ದೇವರ ಮಹಾ ರಕ್ಷಣಾಯೋಜನೆಯಲ್ಲಿ ಪ್ರತಿಯೊಬ್ಬರಿಗೂ ಸ್ಥಾನವಿದೆ. ಅನಗತ್ಯ ತಲಾಂತುಗಳು (ಪ್ರತಿಭೆಗಳು) ಯಾರಿಗೂ ಕೊಡಲ್ಪಡುವುದಿಲ್ಲ. ಒಂದು ವೇಳೆ ನಿಮಗೆ ಕೊಡಲ್ಪಟ್ಟಿರುವ ತಲಾಂತು ಅಲ್ಪವಾಗಿರಬಹುದು, ಆದರೆ ದೇವರು ಅದಕ್ಕೂ ತನ್ನದೇ ಆದ ಸ್ಥಾನನೀಡಿದ್ದಾನೆ. ಆ ಒಂದು ತಲಾಂತನ್ನು ನಾವು ದೇವರ ಸೇವೆಯಲ್ಲಿ ಪ್ರಾಮಾಣಿಕವಾಗಿ ಉಪಯೋಗಿಸಿದಲ್ಲಿ, ಅದು ಯಾವ ಕಾರಣಕ್ಕಾಗಿ ಕೊಡಲ್ಪಟ್ಟಿತೋ, ಅದನ್ನು ಆತನು ನೆರವೇರಿಸುವನು. ಹಳ್ಳಿಗಳಲ್ಲಿ ವಾಸ ಮಾಡುವ ಮುಗ್ಧ ಜನರ ತಲಾಂತು ಮನೆಮನೆಗಳನ್ನು ಸಂಧಿಸಿ ಸುವಾರ್ತಾಸೇವೆ ಮಾಡುವ ಕಾರ್ಯಕ್ಕೆ ಅಗತ್ಯವಾಗಿದೆ. ಅತ್ಯಂತ ಪ್ರತಿಭೆಯುಳ್ಳ ವರಕ್ಕಿಂತಲೂ ಮುಗ್ಧಜನರ ಈ ತಲಾಂತು ಈ ಕಾರ್ಯವನ್ನು ಹೆಚ್ಚಾಗಿ ಪೂರ್ತಿಗೊಳಿಸುತ್ತದೆ. KanCCh 42.2
ದೇವರ ಮಾರ್ಗದರ್ಶನದಂತೆ, ಜನರು ತಮಗೆ ಕೊಡಲ್ಪಟ್ಟಿರುವ ಸಾಮರ್ಥ್ಯಗಳನ್ನು ಉಪಯೋಗಿಸಿದಲ್ಲಿ, ಅವರ ತಲಾಂತು ವೃದ್ಧಿಯಾಗುವುದು. ಅವರ ಸಾಮರ್ಥ್ಯಹೆಚ್ಚಾಗಿ, ಕೆಟ್ಟುಹೋಗಿರುವವರನ್ನು ಹುಡುಕಿ ರಕ್ಷಿಸಲು ಪರಲೋಕದ ಜ್ಞಾನ ವಿವೇಕವು ಅವರಿಗೆ ಕೊಡಲ್ಪಡುವುದು. ಆದರೆ ಸಭೆಯ ಸದಸ್ಯರು ಇತರರಿಗೆ ಸತ್ಯದ ಬೆಳಕನ್ನು ತಿಳಿಸಬೇಕೆಂದು ದೇವರು ಅವರಿಗೆ ಕೊಟ್ಟಿರುವ ಜವಾಬ್ದಾರಿಯನ್ನು ನಿರ್ಲಕ್ಷ್ಯದಿಂದ ಉದಾಸೀನತೆ ಮಾಡಿದರೆ, ಪರಲೋಕದ ನಿಧಿಯನ್ನು ಪಡೆದುಕೊಳ್ಳಲು ಅವರು ನಿರೀಕ್ಷಿಸುವುದಾದರೂ ಹೇಗೆ? ಕ್ರೈಸ್ತರೆಂದು ಹೇಳಿಕೊಳ್ಳುವವರು ಆತ್ಮೀಕವಾಗಿ ಕತ್ತಲೆಯಲ್ಲಿರುವವರನ್ನು ಸತ್ಯದ ಬೆಳಕಿಗೆ ತರಲು ಯಾವುದೇ ಬಯಕೆ ಇಲ್ಲದಿರುವಾಗ, ದೇವರ ಕೃಪೆ ಮತ್ತು ಜ್ಞಾನವನ್ನು ಇತರರಿಗೆ ತಿಳಿಸಲು ನಿಲ್ಲಿಸಿದಾಗ, ಅವರು ದೇವರು ತಮಗೆ ಕೊಟ್ಟ ಕಾರ್ಯದಲ್ಲಿ ವಿಫಲರಾಗುವರು. KanCCh 42.3
ವಿವಿಧ ಸ್ಥಳಗಳಲ್ಲಿ ಸದಸ್ಯರ ಸಂಖ್ಯೆಯಲ್ಲಿ ದೊಡ್ಡದಾದ ಸಭೆಗಳಿವೆ. ಅವರು ಸತ್ಯದ ಪರಿಜ್ಞಾನ ಹೊಂದಿದ್ದಾರೆ. ಆದರೆ ಅವರಲ್ಲಿ ಅನೇಕರು ತಮಗೆ ದೊರೆತ ಬೆಳಕನ್ನು ಇತರರಿಗೆ ತಿಳಿಸಲು ಪ್ರಯತ್ನಿಸದೆ, ಜೀವವಾಕ್ಯವನ್ನು ಕೇಳುವುದರಲ್ಲಿಯೇ ತೃಪ್ತರಾಗುತ್ತಾರೆ. ಸುವಾರ್ತಾಸೇವೆಯ ಬೆಳವಣಿಗೆಯಲ್ಲಿ ಅವರಿಗೆ ಹೆಚ್ಚಿನ ಜವಾಬ್ದಾರಿ ಇರುವುದಿಲ್ಲ ಹಾಗೂ ಇತರರ ರಕ್ಷಣೆಯಲ್ಲಿ ಆಸಕ್ತಿ ಹೊಂದಿರುವುದಿಲ್ಲ. ಲೌಕಿಕ ವಿಷಯಗಳಲ್ಲಿ ಅವರು ಅತ್ಯಂತ ಉತ್ಸಾಹ ಹೊಂದಿರುತ್ತಾರೆ. ಆದರೆ ತಮ್ಮ ದಿನನಿತ್ಯದ ವ್ಯಾಪಾರವ್ಯವಹಾರದಲ್ಲಿ ಕ್ರೈಸ್ತಧರ್ಮವನ್ನು ಅನುಸರಿಸುವುದಿಲ್ಲ. “ಧರ್ಮವೇ ಬೇರೆ, ವ್ಯಾಪಾರ, ವ್ಯವಹಾರವೇಬೇರೆ” ಎಂಬುದು ಅವರ ಅಭಿಪ್ರಾಯ. ಅವೆರಡೂ ಬೇರೆಯಾಗಿರಲಿ ಎಂದೇ ಅವರು ಬಯಸುತ್ತಾರೆ. KanCCh 43.1
ತಮಗೆ ದೊರೆತ ಅವಕಾಶಗಳನ್ನು ಈ ಜನರು ನಿರ್ಲಕ್ಷಿಸಿದ ಕಾರಣದಿಂದಲೂ ಹಾಗೂ ದುರುಪಯೋಗಪಡಿಸಿಕೊಂಡದ್ದರಿಂದಲೂ ಇಂತಹ ಸಭೆಗಳ ಸದಸ್ಯರು “ಕೃಪೆಯಲ್ಲಿಯೂ, ನಮ್ಮ ಕರ್ತನೂ, ರಕ್ಷಕನೂ ಆಗಿರುವ ಯೇಸುಕ್ರಿಸ್ತನ ವಿಷಯವಾದ ಜ್ಞಾನದಲ್ಲಿಯೂ....” ಬೆಳವಣಿಗೆ ಹೊಂದುವುದಿಲ್ಲ (2 ಪೇತ್ರನು 3:18). ಈ ಕಾರಣದಿಂದ ಅವರು ನಂಬಿಕೆಯಲ್ಲಿ ಬಲಹೀನರೂ, ಜ್ಞಾನದಲ್ಲಿ ಕೊರತೆಯುಳ್ಳವರೂ ಹಾಗೂ ಅನುಭವದಲ್ಲಿ ಮಕ್ಕಳಂತೆಯೂ ಇರುವರು. ಅವರು ಸತ್ಯದಲ್ಲಿ ಬೇರೂರಿ ನೆಲೆಗೊಂಡಿರುವುದಿಲ್ಲ. ಇವರು ಇದೇ ರೀತಿ ಉಳಿದಲ್ಲಿ, ಆತ್ಮೀಕವಾದ ದೃಷ್ಟಿಯಲ್ಲಿ ಸತ್ಯ ಮತ್ತು ತಪ್ಪು ಯಾವುದೆಂಬ ವ್ಯತ್ಯಾಸ ತಿಳಿದುಕೊಳ್ಳಲು ಸಾಧ್ಯವಾಗದು. ಆಗ ಅವರು ಕೊನೆಯಕಾಲದಲ್ಲಿ ಬರುವ ಅನೇಕ ತಪ್ಪುಕಲ್ಪನೆಗಳ ಭ್ರಮೆಯಿಂದ ಮೋಸಹೋಗುವರು. KanCCh 43.2