ಕ್ರಿಸ್ತನು ಶಿಲುಬೆಗೇರಿಸಲ್ಪಡುವುದಕ್ಕೆ ಹಿಂದಿನ ರಾತ್ರಿಯಲ್ಲಿ ಮೇಲುಪ್ಪರಿಗೆಯಲ್ಲಿ ಹೇಳಿದ ಮಾತುಗಳನ್ನು ಗಮನಿಸೋಣ. ಆತನು ತನ್ನ ಪ್ರಾಣಕೊಡುವ ಸಮಯ ಬಂದಿತ್ತು. ಮುಂದೆ ಬಹಳ ಕಷ್ಟನಷ್ಟ, ಶೋಧನೆಗಳನ್ನು ಎದುರಿಸಲಿರುವ ತನ್ನ ಶಿಷ್ಯರಿಗೆ ಸಮಾಧಾನ, ಆದರಣೆ ನೀಡಲು ಆತನು ಬಯಸಿದನು. KanCCh 59.1
ದೇವರೊಂದಿಗೆ ತನ್ನ ಸಂಬಂಧದ ಬಗ್ಗೆ ಕ್ರಿಸ್ತನು ತಿಳಿಸಿದ ಮಾತುಗಳನ್ನು ಶಿಷ್ಯರು ಇನ್ನೂ ಅರ್ಥಮಾಡಿಕೊಂಡಿರಲಿಲ್ಲ. ಆತನ ಹೆಚ್ಚಿನ ಬೋಧನೆಗಳು ಅವರಿಗೆ ಇನ್ನೂ ಮನವರಿಕೆಯಾಗಿರಲಿಲ್ಲ. ದೇವರೊಂದಿಗೆ ತಮ್ಮ ಸಂಬಂಧ ಮತ್ತು ಅವರ ಈಗಿನ ಹಾಗೂ ಮುಂದಿನ ಬಾಧ್ಯತೆ, ಹೊಣೆಗಾರಿಕೆಗಳ ಬಗ್ಗೆ ಶಿಷ್ಯರು ಕೇಳಿದ ಪ್ರಶ್ನೆಗಳು ಅವರ ಅಜ್ಞಾನವನ್ನು ಎತ್ತಿ ತೋರಿಸುತ್ತಿದ್ದವು. ಅವರು ದೇವರ ಬಗ್ಗೆ ಸ್ಪಷ್ಟವಾದ ಮತ್ತು ಹೆಚ್ಚಿನ ವಿಶಿಷ್ಟವಾದ ಜ್ಞಾನ ಹೊಂದಿರಬೇಕೆಂಬುದು ಕ್ರಿಸ್ತನ ಇಚ್ಛೆಯಾಗಿತ್ತು. KanCCh 59.2
ಪಂಚಾಶತ್ತಮ ಹಬ್ಬದ ದಿನದಲ್ಲಿ ಪರಿಶುದ್ಧಾತ್ಮನು ಶಿಷ್ಯರ ಮೇಲೆ ಸುರಿಸಲ್ಪಟ್ಟಾಗ ಕ್ರಿಸ್ತನು ಸಾಮ್ಯಗಳಲ್ಲಿ ಹೇಳಿದ ಸತ್ಯಗಳನ್ನು ಅವರು ಅರ್ಥಮಾಡಿಕೊಂಡರು. ಇದುವರೆಗೂ ರಹಸ್ಯವಾಗಿದ್ದ ಆತನ ಬೋಧನೆಗಳು ಈಗ ಅವರಿಗೆ ಸ್ಪಷ್ಟವಾಗಿ ಕಂಡುಬಂದವು. ಪವಿತ್ರಾತ್ಮನ ಸುರಿಸುವಿಕೆಯಿಂದ ಬಂದ ತಿಳುವಳಿಕೆಯು ಶಿಷ್ಯರು ಕ್ರಿಸ್ತನ ಬಗ್ಗೆ ಊಹಿಸಿಕೊಂಡಿದ್ದ ಕಾಲ್ಪನಿಕ ಸಿದ್ಧಾಂತಗಳ ಬಗ್ಗೆ ನಾಚಿಕೊಳ್ಳುವಂತೆ ಮಾಡಿತು. ಅವರು ಪಂಚಾಶತ್ತಮ ದಿನದಲ್ಲಿ ಪರಲೋಕದ ವಿಷಯಗಳ ಬಗ್ಗೆ ತಮಗೆ ಕೊಡಲ್ಪಟ್ಟ ಜ್ಞಾನದೊಂದಿಗೆ ಅವರದೇ ಆದ ಕಾಲ್ಪನಿಕ ಊಹಾಪೋಹಗಳು ಮತ್ತು ವ್ಯಾಖ್ಯಾನವನ್ನು ಹೋಲಿಕೆ ಮಾಡಿದಾಗ, ತಮ್ಮ ಸ್ವಂತ ಅನಿಸಿಕೆಯು ಮೂರ್ಖತನವೆಂದು ಅವರಿಗೆ ಅರಿವಾಯಿತು. ಈಗ ಅವರು ಪರಿಶುದ್ಧಾತ್ಮನಿಂದ ನಡೆಸಲ್ಪಟ್ಟರು ಹಾಗೂ ಹಿಂದೆ ತಿಳಿಯಲಾಗದಿದ್ದ ಸತ್ಯವು ಬೆಳಕಿನಂತೆ ಅವರಲ್ಲಿ ಹೊಳೆಯಿತು. KanCCh 59.3
ಆದರೆ ಶಿಷ್ಯರು ಇನ್ನೂಸಹ ಕ್ರಿಸ್ತನ ವಾಗ್ದಾನದ ಸಂಪೂರ್ಣ ನೆರವೇರುವಿಕೆಯನ್ನು ಹೊಂದಿಕೊಂಡಿರಲಿಲ್ಲ. ಅವರು ತಾಳಿಕೊಳ್ಳುವಷ್ಟು ಮಾತ್ರ ದೇವರಬಗೆಗಿನ ಜ್ಞಾನ ಅವರಿಗೆ ಕೊಡಲ್ಪಟ್ಟಿತ್ತು. ಆದರೆ ತಂದೆಯ ಬಗ್ಗೆ ಕ್ರಿಸ್ತನು ಸ್ಪಷ್ಟವಾಗಿ ತೋರಿಸಲಿರುವ ವಾಗ್ದಾನದ ಸಂಪೂರ್ಣ ನೆರವೇರುವಿಕೆಯು ಇನ್ನೂ ಮುಂದೆ ಬರಬೇಕಾಗಿತ್ತು. ಇಂದಿಗೂ ಸಹ ಇದೇ ಪರಿಸ್ಥಿತಿಯಿದೆ. ದೇವರ ಬಗೆಗಿನ ನಮ್ಮ ಜ್ಞಾನವು ಅಲ್ಪವೂ, ಅಪರಿಪೂರ್ಣವೂ ಆಗಿದೆ. ಕ್ರಿಸ್ತನ ಮತ್ತು ಸೈತಾನನ ನಡುವಣ ಮಹಾಹೋರಾಟವು ಮುಕ್ತಾಯವಾಗಬೇಕು. ಆಗ ಮನುಷ್ಯಕುಮಾರನಾದ ಕ್ರಿಸ್ತಯೇಸುವು ಪಾಪತುಂಬಿದ ಲೋಕದಲ್ಲಿ ತನಗಾಗಿ ಸತ್ಯಸಾಕ್ಷಿಗಳಾದ ತನ್ನ ನಂಬಿಗಸ್ತರಾದ ಸೇವಕರನ್ನು ತಂದೆಯ ಮುಂದೆ ತನ್ನವರೆಂದು ಒಪ್ಪಿಕೊಳ್ಳುವನು. ಈಗ ನಮಗೆ ರಹಸ್ಯವಾಗಿರುವಂತದ್ದು, ಆಗ ನಮಗೆ ಸ್ಪಷ್ಟವಾಗಿ ತಿಳಿದುಬರುವುದು. KanCCh 59.4
ಪುನರುತ್ಥಾನಗೊಂಡ ಕ್ರಿಸ್ತನು ಮಹಿಮೆಯುಳ್ಳ ಮಾನವ ಸ್ವರೂಪದಲ್ಲಿಯೇ, ಪರಲೋಕಕ್ಕೆ ಏರಿಹೋದನು. ಯಾರಾರು ಆತನನ್ನು ಅಂಗೀಕರಿಸುವರೋ, ಅವರಿಗೆ ದೇವರ ಮಕ್ಕಳಾಗುವ ಅಧಿಕಾರ ಕೊಟ್ಟನು. ಇದರಿಂದ ದೇವರು ಅವರನ್ನು ತನ್ನವರೆಂದು ಅಂಗೀಕರಿಸಿಕೊಂಡು ಯುಗಯುಗಾಂತರಗಳವರೆಗೂ ಅವರು ಆತನೊಂದಿಗೆ ವಾಸಿಸಲು ಸಾಧ್ಯವಾಗುವುದು. ಈ ಲೋಕದಲ್ಲಿ ಅವರು ದೇವರಿಗೆ ನಿಷ್ಠರಾಗಿದ್ದಲ್ಲಿ, ಕೊನೆಯಲ್ಲಿ ಅವರಿಗೆ “ದೇವರ ಮುಖದರ್ಶನವಾಗುವುದು. ಅವರ ಹಣೆಗಳ ಮೇಲೆ ಆತನ ಹೆಸರು ಇರುವುದು (ಪ್ರಕಟನೆ 22:4) ದೇವರನ್ನು ಮುಖಾಮುಖಿಯಾಗಿ ನೋಡುವುದಕ್ಕಿಂತ ಪರಲೋಕದಲ್ಲಿ ಮತ್ತ್ಯಾವ ಸಂತೋಷವಿದೆ? ನಂಬಿಕೆಯಮೂಲಕ ಕ್ರಿಸ್ತನ ಕೃಪೆಯಿಂದಲೇ ರಕ್ಷಿಸಲ್ಪಟ್ಟ ಪಾಪಿಗೆ ದೇವರಮುಖವನ್ನು ನೋಡಿ ಆತನೇ ತಂದೆಯಾದ ದೇವರೆಂದು ತಿಳಿದುಕೊಳ್ಳುವುದಕ್ಕಿಂತ ಬೇರೆ ಯಾವ ಹೆಚ್ಚಿನ ಹರ್ಷವಿದೆ? KanCCh 60.1