ಅಧ್ಯಾಯ-26 — ಕ್ರೈಸ್ತ ಕುಟುಂಬದಲ್ಲಿ ಹಣಕಾಸಿನ ವ್ಯವಹಾರ
ನನ್ನ ಜನರಾದ ಕ್ರೈಸ್ತರು ಮನೆಯ ಆಡಳಿತ ಸೂತ್ರ ವಿಷಯದಲ್ಲಿ ವಿಚಾರವಂತರಾಗಿರಬೇಕೆಂದು ದೇವರು ಬಯಸುತ್ತಾನೆ. ಅಲ್ಲದೆ ಅವರು ಹಣಕಾಸಿಗೆ ಸಂಬಂಧಪಟ್ಟಂತ ವಿಚಾರವನ್ನು ಚೆನ್ನಾಗಿ ಅಧ್ಯಯನ ಮಾಡಬೇಕು ಹಾಗೂ ಅನಾವಶ್ಯಕವಾಗಿ ಹಣವನ್ನು ವ್ಯರ್ಥ ಮಾಡಬಾರದೆಂದೂ ಸಹ ಆತನು ಆಶಿಸುತ್ತಾನೆ.KanCCh 179.1
ಹಣವನ್ನು ಯಾವಾಗ ಉಳಿಸಬೇಕು ಹಾಗೂ ಯಾವಾಗ ಖರ್ಚು ಮಾಡಬೇಕೆಂದು ನೀವು ತಿಳಿದಿರಬೇಕು. ನಮ್ಮನ್ನು ನಾವೇ ನಿರಾಕರಿಸಿ ಕ್ರಿಸ್ತನ ಶಿಲುಬೆಯನ್ನು ಹೊತ್ತುಕೊಂಡು ಆತನ ಹಿಂದೆ ಹೋಗದಿದ್ದಲ್ಲಿ ನಾವು ಆತನ ಅನುಯಾಯಿಗಳಾಗಿರಲಾರೆವು. ಹಣವನ್ನು ಪ್ರಾಮಾಣಿಕವಾಗಿ ವೆಚ್ಚ ಮಾಡಬೇಕು. ನಿಮ್ಮ ಸುಖ ಸಂತೋಷಕ್ಕಾಗಿ ವೆಚ್ಚ ಮಾಡಿದ ಎಲ್ಲದರ ಲೆಕ್ಕವನ್ನು ಅಂದಾಜು ಮಾಡಬೇಕು. ನಾಲಗೆಯ ರುಚಿಯನ್ನು ತೃಪ್ತಿಪಡಿಸಲು ಹಾಗೂ ಇಂದ್ರಿಯ ಸುಖಾನುಭವಕ್ಕಾಗಿ ದುರ್ಬಳಕೆ ಮಾಡಿಕೊಂಡಿದ್ದರ ಪಟ್ಟಿ ಮಾಡಬೇಕು. ವ್ಯರ್ಥವಾದದ್ದಕ್ಕೆ ಖರ್ಚು ಮಾಡಿದ ಹಣವನ್ನು ಮನೆಗೆ ಅಗತ್ಯವಾದ ವಸ್ತುಗಳಿಗಾಗಿ ಉಪಯೋಗಿಸಬಹುದಾಗಿತ್ತು. ಆದರೆ ನೀವು ಜಿಪುಣರಾಗಿರಬಾರದು. ನೀವು ನಿಮಗೂ, ನಿಮ್ಮ ಸಹೋದರರಾದ ಇತರರಿಗೂ ಪ್ರಾಮಾಣಿಕರಾಗಿರಬೇಕು. ಜಿಪುಣತನವು ದೇವರ ಕೊಡುಗೆಯಾದ ಆಶೀರ್ವಾದವನ್ನು ದುರುಪಯೋಗ ಪಡಿಸಿದಂತೆ, ದುಂದುವೆಚ್ಚ ಮಾಡುವುದುದೂ ಸಹ ಹಣದ ದುರುಪಯೋಗವೇ ಆಗಿದೆ. ಸಣ್ಣ ಪುಟ್ಟ ಖರ್ಚುಗಳನ್ನು ಲೆಕ್ಕ ಇಡುವುದು ಅಂತಹ ಪ್ರಾಮುಖ್ಯವಲ್ಲವೆಂದು ನಿಮಗೆ ಅನಿಸಬಹುದು, ಆದರೆ ಕೊನೆಯಲ್ಲಿ ಅದೂ ಸಹ ದೊಡ್ಡ ಮೊತ್ತವಾಗಬಹುದು.KanCCh 179.2
ಥಳಕುಬಳುಕಿನ ಪೀಠೋಪಕರಣಗಳು, ವಸ್ತುಗಳ ಮೇಲೆ ಹಣ ಖರ್ಚು ಮಾಡಲು ನಿಮಗೆ ಆಮಿಷ ಉಂಟಾಗಬಹುದು. ಆ ಸಮಯದಲ್ಲಿ ಪಾಪದಿಂದ ಬಿದ್ದುಹೋದ ನಮ್ಮನ್ನು ರಕ್ಷಿಸಲು ಕ್ರಿಸ್ತನು ಮಾಡಿದ ತ್ಯಾಗ, ತನ್ನನ್ನು ತಾನೇ ನಿರಾಕರಿಸಿಕೊಂಡದ್ದನ್ನು ನೆನಪಿಸಿಕೊಳ್ಳಬೇಕು. ನಮ್ಮ ಮಕ್ಕಳಿಗೂ ಸಹ ತ್ಯಾಗ ಮನೋಭಾವ ಮತ್ತು ಸ್ವ ನಿಯಂತ್ರಣವನ್ನು ಬೆಳೆಸಿಕೊಳ್ಳಲು ಬಾಲ್ಯದಿಂದಲೇ ಕಲಿಸಬೇಕು. ಅನೇಕ ಸಭಾಪಾಲಕರು (ಬೋಧಕರು) ಹಣಕಾಸಿನ ಮುಗ್ಗಟ್ಟು ಎದುರಿಸಲು ಪ್ರಮುಖ ಕಾರಣವೆಂದರೆ, ಅವರು ತಮ್ಮ ಬಾಯಿಚಪಲಕ್ಕೆ ಕಡಿವಾಣ ಹಾಕದೆ ಇರುವುದು ಮತ್ತು ಅನಾವಶ್ಯಕ ಖರ್ಚು ಮಾಡುವುದೇ ಆಗಿದೆ. ಅನೇಕರು ಎಲ್ಲವನ್ನೂ ಕಳೆದುಕೊಂಡು ದಿವಾಳಿಯಾಗುವುದಕ್ಕೆ, ಲಂಚದ ಆಸೆಗೆ ಬಲಿಬಿದ್ದು ಭ್ರಷ್ಟಚಾರಿಗಳಾಗಿ ಅಪ್ರಾಮಾಣಿಕರಾಗುವುದಕ್ಕೂ ಅವರು ತಮ್ಮ ಹೆಂಡತಿಮಕ್ಕಳ ವೈಭವ ಜೀವನಕ್ಕೆ ಮಾಡುವ ದುಂದುವೆಚ್ಚವು ಕಾರಣವಾಗಿದೆ. ಆದ್ದರಿಂದ ತಂದೆ ತಾಯಿಯ ತಮ್ಮ ಮಕ್ಕಳಿಗೆ ಹಣಕಾಸಿನ ವಿಷಯದಲ್ಲಿ ಪ್ರಾಮಾಣಿಕವಾಗಿರುವಂತೆದೇವರ ವಾಕ್ಯದಿಂದಲೂ ಮತ್ತು ತಮ್ಮ ಸ್ವಂತ ಉದಾಹರಣೆಯಿಂದಲೂ ಎಚ್ಚರಿಕೆಯಾಗಿರುವಂತೆ ತಿಳುವಳಿಕೆ ನೀಡುವುದು ಪ್ರಾಮುಖ್ಯವಾಗಿದೆಯಲ್ಲವೇ?KanCCh 179.3
ತನ್ನನ್ನು ತಾನೇ ಬರಿದು ಮಾಡಿಕೊಂಡ ಸಾತ್ವಿಕನಾದ ಕ್ರಿಸ್ತನ ವಿನಮ್ರ ಅನುಯಾಯಿಗಳು ನಾವು ಐಶ್ವರ್ಯವಂತರೆಂದು ಸೋಗು ಹಾಕಬಾರದು ಅಥವಾ ನಾವಿರುವುದಕ್ಕಿಂತಲೂ ಹೆಚ್ಚಾಗಿ ಹೊಗಳಿಕೊಳ್ಳಬಾರದು. ನಮ್ಮ ನೆರೆಯವರು ಒಳ್ಳೆಯ ಮನೆಕಟ್ಟಿ ಅದನ್ನು ಉತ್ತಮವಾದ ಬೆಲೆಬಾಳುವ ವಸ್ತುಗಳಿಂದ ಅಲಂಕರಿಸಿದರೆ, ನಾವು ಅದರಿಂದ ನೆಮ್ಮದಿ ಕಳೆದುಕೊಳ್ಳಬಾರದು. ಅದನ್ನು ನಾವು ಅನುಕರಿಸಬಾರದು. ನಮ್ಮ ಬಾಯಿಚಪಲ ಹಾಗೂ ಆಸೆ ಈಡೇರಿಸಿಕೊಳ್ಳುವುದಕ್ಕೆ ಅಥವಾ ಅತಿಥಿಗಳನ್ನು ಸಂಪ್ರೀತಿಗೊಳಿಸಲು ನಾವು ಮಾಡುವ ಅನಾವಶ್ಯಕ ಸ್ವಾರ್ಥದ ಖರ್ಚನ್ನು ಕ್ರಿಸ್ತನು ಗಮನಿಸುತ್ತಾನೆ. ಸಂಪತ್ತನ್ನು ನಾವಾಗಲಿ ಅಥವಾ ನಮ್ಮ ಮಕ್ಕಳಾಗಲಿ ಒಂದು ಆಡಂಬರದ ಪ್ರದರ್ಶನವನ್ನಾಗಿ ಮಾಡುವುದು ನಮಗೆ ಒಂದು ಉರುಲಾಗಿ ಪರಿಣಮಿಸುವುದು. KanCCh 180.1
ಉಪಯುಕ್ತವಾಗುವ ಯಾವುದನ್ನೂ ಸಹ ಬಿಸಾಡಬಾರದು. ಇದಕ್ಕೆ ನಮಗೆ ಜ್ಞಾನ ವಿವೇಕ ಹಾಗೂ ದೂರದೃಷ್ಟಿಯ ಅಗತ್ಯವಿದೆ. ಸಣ್ಣ ವಿಷಯಗಳಲ್ಲಿ ಉಳಿತಾಯ ಮಾಡದೇ ಇರುವುದು, ಅನೇಕ ಕುಟುಂಬಗಳಿಗೆ ಜೀವನದ ಮೂಲಭೂತ ಅಗತ್ಯಗಳ ಕೊರತೆ ಉಂಟಾಗಲು ಕಾರಣವೆಂದು ಶ್ರೀಮತಿ ವೈಟಮ್ಮನವರು ತಿಳಿಸುತ್ತಾರೆ.KanCCh 180.2