ಹೊಟ್ಟೆಕಿಚ್ಚಿನ ಮನುಷ್ಯನು ಇತರರಲ್ಲಿ ಎಂದೂ ಒಳ್ಳೆಯದನ್ನು ಕಾಣುವುದಿಲ್ಲ
ನಮ್ಮ ಜೀವನದಲ್ಲಿ ಬರುವ ಗೊಂದಲದ ಸಮಸ್ಯೆಗಳು ಮತ್ತು ನಿರಾಶೆಗಳು ನಮ್ಮಲ್ಲಿ ಅಸಹನೆ ಮತ್ತು ತಳಮಳ ತರಬಾರದು. ದೇವರ ಮನಸ್ಸು ನೋಯಿಸಿ ಆತನಿಗೆ ವ್ಯಥೆ ಉಂಟುಮಾಡುವಂತ ಯಾವ ಕಲಹ, ಕೆಟ್ಟ ಮಾತುಗಳು ಹಾಗೂ ಕೆಟ್ಟ ಆಲೋಚನೆಗಳು ನಮ್ಮಲ್ಲಿ ಬರಬಾರದು. ಸಹೋದರರೇ, ನಿಮ್ಮ ಹೃದಯದಲ್ಲಿ ಹೊಟ್ಟೆಕಿಚ್ಚು ಮತ್ತು ಸತ್ಯದ ವಿಷಯದಲ್ಲಿ ಯಾವುದೇ ಕೆಟ್ಟ ಸಂದೇಹ ತುಂಬಿದ್ದಲ್ಲಿ, ಪವಿತ್ರಾತ್ಮನು ನಿಮ್ಮಲ್ಲಿ ನೆಲೆಗೊಳ್ಳಲಾರನು. ಕ್ರಿಸ್ತನಲ್ಲಿ ಪರಿಪೂರ್ಣತೆಗಾಗಿ ತವಕಪಡಿರಿ, ಆತನಂತೆ ಶ್ರಮಪಡಿರಿ. ನಿಮ್ಮ ಪ್ರತಿಯೊಂದು ಆಲೋಚನೆ ಮತ್ತು ನಡೆನುಡಿಗಳಲ್ಲಿ ಆತನನ್ನು ಮಹಿಮೆಪಡಿಸಿ ಪ್ರಕಟಿಸಬೇಕು. ಅಪೊಸ್ತಲರ ಕಾಲದಲ್ಲಿ ಶಿಷ್ಯರೆಲ್ಲರೂ ಏಕ ಮನಸ್ಸುಳ್ಳವರಾಗಿದ್ದರೋ, ಅಂತದ್ದೇ ಪ್ರೀತಿಯು ನಿಮ್ಮಲ್ಲಿ ದಿನವೂ ಕಂಡುಬರಬೇಕು. ಇಂತಹ ಪ್ರೀತಿಯು ಪ್ರಾಣ, ಆತ್ಮ, ಶರೀರ ಹಾಗೂ ಮನಸ್ಸಿಗೆ ಆರೋಗ್ಯ ತರುತ್ತದೆ. ನಿಮ್ಮ ಆತ್ಮೀಕ ಜೀವನಕ್ಕೆ ಬಲತರುವಂತ ಪರಿಸರವಿರಬೇಕು. ನಿಮ್ಮಲ್ಲಿ ನಂಬಿಕೆ, ನಿರೀಕ್ಷೆ, ಧೈರ್ಯ ಮತ್ತು ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ದೇವರು ಕೊಡುವಂತ ಸಮಾಧಾನವು ನಿಮ್ಮ ಹೃದಯದಲ್ಲಿ ನೆಲಸಿರಲಿ.KanCCh 205.3
ಹೊಟ್ಟೆಕಿಚ್ಚು ಮೂರ್ಖತನದ ಸ್ವಭಾವ ಮಾತ್ರವಲ್ಲದೆ, ದೇಹ ಹಾಗೂ ಮನಸ್ಸಿನ ಒಂದು ವ್ಯಾಧಿಯೂ ಆಗಿದ್ದು ಶರೀರದ ಎಲ್ಲಾ ಅಂಗಗಳನ್ನು ಅವ್ಯವಸ್ಥೆಗೊಳಿಸುತ್ತದೆ. ಈ ಗುಣವು ಸೈತಾನನಿಂದ ಮೊದಲು ಆರಂಭವಾಯಿತು. ಅವನು ಪರಲೋಕದಲ್ಲಿ ಮೊದಲಿನವನು ಅಂದರೆ ದೇವರಾಗಬೇಕೆಂದು ಬಯಸಿದನು. ಆದರೆ ಅವನು ಬಯಸಿದಂತ ಅಧಿಕಾರ ಮತ್ತು ಮಹಿಮೆ ಅವನಿಗೆ ದೊರಕಲಿಲ್ಲವಾದ್ದರಿಂದ ದೇವರ ಸರ್ಕಾರಕ್ಕೆ ವಿರುದ್ಧವಾಗಿ ದಂಗೆ ಎದ್ದನು. ಅವನಿಗೆ ನಮ್ಮ ಆದಿ ತಂದೆ-ತಾಯಿಯರಾದ ಆದಾಮ ಹವ್ವಳಲ್ಲಿ ಹೊಟ್ಟೆಕಿಚ್ಚುಂಟಾಗಿ, ಅವರನ್ನು ಶೋಧನೆಗೆ ಒಳಪಡಿಸಿ ಪಾಪದಲ್ಲಿ ಬೀಳಿಸಿದನು.KanCCh 206.1
ಈ ರೀತಿಯಾಗಿ ಸೈತಾನನು ಅವರನ್ನು ಹಾಗೂ ಎಲ್ಲಾ ಮನುಕುಲದವರನ್ನು ನಾಶಮಾಡಿದನು. ಹೊಟ್ಟೆಕಿಚ್ಚಿನ ಮನುಷ್ಯನು ಇತರರ ಒಳ್ಳೆಯಗುಣಗಳು ಮತ್ತು ಶ್ರೇಷ್ಠ ಕಾರ್ಯಗಳನ್ನು ಕಾಣುವುದಿಲ್ಲ. ಅವನು ಯಾವಾಗಲೂ ಶ್ರೇಷ್ಠವಾದವುಗಳ ಬಗ್ಗೆ ತಪ್ಪು ವರದಿನೀಡುತ್ತಾನೆ ಮತ್ತು ನಿಂದಿಸಿ ಅಪಕೀರ್ತಿತರುತ್ತಾನೆ. ಹೊಟ್ಟೆಕಿಚ್ಚಿನ ಮನುಷ್ಯನಿಂದ ಏನನ್ನೂ ನಿರೀಕ್ಷಿಸಲಾಗದು. ಒಬ್ಬ ವ್ಯಕ್ತಿಯ ಮೇಲೆ ಹೊಟ್ಟೆಕಿಚ್ಚುಪಟ್ಟಲ್ಲಿ ಅವನು ನಮಗಿಂತ ಶ್ರೇಷ್ಠನೆಂದು ಒಪ್ಪಿಕೊಂಡಂತಾಗುವುದರಿಂದ, ಅದನ್ನು ಸಮ್ಮತಿಸಲು ಅಹಂಕಾರ ಅಡ್ಡಿ ಬರುತ್ತದೆ. ಹೊಟ್ಟೆಕಿಚ್ಚುಳ್ಳ ಮನುಷ್ಯನಿಗೆ ಅವನ ಪಾಪದ ಬಗ್ಗೆ ಮನವರಿಕೆ ಮಾಡಿಕೊಡಲು ಯಾವುದೇ ಪ್ರಯತ್ನ ಮಾಡಿದರೂ, ಅವನು ಇನ್ನೂ ಹೆಚ್ಚು ದ್ವೇಷ ತೋರಿಸುವನು. KanCCh 206.2
ಹೊಟ್ಟೆಕಿಚ್ಚಿನ ವ್ಯಕ್ತಿಯು ಎಲ್ಲಿ ಹೋದರೂ ವಿಷ ಹರಡುತ್ತಾನೆ ಮತ್ತು ಗೆಳೆಯರಿಂದ ದೂರವಾಗುತ್ತಾನೆ. ಅಲ್ಲದೆ ದ್ವೇಷವುಂಟು ಮಾಡಲು ಪ್ರಯತ್ನಿಸಿ ದೇವರಿಗೂ ಮತ್ತು ಮನುಷ್ಯರಿಗೂ ಎದುರು ಬೀಳುತ್ತಾನೆ. ಅವನು ಯಾವುದೇ ಪ್ರಯತ್ನಮಾಡದೆ, ತನ್ನನ್ನು ನಿರಾಕರಿಸದೆ ಅತ್ಯುತ್ತಮವಾದ ಹಾಗೂ ಮಹೋನ್ನತವಾದ ಸಾಧನೆ ಮಾಡಬೇಕೆಂದು ಅಂದುಕೊಳ್ಳುತ್ತಾನೆ. ಅಲ್ಲದೆ ಇತರರ ಪ್ರಯತ್ನಗಳಿಗೆ ಸಲ್ಲಬೇಕಾದ ಗೌರವ ಸಲ್ಲಿಸುವುದಿಲ್ಲ. KanCCh 206.3
ಜಗಳ ಹುಟ್ಟಿಸಿ ಮನಸ್ತಾಪ ಉಂಟುಮಾಡುವ ಮತ್ತು ಗೊಡ್ಡು ಹರಟೆಯಲ್ಲಿ ತೊಡಗಿರುವ ನಾಲಗೆಯು ಕಾಡಿಗೆ ಬೆಂಕಿಹಚ್ಚುತ್ತದೆಂದು ಯಾಕೋಬನು ಹೇಳುತ್ತಾನೆ. ಅಲ್ಲದೆ ತಾನೇ ನರಕದಿಂದ ಬೆಂಕಿ ಹತ್ತಿಸಿಕೊಳ್ಳುತ್ತಾ ಪ್ರಪಂಚವೆಂಬ ಚಕ್ರಕ್ಕೆ ಬೆಂಕಿ ಹಚ್ಚುತ್ತದೆ (ಯಾಕೋಬನು 3:6,7). ಮುಗ್ಧರ ಹೆಸರಿಗೆ ಅಪಕೀರ್ತಿ ತರುವ ಸುಳ್ಳು ಸುದ್ದಿ ಹಬ್ಬಿಸುವ ವ್ಯಕ್ತಿಗೆ ಯಾವ ಕಾಳಜಿ ಇರುತ್ತದೆ?. ತಮ್ಮದೇ ಆದ ಭಾರದಿಂದ ಆಗಲೇ ನಿರಾಶೆಯಿಂದ ಕುಗ್ಗಿ ಹೋಗಿರುವವರ ನಿರೀಕ್ಷೆ ಮತ್ತು ಧೈರ್ಯವನ್ನು ಹೊಟ್ಟೆಕಿಚ್ಚಿನ ವ್ಯಕ್ತಿಯು ನಾಶಮಾಡಿದರೂ, ಅವನು ತನ್ನ ಕೆಟ್ಟಕೆಲಸ ನಿಲ್ಲಿಸುವುದಿಲ್ಲ. ಇತರರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಹಗರಣ ಉಂಟು ಮಾಡುವುದರಲ್ಲಿಯೇ ಅವನಿಗೆ ಆಸಕ್ತಿ, ಕ್ರೈಸ್ತರೆಂದು ಹೇಳಿಕೊಳ್ಳುವವರೂ ಸಹ ಪರಿಶುದ್ಧವೂ, ಒಳ್ಳೆಯದೂ, ಶ್ರೇಷ್ಠವಾದದ್ದು ಮತ್ತು ಮನೋಹರವೂ ಆದದ್ದನ್ನು ನಿರ್ಲಕ್ಷಿಸಿ, ಆಕ್ಷೇಪಣೀಯವೂ, ಅಹಿತವೂ ಆದದ್ದನ್ನು ಕಾಪಾಡಿಕೊಂಡು ಲೋಕಕ್ಕೆ ಸಾರುತ್ತಾರೆ.KanCCh 206.4