಕೆ ತಂದೆತಾಯಿಯರು ಅನುಮತಿ ನೀಡುವುದರಿಂದ, ಮಕ್ಕಳಲ್ಲಿ ಆಗಿನಿಂದಲೇ ಕೆಟ್ಟಮಾದರಿ ಹಿಡಿಯುವುದಕ್ಕೆ ಕಾರಣವಾಗುತ್ತಾರೆ. ಮುಂದೆ ಆ ಬೀಜವು ಮೊಳೆತು ಕೆಟ್ಟಫಲವನ್ನೇ ಕೊಡುತ್ತದೆ. KanCCh 227.1
ಸೈತಾನನು ಒಬ್ಬ ಕುಶಲವಾದ ನಯವಂಚಕನಾಗಿದ್ದು, ಮಾರಣಾಂತಿಕವಾದ ವೈರಿಯಾಗಿದ್ದಾನೆ. ಯೌವನಸ್ಥರಿಗೆ ಹೊಗಳಿಕೆಗೋ ಅಥವಾ ಪಾಪವು ಅಷ್ಟೊಂದು ಜಿಗುಪ್ಪೆ ತರುವಂತ ವಿಷಯವಲ್ಲವೆಂಬ ಅಜಾಗರೂಕತೆಯ ಮಾತುಗಳನ್ನು ಹೇಳಿದಾಗ, ಸೈತಾನನು ಅದರ ಪ್ರಯೋಜನ ಪಡೆದುಕೊಳ್ಳುತ್ತಾನೆ. ಅಲ್ಲದೆ ಆ ಕೆಟ್ಟಬೀಜವು ಬೇರೂರಿ ಸಮೃದ್ಧವಾದ ಕೆಟ್ಟಫಲ ಕೊಡುವಂತೆ ಅದನ್ನು ಪೋಷಿಸುತ್ತಾನೆ. ಕೆಲವು ತಂದೆ-ತಾಯಿಯರು ತಮ್ಮ ಮಕ್ಕಳು ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದಕ್ಕೆ ಮೌನವಾಗಿ ಸಮ್ಮತಿ ನೀಡುವುದರಿಂದ, ಅದರ ಪರಿಣಾಮವು ಜೀವಮಾನದಾದ್ಯಂತ ಅವರಲ್ಲಿ ಕಂಡುಬರುತ್ತದೆ. ಇಂತಹ ಮಕ್ಕಳು ಹೆಸರಿಗೆ ಕ್ರೈಸ್ತರೆಂದು ಹೇಳಿಕೊಳ್ಳಬಹುದು. ಆದರೆ ಅವರ ಹೃದಯದಲ್ಲಿ ದೇವರ ವಿಶೇಷ ಕೃಪೆಯ ಕಾರ್ಯವಾಗಲಿ ಹಾಗೂ ಜೀವನದಲ್ಲಿ ಸಂಪೂರ್ಣ ಧಾರ್ಮಿಕ ಸುಧಾರಣೆಯಾಗಲಿ ಕಂಡುಬರುವುದಿಲ್ಲ. ತಂದೆ ತಾಯಿಗಳು ಬಾಲ್ಯದಲ್ಲಿ ಮೌನ ಸಮ್ಮತಿಕೊಡುವುದರ ಮೂಲಕ ಮಕ್ಕಳಲ್ಲಿ ಕಂಡುಬಂದ ಕೆಟ್ಟ ಅಭ್ಯಾಸಗಳು ಅವರ ಗುಣನಡತೆಯಲ್ಲಿಯೂ ತೋರಿಬರುತ್ತವೆ. KanCCh 227.2
ತಂದೆ ತಾಯಿಯರು ತಮ್ಮ ಮಕ್ಕಳನ್ನು ಅಂಕೆಮೀರದಂತೆ ದೇವರ ಭಯ ಭಕ್ತಿಯಲ್ಲಿ ಬೆಳೆಸಬೇಕು, ಅವರ ಬಲವಾದ ಮನೋವಿಕಾರಗಳನ್ನು ತಿದ್ದಿ ಸರಿಪಡಿಸಬೇಕು ಮತ್ತು ಅವರನ್ನು ತಮ್ಮ ಅಧೀನದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ, ದೇವರು ತನ್ನ ತೀಕ್ಷ್ಮವಾದ ಕೋಪದ ದಿನದಲ್ಲಿ ಅವರನ್ನು ನಾಶ ಮಾಡುತ್ತಾನೆ. ಇದಕ್ಕೆ, ತಂದೆ-ತಾಯಿಯರೇ ಹೊಣೆಗಾರರಾಗುತ್ತಾರೆ. ಅದರಲ್ಲೂ ವಿಶೇಷವಾಗಿ ದೇವರ ಸೇವೆಮಾಡುವವರು ತಮ್ಮ ಕುಟುಂಬವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿ ಎಲ್ಲರನ್ನೂ ಪ್ರೀತಿಯಿಂದ ಅಧೀನದಲ್ಲಿಟ್ಟುಕೊಳ್ಳಬೇಕು. ಸ್ವಂತ ಮನೆಯನ್ನು ಆಳುವುದಕ್ಕೆ ತಿಳಿಯದವನು. ದೇವರಸಭೆಯನ್ನು ಹೇಗೆ ಪರಾಂಬರಿಸುವನು? ಎಂದು ಪೌಲನು ಹೇಳುತ್ತಾನೆ (1) ತಿಮೊಥೆ 3:4,5). ತಂದೆ ತಾಯಿಯರು ಮೊದಲು ತಮ್ಮ ಮನೆಯನ್ನು ಸರಿಯಾದ ರೀತಿಯಲ್ಲಿ ಆಳಬೇಕು. ಆಗ ಅವರ ಪ್ರಭಾವವು ಸಭೆಯಲ್ಲಿ ಪರಿಣಾಮ ಉಂಟುಮಾಡುತ್ತದೆ. KanCCh 227.3
ರಾತ್ರಿಯಲ್ಲಿ ಮಗನು ಅಥವಾ ಮಗಳು ಮನೆಯಿಂದ ಹೊರಗಿದ್ದಲ್ಲಿ. ತಂದೆ ತಾಯಿಯರು ಅದಕ್ಕೆ ಕಾರಣವನ್ನು ಕೇಳಬೇಕು. ಅವರ ಸ್ನೇಹಿತರು ಯಾರು ಮತ್ತು ಯಾರ ಮನೆಯಲ್ಲಿ ರಾತ್ರಿ ಕಳೆದರೆಂದು ಪೋಷಕರು ತಿಳಿದುಕೊಳ್ಳಬೇಕು. ಮಕ್ಕಳೊಂದಿಗೆ ಹೇಗೆ ವ್ಯವಹರಿಸಬೇಕು ಹಾಗೂ ಅವರನ್ನು ಹೇಗೆ ಬೆಳೆಸಬೇಕೆಂಬ ವಿಷಯದಲ್ಲಿ ಕರ್ತನಾದ ದೇವರು ಕೊಟ್ಟ ಸಲಹೆ ಸೂಚನೆ, ಬುದ್ಧಿವಾದಗಳು ಮಾನವರ ಸಿದ್ಧಾಂತಗಳಿಗಿಂತ ಅತಿ ಶ್ರೇಷ್ಟವಾಗಿವೆ. ಮಕ್ಕಳ ಅಗತ್ಯಗಳನ್ನು ಅವರ ಸೃಷ್ಟಿಕರ್ತನಿಗಿಂತ ಮತ್ತಾರು ಉತ್ತಮವಾಗಿ ತಿಳಿದುಕೊಳ್ಳಬಲ್ಲರು? ತನ್ನ ಸ್ವಂತ ರಕ್ತದಿಂದ ಅವರನ್ನು ಕ್ರಯಕ್ಕೆ ಕೊಂಡುಕೊಂಡ ಕ್ರಿಸ್ತನಿಗಿಂತ ಇನ್ನಾರು ಯೌವನಸ್ಥರ ಯೋಗಕ್ಷೇಮದ ಬಗ್ಗೆ ತೀವ್ರವಾದ ಆಸಕ್ತಿ ಹೊಂದಿದ್ದಾರೆ? ದೇವರ ವಾಕ್ಯವನ್ನು ಯುವಕ, ಯುವತಿಯರು ಎಚ್ಚರಿಕೆಯಿಂದ ಅಧ್ಯಯನ ಮಾಡಿ, ಪ್ರಾಮಾಣಿಕವಾಗಿ ವಿಧೇಯರಾದಲ್ಲಿ, ಅವರು ದೇವರಮಾರ್ಗವನ್ನು ಬಿಟ್ಟು ದೂರಹೋಗುವುದಿಲ್ಲ. KanCCh 228.1
ಮಕ್ಕಳಿಗೆ ತಮ್ಮದೇ ಆದ ಹಕ್ಕುಬಾಧ್ಯತೆಗಳಿದ್ದು, ತಂದೆ-ತಾಯಿಯರು ಅವುಗಳನ್ನು ಅರಿತುಕೊಂಡು ಗೌರವಿಸಬೇಕು. ಅವರು ಸಮಾಜಕ್ಕೆ ಉಪಯುಕ್ತವಾಗುವಂತ ಮತ್ತು ಪರಲೋಕದಲ್ಲಿ ನಿರ್ಮಲರಾಗಿಯೂ, ಪರಿಶುದ್ಧರಾಗಿಯೂ ದೇವರ ಮುಂದೆ ಕಾಣಿಸಿಕೊಳ್ಳುವಂತ ರೀತಿಯ ಶಿಕ್ಷಣ ಹಾಗೂ ತರಬೇತಿ ಪಡೆದುಕೊಳ್ಳುವ ಹಕ್ಕುಬಾಧ್ಯತೆ ಹೊಂದಿದ್ದಾರೆ. ಯೌವನಸ್ಥರ ಇಂದಿನ ಮತ್ತು ಮುಂದಿನ ಯೋಗಕ್ಷೇಮವು ಅವರು ಬಾಲ್ಯದಲ್ಲಿಯೂ ಹಾಗೂ ಯೌವನದಲ್ಲಿಯೂ ರೂಪಿಸಿಕೊಳ್ಳುವ ಅಭ್ಯಾಸಗಳ ಮೇಲೆ ಬಹಳಷ್ಟು ಮಟ್ಟಿಗೆ ಆಧಾರಗೊಂಡಿದೆ ಎಂದು ಯುವಕಯುವತಿಯರಿಗೆ ಮನವರಿಕೆ ಮಾಡಬೇಕು. KanCCh 228.2
ಸತ್ಯವೇದಕ್ಕೆ ಬಹಳಷ್ಟು ಗೌರವನೀಡಿ ಅದರ ಉಪದೇಶಗಳನ್ನು ಅನುಸರಿಸುತ್ತೇವೆಂದು ಹೇಳಿಕೊಳ್ಳುವ ಅನೇಕ ಸ್ತ್ರೀಪುರುಷರು ಅವರ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಅನೇಕ ವಿಧವಾಗಿ ವಿಫಲರಾಗುತ್ತಾರೆ. ಮಕ್ಕಳಿಗೆ ಉತ್ತಮ ಗುಣನಡತೆಯ ತರಬೇತಿ ನೀಡುವಾಗ ದೇವರ ವಾಕ್ಯದಲ್ಲಿ ತಿಳಿಸಲ್ಪಟ್ಟಿರುವ ಆತನ ಚಿತ್ರಕ್ಕೆ ಬದಲಾಗಿ ತಮ್ಮದೇಆದ ಮೂರ್ಖತನದ, ಹಠಮಾರಿತನದ ಸ್ವಭಾವಗಳನ್ನು ಅನುಸರಿಸುತ್ತಾರೆ. ತಂದೆ-ತಾಯಿಯರ ಈ ಕರ್ತವ್ಯ ನಿರ್ವಹಣೆಯ ವೈಫಲ್ಯದಿಂದಾಗಿ ಸಾವಿರಾರುಮಕ್ಕಳು ನಿತ್ಯಜೀವಹೊಂದದೆ ನಾಶವಾಗುತ್ತಾರೆ. ಮಕ್ಕಳನ್ನು ಯಾವ ರೀತಿ ಉತ್ತಮವಾದ ಶಿಸ್ತಿನಿಂದ ಬೆಳೆಸಬೇಕೆಂದು ಸತ್ಯವೇದದಲ್ಲಿ ನಿಯಮಗಳಿವೆ. ತಂದೆ-ತಾಯಿಗಳು ದೇವರ ಈ ಎಚ್ಚರಿಕೆಗಳನ್ನು ಗಮನಿಸಿದಲ್ಲಿ, ಉತ್ತಮವಾದ ಗುಣಸ್ವಭಾವ ಬೆಳೆಸಿಕೊಂಡಿರುವ ವಿಶೇಷ ರೀತಿಯ ಯೌವನಸ್ಥರನ್ನು ನಾವು ಇಂದು ನೋಡಬಹುದಾಗಿತ್ತು. ಆದರೆ ಸತ್ಯವೇದವನ್ನು ಓದುವವರೂ, ಅದರಂತೆ ನಡೆಯುವವರೂ ಆಗಿದ್ದೇವೆಂದು ಹೇಳಿಕೊಳ್ಳುವ ತಂದೆ- ತಾಯಿಯರು ಈಗ ಅದರ ಬೋಧನೆಗೆ ಸಂಪೂರ್ಣ ವಿರೋಧವಾಗಿ ಹೋಗುತ್ತಿದ್ದಾರೆ. ತಮ್ಮ ಮಕ್ಕಳು ಒಳ್ಳೆಯದಾರಿ ಬಿಟ್ಟು ಕೆಟ್ಟದಾರಿ ಹಿಡಿದು ಹಾಳಾಗಿದ್ದಾರೆಂದು ತಂದೆ- ತಾಯಿಯರು ದುಃಖದಿಂದ ಕಣ್ಣೀರಿಡುವುದನ್ನು ನಾವು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಆದರೆ ಮಕ್ಕಳನ್ನು ಅತಿಯಾಗಿ ಮುದ್ದಿಸಿ, ಅವರ ತಪ್ಪುಗಳನ್ನು ಬಾಲ್ಯದಲ್ಲಿಯೇ ತಿದ್ದಿ ಸರಿಪಡಿಸದೇ, ತಾವೇ ಅವರನ್ನು ನಾಶಮಾಡಿದೆವೆಂದು ತಂದೆ-ತಾಯಿಯರು ತಿಳಿದುಕೊಳ್ಳುವುದಿಲ್ಲ. ಬಾಲ್ಯದಿಂದಲೇ ಮಕ್ಕಳಿಗೆ ಒಳ್ಳೆಯ ಅಭ್ಯಾಸಕೊಡುವುದು ದೇವರು ತಮಗೆ ಕೊಟ್ಟ ಜವಾಬ್ದಾರಿಯಾಗಿದೆ ಎಂದು ಅವರು ಅರಿತುಕೊಳ್ಳಲಿಲ್ಲ. KanCCh 228.3
ಕ್ರೈಸ್ತ ಮಕ್ಕಳು ದೈವಭಕ್ತಿಯುಳ್ಳ ತಮ್ಮ ತಂದೆ-ತಾಯಿಯರ ಪ್ರಶಂಸೆ ಹಾಗೂ ಪ್ರೀತಿಯನ್ನು ಇತರೆಲ್ಲಾ ಲೌಕಿಕ ಆಶೀರ್ವಾದಗಳಿಗಿಂತ ಹೆಚ್ಚಾಗಿ ಬಯಸುತ್ತಾರೆ. ಅವರು ತಮ್ಮ ತಂದೆ-ತಾಯಿಯರನ್ನು ಪ್ರೀತಿಸಿ ಗೌರವಿಸುತ್ತಾರೆ. ತಮ್ಮ ಪೋಷಕರನ್ನು ಹೇಗೆ ಸಂತೋಷಪಡಿಸಬೇಕೆಂಬುದು ಮಕ್ಕಳ ಜೀವನದಲ್ಲಿ ಪ್ರಮುಖವಾದ ಗುರಿಯಾಗಿರುತ್ತದೆ. ಈ ಕೆಟ್ಟಕಾಲದಲ್ಲಿ ಸರಿಯಾದ ಶಿಕ್ಷಣ ಹೊಂದಿರದ ಹಾಗೂ ಶಿಸ್ತಿಗೆ ಒಳಪಡದ ಮಕ್ಕಳು ತಮ್ಮ ತಂದೆ-ತಾಯಿಯರಿಗೆ ಮಾಡಬೇಕಾದ ಕರ್ತವ್ಯದ ಬಗ್ಗೆ ತಿಳುವಳಿಕೆ ಹೊಂದಿರುವುದಿಲ್ಲ. KanCCh 229.1
ಮಕ್ಕಳ ಮುಂದಿನ ಸುಖಸಂತೋಷವು ಹೆಚ್ಚುಕಡಿಮೆ ಸಂಪೂರ್ಣವಾಗಿ ತಂದೆ- ತಾಯಿಯರ ಕೈಯಲ್ಲಿದೆ. ಈ ಮಕ್ಕಳ ಗುಣಸ್ವಭಾವ ರೂಪಿಸುವ ಮುಖ್ಯಕರ್ತವ್ಯವು ಅವರದಾಗಿದೆ. ಮಕ್ಕಳಿಗೆ ಬಾಲ್ಯದಲ್ಲಿ ನೀಡಿದ ಶಿಕ್ಷಣವು ಅವರ ಜೀವಮಾನ ಪರ್ಯಂತವಿರುವುದು. ತಂದೆ-ತಾಯಿಯರು ಬಾಲ್ಯದಲ್ಲಿ ಬಿತ್ತಿದ ಬೀಜವು ಮುಂದೆ ಒಳ್ಳೆಯ ಅಥವಾ ಕೆಟ್ಟಫಲ ಕೊಡುತ್ತದೆ. ಮಕ್ಕಳಿಗೆ ಸಂತೋಷ ಕೊಡುವುದು ಇಲ್ಲವೆ ದುಃಖವುಂಟು ಮಾಡುವುದೂ ಸಹ ಅವರ ಕೈಯಲ್ಲಿದೆ. KanCCh 229.2