Go to full page →

ಕೆಲಸಗಾರರು ಸಭಾಸದಸ್ಯರಿಗೆ ತರಬೇತಿ ನೀಡಬೇಕು KanCCh 48

ಸಭಾಮಂದಿರಗಳಲ್ಲಿ ಎಷ್ಟೋ ಸಂದೇಶಗಳು ಕೊಡಲ್ಪಟ್ಟಿದ್ದರೂ, ದೇವರ ಸೇವೆಯಲ್ಲಿ ನಿಸ್ವಾರ್ಥಿಗಳಾದ ಕೆಲಸಗಾರರನ್ನು ಅಧಿಕಸಂಖ್ಯೆಯಲ್ಲಿ ಬೆಳೆಸಲು ಸಾಧ್ಯವಾಗಿಲ್ಲ. ಈ ವಿಷಯವನ್ನು ಸಭಿಕರು ಗಣನೆಗೆ ತೆಗೆದುಕೊಳ್ಳಬೇಕು. ನಿತ್ಯಜೀವದ ಭವಿಷ್ಯವೇ ಅಪಾಯದಲ್ಲಿದೆ. ಅವರು ತಮಗೆ ಕೊಟ್ಟ ತಲಾಂತುಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಕ್ರಿಸ್ತನ ಬೆಳಕನ್ನು ಇತರ ಕಡೆಗೆ ಪಸರಿಸಲು ವಿಫಲರಾಗಿದ್ದಾರೆ. ಸಭೆಯ ಸದಸ್ಯರಿಗೆ ತಮ್ಮ ಬೆಳಕನ್ನು ಅನುಸರಿಸಿ ನಡೆಯುವಂತೆ ಬೇಕಾದ ಎಚ್ಚರಿಕೆಯ ಸಲಹೆಗಳನ್ನು ಕೊಡಬೇಕು. ಸ್ಥಳೀಯ ಸಭೆಯಲ್ಲಿ ನಾಯಕ ಸ್ಥಾನದಲ್ಲಿರುವವರು ಸಾಮರ್ಥ್ಯವುಳ್ಳ ಸದಸ್ಯರನ್ನು ಆರಿಸಿ ಜವಾಬ್ದಾರಿಯುತ ಕೆಲಸ ನೀಡಬೇಕು. ಅದೇ ಸಮಯದಲ್ಲಿ ಅವರು ಯಾವ ರೀತಿ ಅತ್ಯುತ್ತಮವಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿ, ಇತರರಿಗೆ ಹೇಗೆ ಆಶೀರ್ವಾದ ತರುವವರಾಗಿರಬೇಕೆಂದು ಸೂಕ್ತವಾದ ಸಲಹೆ ನೀಡಬೇಕು. KanCCh 48.2

ಕುಶಲಕೆಲಸಗಾರರು, ವಕೀಲರು, ವ್ಯಾಪಾರಿಗಳು ಹಾಗೂ ಇತರ ವ್ಯವಹಾರಗಳಲ್ಲಿರುವವರು ಮತ್ತು ವೈದ್ಯರು, ದಾದಿಯರು, ಶಿಕ್ಷಕರು ಮುಂತಾದವರು ತಮ್ಮ ವೃತ್ತಿಯಲ್ಲಿ ಪರಿಣಿತರಾಗುವಂತೆ ತಾವೇ ತರಬೇತಿ ಹೊಂದಬೇಕು. ಕ್ರಿಸ್ತನ ಅನುಯಾಯಿಗಳು ಬುದ್ಧಿವಂತಿಕೆಯಲ್ಲಿ ಕಡಿಮೆಯಿರಬೇಕೇ? ಹಾಗೂ ಆತನ ಸೇವೆಯಲ್ಲಿರುವವರು ತಾವು ಅನುಸರಿಸಬೇಕಾದ ಮಾರ್ಗದ ವಿಷಯದಲ್ಲಿ ಅಜ್ಞಾನಿಗಳಂತಿರಬೇಕೇ? ನಿತ್ಯಜೀವವನ್ನು ಪಡೆದುಕೊಳ್ಳುವುದು ಲೋಕದ ಎಲ್ಲಾ ವಿಷಯಗಳಿಗಿಂತ ಪ್ರಾಮುಖ್ಯವಾಗಿರಬೇಕು. ಜನರನ್ನು ಕ್ರಿಸ್ತನ ಬಳಿಗೆ ತರುವುದಕ್ಕೆ ಮಾನವಸ್ವಭಾವದ ಪರಿಜ್ಞಾನ ಹಾಗೂ ಮಾನವ ಮನಸ್ಸನ್ನು ಅಧ್ಯಯನ ಮಾಡಿರಬೇಕು. ಸತ್ಯದ ವಿಷಯವನ್ನು ಪುರುಷರು ಹಾಗೂ ಮಹಿಳೆಯರಿಗೆ ಹೇಗೆ ತಿಳಿಸಬೇಕೆಂದು ತಿಳಿದುಕೊಳ್ಳುವುದಕ್ಕೆ ನಿರಂತರ ಪ್ರಾರ್ಥನೆ ಮಾಡಬೇಕು. KanCCh 48.3

ಒಂದು ಸ್ಥಳೀಯ ಸಭೆಯನ್ನು ಸುವ್ಯವಸ್ಥಿತವಾಗಿ ಸ್ಥಾಪಿಸಿದ ತಕ್ಷಣವೇ, ಬೋಧಕರು ಅವರಿಗೆ ಸಭೆಯ ಕಾರ್ಯಚಟುವಟಿಕೆಗಳನ್ನು ವಹಿಸಿಕೊಡಬೇಕು. ಯಶಸ್ವಿಯಾಗಿ ದೇವರ ಸೇವೆ ಮಾಡುವುದರ ಬಗ್ಗೆ ಅವರಿಗೆ ಶಿಕ್ಷಣ ನೀಡಬೇಕು. ಸಭೆಯ ಬೋಧಕರು ಪ್ರಸಂಗ ಮಾಡುವುದಕ್ಕಿಂತಲೂ ಹೆಚ್ಚಾಗಿ, ಸಭಿಕರಿಗೆ ಸಭಾ ಕಾರ್ಯಗಳನ್ನು ಹೇಗೆ ಯಶಸ್ವಿಯಾಗಿ ಮಾಡಬೇಕೆಂಬ ವಿಷಯದಲ್ಲಿ ತರಬೇತಿ ನೀಡಬೇಕು. ತಾವು ತಿಳಿದ ಜ್ಞಾನವನ್ನು ಇತರರಿಗೆ ಹೇಗೆ ತಿಳಿಸಬೇಕೆಂದು ಶಿಕ್ಷಣ ಕೊಡಬೇಕು. ಹೊಸದಾಗಿ ಸಭೆಯಲ್ಲಿ ಸೇರಿದವರು ದೇವರ ಸೇವೆಯಲ್ಲಿ ಹೆಚ್ಚು ಅನುಭವವುಳ್ಳವರ ಸಲಹೆ ಪಡೆದುಕೊಳ್ಳಬೇಕೆಂದು ತಿಳಿಸಿ ಹೇಳಬೇಕು. ಹಾಗೂ ಅವರು ಸಭಾಪಾಲಕರನ್ನು ದೇವರೆಂದು ಎಣಿಸಬಾರದು. KanCCh 49.1

ನಮ್ಮ ಸಭೆಯ ವಿಶ್ವಾಸಿಗಳು ಸಭಾಪಾಲಕರಿಗಾಗಿಯಲ್ಲ, ಬದಲಾಗಿ ದೇವರಿಗೆ ಸೇವೆಮಾಡಬೇಕು ಹಾಗೂ ಆತನ ಮೇಲೆ ಆತುಕೊಳ್ಳಬೇಕೆಂದು ತಿಳಿಸಿ ಹೇಳುವುದೇ, ನಾವು ಅವರಿಗೆ ಮಾಡುವ ದೊಡ್ಡ ಸಹಾಯವಾಗಿದೆ. ಅವರು ಕ್ರಿಸ್ತನಂತೆ ಸೇವೆ ಮಾಡುವುದನ್ನು ಕಲಿಯಲಿ ಹಾಗೂ ಜೊತೆ ಕೆಲಸಗಾರರೊಂದಿಗೆ ಸೇರಿ ದೇವರಿಗೆ ಪ್ರಾಮಾಣಿಕರಾಗಿ ಸೇವೆಮಾಡಲಿ. ಶಿಕ್ಷಕರು ಜನರನ್ನು ಮತ್ತು ಇತರರನ್ನು ಒಂದುಗೂಡಿಸಿ ಸೇವೆಮಾಡಲು ಮಾರ್ಗದರ್ಶನ ನೀಡಿ ಅವರ ಮಾದರಿಯಿಂದ ಕಲಿತುಕೊಳ್ಳಬೇಕು. ಒಂದು ಒಳ್ಳೆಯ ಮಾದರಿಯು ಬಹಳ ಮಾತುಗಳಿಗಿಂತ ಎಷ್ಟೋ ಯೋಗ್ಯವಾದದ್ದು. KanCCh 49.2

ಸ್ಥಳೀಯಸಭೆಯಲ್ಲಿ ನಾಯಕರಾದವರು ದೇವರಸೇವೆಯಲ್ಲಿ ಸಭೆಯ ಪ್ರತಿಯೊಬ್ಬ ಸದಸ್ಯರೂ ಪಾಲ್ಗೊಳ್ಳುವಂತ ಅವಕಾಶ ಮತ್ತು ಯೋಜನೆಗಳನ್ನು ಸಿದ್ಧಪಡಿಸಬೇಕು. ಹಿಂದೆ ಈ ರೀತಿ ಯಾವಾಗಲೂ ಮಾಡಿಲ್ಲ. ಎಲ್ಲಾ ಸದಸ್ಯರ ತಲಾಂತುಗಳನ್ನು ಸಭೆಯ ಆತ್ಮೀಕ ಬೆಳವಣಿಗೆಗಾಗಿ ಉಪಯೋಗಿಸಿಕೊಳ್ಳುವಂತ ಯೋಜನೆಗಳನ್ನು ಸಂಪೂರ್ಣವಾಗಿ ಹಮ್ಮಿಕೊಂಡಿರಲಿಲ್ಲ. ಇದರಿಂದಾಗಿ ಸಭೆಗೆ ಎಷ್ಟೊಂದು ನಷ್ಟವಾಗಿದೆ ಎಂದು ಕೆಲವರು ಮಾತ್ರ ತಿಳಿದುಕೊಂಡಿದ್ದಾರೆ. KanCCh 49.3

ಪ್ರತಿಯೊಂದು ಸಭೆಯಲ್ಲಿಯೂ ಎಲ್ಲರಿಗೂ ತಲಾಂತು ಕೊಡಲ್ಪಟ್ಟಿದೆ. ಅದನ್ನು ಸರಿಯಾದ ರೀತಿಯಲ್ಲಿ ಪ್ರಾರ್ಥನಾ ಪೂರ್ವಕವಾಗಿ ಬಳಿಸಿಕೊಂಡಲ್ಲಿ, ದೇವರ ಸೇವೆಯಲ್ಲಿ ಅದು ಮುಂದೆ ಒಂದು ದೊಡ್ಡ ಸಹಾಯವಾಗಲಿದೆ. ಸಭೆಗಳು ಸದಸ್ಯರ ಸಂಖ್ಯೆಯಲ್ಲಿ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಅಲ್ಲಿಗೆ ಹೋಗಿ ಅವರಿಗೆ ಸೂಕ್ತವಾದ ಸಲಹೆ ನೀಡಲು ಒಂದು ವ್ಯವಸ್ಥಿತವಾದ ರೀತಿಯಲ್ಲಿ ಯೋಜನೆ ಹಾಕಿಕೊಂಡು ಸಭಾಪಾಲಕರನ್ನು ನೇಮಿಸಬೇಕು. ಇದಕ್ಕೆ ಶಿಕ್ಷಣ ಮತ್ತು ತರಬೇತಿಯ ಅಗತ್ಯವಿದೆ. ಈ ಸಮಯಕ್ಕೆ ತಕ್ಕಂತೆ ಎಲ್ಲರೂ ಮನಃಪೂರ್ವಕವಾಗಿ ಕೆಲಸ ಮಾಡಬೇಕು. KanCCh 49.4

ನಮ್ಮ ಸಭೆಗಳ ಬೆಳವಣಿಗೆಗೆ ಅತ್ಯವಶ್ಯಕವಾಗಿ ಬೇಕಾಗಿರುವುದೇನೆಂದರೆ- ಸಭೆಯಲ್ಲಿರುವ ತಲಾಂತುಗಳನ್ನು ಗ್ರಹಿಸಿಕೊಂಡು ಅದನ್ನು ದೇವರ ಸೇವೆಯಲ್ಲಿ ಉಪಯೋಗಿಸಿಕೊಳ್ಳುವಂತೆ ವಿಶ್ವಾಸಿಗಳಿಗೆ ತರಬೇತಿ ನೀಡುವುದೇ ಆಗಿದೆ. ಸಭೆಗಳನ್ನು ಸಂಧಿಸುವ ಸಭಾಪಾಲಕರು ಅಲ್ಲಿರುವ ಸಹೋದರ ಸಹೋದರಿಯರಿಗೆ ದೇವರ ಸೇವೆಮಾಡಲು ಬೇಕಾದ ಪ್ರಾಯೋಗಿಕ ವಿಧಾನದ ಬಗ್ಗೆ ಸಲಹೆ, ಸೂಚನೆಗಳನ್ನು ನೀಡಬೇಕು. ಅಲ್ಲದೆ ಯೌವನಸ್ಥರನ್ನು ತರಬೇತಿಗೊಳಿಸುವ ತರಗತಿಗಳು ನಡೆಯಬೇಕು. ಯುವಕ ಯುವತಿಯರು ತಮ್ಮ ಮನೆಗಳಲ್ಲಿ, ಸಮುದಾಯದಲ್ಲಿ ಮತ್ತು ಸಭೆಯಲ್ಲಿ ಸೇವೆ ಮಾಡುವ ಕೆಲಸಗಾರರಾಗುವಂತೆ ಅವರಿಗೆ ಶಿಕ್ಷಣ ನೀಡಬೇಕು. KanCCh 50.1

ಪರಲೋಕದ ದೇವದೂತರು ಕ್ರಿಸ್ತನ ಸುವಾರ್ತೆಸಾರುವ ಮಹಾಕಾರ್ಯದಲ್ಲಿ ತಮ್ಮೊಂದಿಗೆ ಸಹಕಾರ ನೀಡುವಂತ ಸಭಾ ಸದಸ್ಯರಿಗಾಗಿ ಕಾತರದಿಂದ ಕಾದುಕೊಂಡಿದ್ದಾರೆ. ಅವರು ನಿಮಗಾಗಿ ಕಾದುಕೊಂಡಿದ್ದಾರೆ. ಬೆಳೆಯು ಬಹಳ, ಕೆಲಸಗಾರರು ಕಡಿಮೆ. ಆದುದರಿಂದ ಪರಿಶುದ್ಧ ಮಾಡಲ್ಪಟ್ಟ ಪ್ರತಿಯೊಬ್ಬರೂ, ದೈವೀಕಶಕ್ತಿಯ ಒಂದು ಸಾಧನದಂತೆ ದೇವರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಕ್ರೈಸ್ತರು ಒಗ್ಗಟ್ಟಿನಿಂದ ದೈವೀಕ ಶಕ್ತಿಯ ಮಾರ್ಗದರ್ಶನದಲ್ಲಿ ಒಂದೇ ಉದ್ದೇಶ ಸಾಧನೆಗಾಗಿ ಮುಂದೆ ನಡೆದಾಗ, ಜಗತ್ತನ್ನೇ ಅಲ್ಲೋಲ್ಲಕಲ್ಲೋಲಗೊಳಿಸುವರು. KanCCh 50.2

ಹಾದಿಬೀದಿಗಳಲ್ಲಿ, ರಾಜಮಾರ್ಗಗಳಲ್ಲಿ ಜನನಾಯಕರಿಗೆ, ಶಿಕ್ಷಕರಿಗೆ, ಹಾಗೂ ಜೀವನದ ಎಲ್ಲಾ ರಂಗಗಳಲ್ಲಿ ಕ್ರಿಯಾಶೀಲರಾಗಿರುವ ಜನರಿಗೆ ಸುವಾರ್ತೆಯ ಆಹ್ವಾನವನ್ನು ಸಾರಬೇಕಾಗಿದೆ. ಸಾರ್ವಜನಿಕ ಜೀವನದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ವೈದ್ಯರು, ಶಿಕ್ಷಕರು, ವಕೀಲರು, ನ್ಯಾಯಾಧೀಶರು, ಸಾರ್ವಜನಿಕ ಅಧಿಕಾರಿಗಳು, ಉದ್ಯಮಿಗಳು, ವ್ಯಾಪಾರಿಗಳು ಮುಂತಾದವರಿಗೆ ವಿಶಿಷ್ಟವಾದ ಸಂದೇಶವನ್ನು ಸ್ಪಷ್ಟವಾಗಿ ಕೊಡಬೇಕು. “ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ, ಪ್ರಾಣನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು? ಒಬ್ಬನು ತನ್ನ ಪ್ರಾಣಕ್ಕೆ ಏನು ಈಡುಕೊಡಬಹುದು?” (ಮಾರ್ಕ 8:36, 37). KanCCh 50.3

ನಿರ್ಲಕ್ಷಿಸಲ್ಪಟ್ಟ ಬಡವರ ಬಗ್ಗೆ ನಾವು ಸಾಕಷ್ಟು ಬರೆಯುತ್ತೇವೆ ಹಾಗೂ ಮಾತಾಡುತ್ತೇವೆ. ಅದೇ ರೀತಿ ಅಲಕ್ಷ್ಯಕ್ಕೊಳಗಾದ ಶ್ರೀಮಂತರಿಗೂ ಸಹ ಅಷ್ಟೇ ಗಮನ ಕೊಡಬೇಕಲ್ಲವೇ? ಅನೇಕರು ಇವರನ್ನು ಕೆಲಸಕ್ಕೆ ಬಾರದವರು, ನಿಷ್ಪ್ರಯೋಜಕರೆಂದು ತೀರ್ಮಾನಿಸುತ್ತಾರೆ. ಸಾವಿರಾರು, ಲಕ್ಷಾಂತರ ಶ್ರೀಮಂತರನ್ನು ಸಭಿಕರು ಹೊರಗಿನ ತೋರಿಕೆಯಿಂದ ಕೆಲಸಕ್ಕೆ ಬಾರದವರೆಂದು ತೀರ್ಮಾನಿಸಿ, ಅವರಿಗೆ ಮುಂದೆಬರಲಿರುವ ಕೊನೆಯಕಾಲದ ತೀರ್ಪಿನ ಬಗ್ಗೆ ಎಚ್ಚರಿಕೆ ನೀಡದ ಕಾರಣದಿಂದ, ಅವರು ಯಾವುದೇ ನಿರೀಕ್ಷೆಯಿಲ್ಲದೆ ಮರಣ ಹೊಂದಿದ್ದಾರೆ. ಅವರು ಉದಾಸೀನರಂತೆ ಕಂಡರೂ ಈ ಶ್ರೀಮಂತರಲ್ಲಿ ಹೆಚ್ಚಿನವರು ತಮ್ಮ ರಕ್ಷಣೆಗಾಗಿ ಭಾರವಾದ ಹೃದಯ ಹೊಂದಿದ್ದಾರೆ. ಆತ್ಮೀಕ ಮನ್ನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಶ್ರೀಮಂತರು ಹಸಿವಿನಿಂದ ಕಾದುಕೊಂಡಿದ್ದಾರೆ. ಅಧಿಕಾರಿಗಳಲ್ಲಿಯೂ ಅನೇಕರು ತಮಗಿಲ್ಲದಿರುವ ಯಾವುದೋ ಒಂದು ಅಗತ್ಯ ತಮಗಿದೆ ಎಂದು ಭಾವಿಸಿದ್ದಾರೆ. ಸಭೆಯಲ್ಲಿ ಯಾವುದೇ ಆತ್ಮೀಕ ಪ್ರಯೋಜನ ತಮಗೆ ದೊರೆಯುವುದಿಲ್ಲವೆಂದು ಅವರು ತಿಳಿದುಕೊಂಡದ್ದರಿಂದ, ಸಭೆಗೆ ದೇವಾರಾಧನೆಗೆ ಅವರು ಹೋಗುವುದಿಲ್ಲ. ಸಭೆಯಲ್ಲಿ ಬರುವ ಸಂದೇಶವು ಅವರ ಹೃದಯಕ್ಕೆ ತಟ್ಟುವುದಿಲ್ಲ. ಅಂತವರಿಗಾಗಿ ನಾವು ವೈಯಕ್ತಿಕವಾದ ಪ್ರಯತ್ನ ಮಾಡಬೇಕಲ್ಲವೇ? KanCCh 50.4

ಅಲಕ್ಷ್ಯಕ್ಕೊಳಗಾದ ಶ್ರೀಮಂತರಿಗೆ ಪುಸ್ತಕಗಳು, ಕರಪತ್ರಗಳು ಹಾಗೂ ಮ್ಯಾಗ್‍ಜೀ಼ನ್ಗಳ ಮೂಲಕ ಕೊನೆಯಕಾಲದ ಬಗ್ಗೆ ನಾವು ಎಚ್ಚರಿಕೆ ನೀಡಬಹುದಲ್ಲವೇ? ಎಂದು ಸಭಿಕರಲ್ಲಿ ಕೆಲವರು ಪ್ರಶ್ನಿಸಬಹುದು. ಆದರೆ ಈ ರೀತಿಯಲ್ಲಿ ಮುಟ್ಟಲಾರದ ಅನೇಕರಿದ್ದಾರೆ. ಅವರಿಗೆ ವೈಯಕ್ತಿಕವಾದ ಪ್ರಯತ್ನಗಳು ಬೇಕಾಗಿದೆ. ಮುಂದೆ ಬರಲಿರುವ ನ್ಯಾಯತೀರ್ಪಿನ ಬಗ್ಗೆ ಅವರು ವಿಶೇಷ ಎಚ್ಚರಿಕೆಯಿಲ್ಲದೆ ನಾಶವಾಗಬೇಕೇ? ಹಿಂದಿನ ಕಾಲದಲ್ಲಿ ಆ ರೀತಿ ಇರಲಿಲ್ಲ. ದೇವರ ಪ್ರವಾದಿಗಳು ಹಾಗೂ ಸೇವಕರು ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ಮತ್ತು ಶ್ರೀಮಂತರಿಗೆ ಕ್ರಿಸ್ತಯೇಸುವಿನಲ್ಲಿ ಮಾತ್ರ ನಿಮಗೆ ಸಮಾಧಾನ ಮತ್ತು ವಿಶ್ರಾಂತಿ ಸಿಕ್ಕುವುದೆಂದು ತಿಳಿಸಿದರು. KanCCh 51.1

ದೇವಕುಮಾರನಾದ ಕ್ರಿಸ್ತನು ಕೆಟ್ಟುಹೋಗಿರುವ ಮನುಷ್ಯರನ್ನು ಹುಡುಕಿ ರಕ್ಷಿಸುವುದಕ್ಕಾಗಿ ಈ ಲೋಕಕ್ಕೆ ಬಂದನು. ಆತನು ಜನರಿಂದ ತಿರಸ್ಕರಿಸಲ್ಪಟ್ಟವರಿಗೆ ಮಾತ್ರವಲ್ಲ, ಉನ್ನತ ಸ್ಥಾನದಲ್ಲಿರುವವರನ್ನೂ ಸಹ ರಕ್ಷಿಸುವ ಪ್ರಯತ್ನ ಮಾಡಿದನು. ದೇವರನ್ನು ಅರಿಯದ ಹಾಗೂ ಆತನ ಆಜ್ಞೆಗಳನ್ನು ಕೈಕೊಂಡುನಡೆಯದ ಉನ್ನತವರ್ಗದವರ ರಕ್ಷಣೆಗಾಗಿಯೂ ಸಹ ಕ್ರಿಸ್ತನು ಬುದ್ಧಿವಂತಿಕೆಯಿಂದ ಪ್ರಯತ್ನಿಸಿದನು. ಕ್ರಿಸ್ತನು ಪರಲೋಕಕ್ಕೆ ಏರಿಹೋದ ನಂತರವೂ ಇದೇ ಕಾರ್ಯ ಮುಂದುವರೆಯಿತು. ದೇವರು ಕೊರ್ನೇಲ್ಯನಿಗೆ ಎಂತಹ ವಿಶೇಷವಾದ ದಯೆ ತೋರಿಸಿದನೆಂದು ನೆನಪು ಮಾಡಿಕೊಳ್ಳಿ. ಅವನು ರೋಮನ್ ಸೈನ್ಯದಲ್ಲಿ ಉನ್ನತ ಅಧಿಕಾರಿಯಾಗಿದ್ದನು. ಆದರೂ ತನಗೆ ದೊರೆತಷ್ಟು ಬೆಳಕಿನ ಪ್ರಕಾರ ದೇವರ ದೃಷ್ಟಿಯಲ್ಲಿ ಸರಿಯಾಗಿ ನಡೆದುಕೊಳ್ಳುತ್ತಿದ್ದನು. ದೇವರು ಪರಲೋಕದಿಂದ ಅವನಿಗೆ ಒಂದು ವಿಶೇಷಸಂದೇಶ ಕಳುಹಿಸಿದನು. ಅದೇ ಸಮಯದಲ್ಲಿ ಪೇತ್ರನಿಗೆ ದರ್ಶನನೀಡಿ ಕೊರ್ನೇಲ್ಯನನ್ನು ಸಂಧಿಸಿ ಅವನಿಗೆ ಸುವಾರ್ತೆಯ ಬೆಳಕನ್ನು ಇನ್ನೂ ಹೆಚ್ಚಾಗಿ ತಿಳಿಸಬೇಕೆಂದು ಆಜ್ಞಾಪಿಸಿದನು. ಪರಲೋಕದ ಬೆಳಕಿಗಾಗಿ ಪ್ರಾರ್ಥಿಸುತ್ತಾ, ಹಾತೊರೆಯುವರ ಮೇಲೆ ದೇವರು ಎಂತಹ ಪ್ರೀತಿ ಹಾಗೂ ಅನುಕಂಪ ತೋರಿಸುತ್ತಾನೆಂದು ನಾವು ಯೋಚಿಸಿದಾಗ, ನಮ್ಮ ಸೇವೆಯಲ್ಲಿಯೂ ಸಹ ಎಂತಹ ಸ್ಫೂರ್ತಿ ಉಂಟಾಗುತ್ತದಲ್ಲವೇ? KanCCh 51.2

ಶ್ರೀಮತಿ ವೈಟಮ್ಮನವರಿಗೆ ಬಂದ ಮತ್ತೊಂದು ದರ್ಶನದಲ್ಲಿ ಕೊರ್ನೇಲ್ಯನಂತೆ ಉನ್ನತ ಸ್ಥಾನದಲ್ಲಿರುವವರನ್ನು ಸಭೆಗೆ ಸೇರಿಸಲು ದೇವರು ಬಯಸಿದ್ದಾನೆಂದು ತಿಳಿಸಲಾಯಿತು. ಅವರು ದೇವರಾಜ್ಞೆಗಳನ್ನು ಕೈಕೊಂಡು ನಡೆಯುವವರ ಮೇಲೆ ಕರುಣೆ ಹೊಂದಿದ್ದಾರೆ. ಆದರೆ ಈ ಲೋಕದ ಆಕರ್ಷಣೆಯು ಅವರನ್ನು ಬಲವಾಗಿ ಬಂಧಿಸಿದೆ. ಸಮಾಜದ ಕೆಳವರ್ಗದವರೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಲು ಅವರಿಗೆ ನೈತಿಕ ಸ್ಥೈರ್ಯವಿಲ್ಲ. ಅವರು ಎದುರಿಸುತ್ತಿರುವ ಶೋಧನೆಗಳು ಮತ್ತು ಜವಾಬ್ದಾರಿಗಳ ಕಾರಣದಿಂದ, ಅವರಿಗಾಗಿ ನಾವು ಪ್ರಾರ್ಥನೆಯ ಮೂಲಕ ವಿಶೇಷ ಪ್ರಯತ್ನ ಮಾಡಬೇಕಾಗಿದೆ. KanCCh 52.1

ಲೋಕದಲ್ಲಿ ಪ್ರಭಾವಶಾಲಿಗಳೂ ಹಾಗೂ ಉನ್ನತ ಅಧಿಕಾರದಲ್ಲಿರುವವರಿಗೆ “ಕರ್ತನಾದ ಯೆಹೋವನು ಇಂತೆನುತ್ತಾನೆ” ಎಂದು ಧೈರ್ಯದಿಂದ ಸುವಾರ್ತೆ ಸಾರಬೇಕೆಂದು ಶ್ರೀಮತಿ ವೈಟಮ್ಮನವರಿಗೆ ದೇವರು ದರ್ಶನದಲ್ಲಿ ತಿಳಿಸಿದ್ದಾನೆ. ಅವರು ಮನೆವಾರ್ತೆಯವರಾಗಿದ್ದು, ದೇವರು ಅವರನ್ನು ಅತ್ಯಂತ ಪ್ರಾಮುಖ್ಯವಾದ ಸ್ಥಾನದಲ್ಲಿರಿಸಿದ್ದಾನೆ. ಅವರು ದೇವರ ಆಹ್ವಾನವನ್ನು ಸ್ವೀಕರಿಸಿದಲ್ಲಿ, ಆತನು ಅವರನ್ನು ತನ್ನಸೇವೆಯಲ್ಲಿ ಉಪಯೋಗಿಸುವನು. KanCCh 52.2

ದೇವರಸೇವಕರಲ್ಲಿ ಹಾಗೂ ಸಭಾಪಾಲಕರಲ್ಲಿ ಕೆಲವರು ಉನ್ನತ ಸ್ಥಾನದಲ್ಲಿರುವವರಿಗಾಗಿ ಸುವಾರ್ತೆಸಾರಲು ವಿಶೇಷವಾದ ಅರ್ಹತೆ ಹೊಂದಿದ್ದಾರೆ. ಇವರು ಪ್ರತಿದಿನವೂ ದೇವರಲ್ಲಿ ಇಂತಹ ವ್ಯಕ್ತಿಗಳಿಗೆ ಸುವಾರ್ತೆ ತಲುಪಿಸುವುದು ಹೇಗೆಂಬ ವಿಷಯದಲ್ಲಿ ಮಾರ್ಗದರ್ಶನ ನೀಡುವಂತೆ ಪ್ರಾರ್ಥಿಸಬೇಕು. ಅವರನ್ನು ಪೂರ್ವಚಿಂತನೆ ಇಲ್ಲದೆ ಸಂಧಿಸಬಾರದು. ಬದಲಾಗಿ ಸಮಾಜದಲ್ಲಿ, ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿರುವವರನ್ನು, ಅಧಿಕಾರಿಗಳನ್ನು ವೈಯಕ್ತಿಕ ಪ್ರಯತ್ನದ ಮೂಲಕ ಹೆಚ್ಚಿನ ಪ್ರೀತಿತೋರಿಸಿ ದೇವರ ವಾಕ್ಯದ ಜ್ಞಾನ ಪಡೆದುಕೊಳ್ಳುವಂತೆ ಕಾಳಜಿ ತೋರಿಸಬೇಕು. KanCCh 52.3

*****