Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದಾನಿಯೇಲನು- ಪರಿಶುದ್ಧ ಜೀವನಕ್ಕೆ ಒಂದು ಮಾದರಿ

    ಪರಿಶುದ್ಧ ಸ್ವಭಾವವು ಏನೆಂಬುದಕ್ಕೆ ದಾನಿಯೇಲನ ಜೀವನವು ಒಂದು ಮಾದರಿಯಾಗಿದೆ. ಅದು ಎಲ್ಲರಿಗೂ, ಅದರಲ್ಲಿಯೂ ವಿಶೇಷವಾಗಿ ಯೌವನಸ್ಥರಿಗೆ ಒಂದು ಅಮೂಲ್ಯ ಪಾಠವಾಗಿದೆ. ದೇವರ ನಿಯಮಗಳಿಗೆ ಸಂಪೂರ್ಣವಾಗಿ ವಿಧೇಯರಾಗಿರುವುದು ಶರೀರ ಹಾಗೂ ಮನಸ್ಸಿನ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಉನ್ನತವಾದ ನೈತಿಕ ಹಾಗೂ ಬೌದ್ಧಿಕ ಮಟ್ಟವನ್ನು ಮುಟ್ಟಲು ನಮ್ಮ ಜೀವನದ ಎಲ್ಲಾ ಅಭ್ಯಾಸಗಳಲ್ಲಿ ಮಿತ ಸಂಯಮದಿಂದಿರುವುದು ಮತ್ತು ದೇವರಬಲ ಹಾಗೂ ಜ್ಞಾನವಿವೇಕವನ್ನು ಹೊಂದಿಕೊಳ್ಳುವುದು ಬಹಳ ಅಗತ್ಯವಾಗಿದೆ. KanCCh 32.1

    ದಾನಿಯೇಲನ ಸ್ವಭಾವವು ನಿರ್ದೋಷವಾಗಿದ್ದಷ್ಟೂ, ಅವನ ವಿರುದ್ಧವಾಗಿ ಅವನಶತ್ರುಗಳ ದ್ವೇಷವೂ ಅಷ್ಟೇಹೆಚ್ಚಾಗಿತ್ತು. ಅವನ ನಡತೆಯಲ್ಲಾಗಲಿ ಅಥವಾ ರಾಜ್ಯಭಾರದಕಾರ್ಯದ ವಿಷಯದಲ್ಲಾಗಲಿ ಅವರು ಅವನ ಮೇಲೆ ತಪ್ಪುಹೊರಿಸುವುದಕ್ಕೆ ಸಾಧ್ಯವಾಗಲಿಲ್ಲ.ಆದುದರಿಂದ ದಾನಿಯೇಲನ ವೈರಿಗಳು “ಇವನಮೇಲೆ ತಪ್ಪುಹೊರಿಸಲು, ಇವನದೇವಧರ್ಮದ ಮೂಲಕವೇ ಹೊರತು ಇನ್ನಾವುದರಲ್ಲಿಯೂ ನಮಗೆ ಅವಕಾಶದೊರೆಯದು” ಅಂದುಕೊಂಡರು (ದಾನಿಯೇಲನು 6:5).KanCCh 32.2

    ಕ್ರೈಸ್ತರೆಲ್ಲರೂ ಇದರಿಂದ ಒಂದು ದೊಡ್ಡಪಾಠ ಕಲಿಯಬಹುದಲ್ಲವೇ? ದಾನಿಯೇಲನವೈರಿಗಳು ಅಪಾರವಾದ ಹೊಟ್ಟೆಕಿಚ್ಚಿನಿಂದ ಅವನ ಮೇಲೆ ತಪ್ಪುಹೊರಿಸಲು ಕಾರಣಹುಡುಕುತ್ತಿದ್ದರು. ಆದರೆ ಅವನ ನಡೆನುಡಿಗಳಲ್ಲಿ ಅವರು ಒಂದುತಪ್ಪನ್ನಾದರೂ ಕಾಣಲುಸಾಧ್ಯವಾಗಲಿಲ್ಲ. ಅಲ್ಲದೆ ದಾನಿಯೇಲನು ತಾನು ಪರಿಶುದ್ಧನೆಂದು ಹೇಳಿಕೊಳ್ಳಲಿಲ್ಲ.ಆದರೆ ಅದಕ್ಕಿಂತಲೂ ಉತ್ತಮವಾದ ಸಮರ್ಪಣೆಯ ಹಾಗೂ ನಂಬಿಗಸ್ತಿಕೆಯ ಜೀವನನಡಿಸಿದನು.KanCCh 32.3

    ರಾಜಾಜ್ಞೆಯು ಹೊರಟಿತು. ವೈರಿಗಳು ತನ್ನನ್ನು ನಾಶಮಾಡುವ ಉದ್ದೇಶಹೊಂದಿರುವುದು ದಾನಿಯೇಲನಿಗೆ ಚೆನ್ನಾಗಿ ತಿಳಿದಿತ್ತು. ಆದರೂ ಅವನು ತನ್ನ ನಡತೆಯನ್ನುಬದಲಾಯಿಸಿಕೊಳ್ಳಲಿಲ್ಲ. ಸಮಾಧಾನಚಿತ್ತದಿಂದ ತನ್ನ ಕರ್ತವ್ಯ ನಿರ್ವಹಿಸಿದನು. ಅಲ್ಲದೆಕದವಿಲ್ಲದ ಕಿಟಕಿಗಳುಳ್ಳ ತನ್ನ ಮಹಡಿಯ ಕೋಣೆಯಲ್ಲಿ ಯಥಾಪ್ರಕಾರ ದಿನಕ್ಕೆಮೂರಾವರ್ತಿ ಮೊಣಕಾಲೂರಿ ತನ್ನ ದೇವರಿಗೆ ಪ್ರಾರ್ಥನೆ ಮಾಡಿ ಸ್ತೋತ್ರ ಸಲ್ಲಿಸಿದನು(ದಾನಿಯೇಲನು 6:10). ಈ ಕಾರ್ಯದ ಮೂಲಕ ದಾನಿಯೇಲನು ನಿರ್ಭೀತಿಯಿಂದ ತಾನು ಯಾರಿಗೆ ಪ್ರಾರ್ಥಿಸಬೇಕು ಅಥವಾ ಯಾರಿಗೆ ಪ್ರಾರ್ಥಿಸಬಾರದು ಎಂಬುದನ್ನು ನಿರ್ಧರಿಸಲು ಲೋಕದ ಯಾವ ಶಕ್ತಿಗೂ ಹಕ್ಕಿಲ್ಲವೆಂದು ಘೋಷಿಸಿದನು. ತಾನು ನಂಬಿದ್ದ ಸಿದ್ಧಾಂತಗಳನ್ನು ಅನುಸರಿಸುವುದರಲ್ಲಿ ಅವನು ಎಂತಹ ಶ್ರೇಷ್ಠ ವ್ಯಕ್ತಿಯಾಗಿದ್ದನಲ್ಲವೇ! ಕ್ರೈಸ್ತತ್ವದ ಧಾರ್ಮಿಕನಿಷ್ಠೆ ಹಾಗೂ ನೈತಿಕಸ್ಥೈರ್ಯದ ಬಗ್ಗೆ ಅವನು ಇಂದಿಗೂ ಸಹ ಜಗತ್ತಿನಲ್ಲಿ ಅನುಕರಣೀಯ ಮಾದರಿಯಾಗಿದ್ದಾನಲ್ಲವೇ! ಯೆಹೋವ ದೇವರಿಗೆ ಪ್ರಾರ್ಥಿಸುವುದರಿಂದ ತನ್ನಪ್ರಾಣಕ್ಕೆ ಅಪಾಯವೆಂದು ತಿಳಿದಿದ್ದರೂ, ದಾನಿಯೇಲನು ಮನಃಪೂರ್ವಕವಾಗಿ ಆತನಿಗೆ ಪ್ರಾರ್ಥಿಸಿದನು. KanCCh 32.4

    “ರಾಜನ ಅಪ್ಪಣೆಯಾಯಿತು; ದಾನಿಯೇಲನನ್ನು ತಂದು ಸಿಂಹದ ಗವಿಯಲ್ಲಿ ಹಾಕಿಬಿಟ್ಟರು. ಆಗ ರಾಜನು ದಾನಿಯೇಲನಿಗೆ- ನೀನು ನಿತ್ಯವೂ ಭಜಿಸುವ ದೇವರು ನಿನ್ನನ್ನುದ್ಧರಿಸಲಿ ಎಂದು ಹರಸಿದನು” (ದಾನಿಯೇಲನು 5:16) “ಮಾರನೆಯ ಬೆಳಿಗ್ಗೆ ರಾಜನು... ದಾನಿಯೇಲನಿದ್ದ ಗವಿಯ ಸಮೀಪಕ್ಕೆ ಬಂದು ದುಃಖಧ್ವನಿಯಿಂದ ಅವನನ್ನು ಕೂಗಿ - ದಾನಿಯೇಲನೇ, ಜೀವಸ್ವರೂಪನಾದ ದೇವರ ಸೇವಕನೇ, ನೀನು ನಿತ್ಯವೂ ಭಜಿಸುವ ನಿನ್ನ ದೇವರು ನಿನ್ನನ್ನು ಸಿಂಹಗಳಿಂದ ಉದ್ಧರಿಸಲು (ಬಿಡಿಸಲು) ಶಕ್ತನಾದನೋ?” ಎಂದು ಕೇಳಿದನು (6:19,20). ಅದಕ್ಕುತ್ತರವಾಗಿ ಪ್ರವಾದಿಯಾದ ದಾನಿಯೇಲನು ರಾಜನಿಗೆ - “ಅರಸೇ, ಚಿರಂಜೀವಿಯಾಗಿರು! ನನ್ನ ದೇವರು ತನ್ನ ದೂತನನ್ನು ಕಳುಹಿಸಿ ಸಿಂಹಗಳ ಬಾಯಿಗಳನ್ನು ಬಂಧಿಸಿದನು; ಅವುಗಳಿಂದ ನನಗೆ ಯಾವ ಹಾನಿಯೂ ಆಗಲಿಲ್ಲ. ಯಾಕೆಂದರೆ ನಾನು ಆತನ ದೃಷ್ಟಿಗೆ ನಿರ್ಮಲನಾಗಿ ಕಂಡುಬಂದೆನು, ರಾಜನಾದ ನಿನಗೂ ಯಾವ ದ್ರೋಹವನ್ನೂ ಮಾಡಲಿಲ್ಲ” ಎಂದು ಹೇಳಿದನು (6:21, 22).KanCCh 33.1

    “ಅದನ್ನು ಕೇಳಿ ರಾಜನು ಬಹುಸಂತೋಷಪಟ್ಟು ದಾನಿಯೇಲನನ್ನು ಗವಿಯೊಳಗಿಂದ ಮೇಲಕ್ಕೆತ್ತಬೇಕೆಂದು ಅಪ್ಪಣೆ ಮಾಡಲು, ಅವನನ್ನು ಅಲ್ಲಿಂದ ಮೇಲಕ್ಕೆತ್ತಿದರು. ಅವನು ತನ್ನ ದೇವರಲ್ಲಿ ಭರವಸವಿಟ್ಟ ಕಾರಣ ಅವನಿಗೆ ಯಾವ ಹಾನಿಯೂ ಆಗಿರಲಿಲ್ಲ” (6:23). ಈ ರೀತಿಯಾಗಿ ದೇವರ ಸೇವಕನಾದ ದಾನಿಯೇಲನು ರಕ್ಷಿಸಲ್ಪಟ್ಟನು. ಅವನ ಶತ್ರುಗಳು ಅವನ ನಾಶಕ್ಕಾಗಿ ಹೊಂಚು ಹಾಕಿದ ಕುಯುಕ್ತಿಯಿಂದ ತಾವೇ ನಾಶವಾದರು. ರಾಜನ ಅಪ್ಪಣೆಯಂತೆ ದಾನಿಯೇಲನ ಮೇಲೆ ದೂರು ಹೊರಿಸಿದವರನ್ನು... ಸಿಂಹಗಳ ಗವಿಯಲ್ಲಿ ಹಾಕಿಬಿಟ್ಟರು. ಸಿಂಹಗಳು ಅವರ ಮೇಲೆ ಹಾರಿ.. ಅವರನ್ನು ಚೂರು ಚೂರು ಮಾಡಿದವು (6:24). KanCCh 33.2

    ಯೆಹೂದ್ಯರು ಬಾಬೆಲಿನಲ್ಲಿ ಸೆರೆಯಾಗಿರಬೇಕೆಂದು ಯೆರೆಮೀಯನು ಪ್ರವಾದಿಸಿದ 70 ವರ್ಷಗಳ ಕಾಲವು ಮುಕ್ತಾಯವಾಗುವ ಸಮಯ ಸಮೀಪಿಸಿತು. ಆಗ ದಾನಿಯೇಲನು ಈ ಪ್ರವಾದನೆಗಳ ಬಗ್ಗೆ ಹೆಚ್ಚು ಗಮನಕೊಟ್ಟನು (ದಾನಿಯೇಲನು 9:2). ಅವನು ದೇವರಮೇಲಣ ತನ್ನ ನಿಷ್ಠೆಯನ್ನು ಆತನ ಮುಂದೆ ಹೇಳಿಕೊಳ್ಳಲಿಲ್ಲ. ತಾನು ಪರಿಶುದ್ಧನೂ, ನಿರ್ಮಲನೂ ಎಂದು ಹೇಳಿಕೊಳ್ಳುವುದಕ್ಕೆ ಬದಲಾಗಿ, ಗೌರವಾನ್ವಿತ ಪ್ರವಾದಿಯಾದ ದಾನಿಯೇಲನು ಯೆಹೂದ್ಯರ ಪಾಪಗಳ ನಿಮಿತ್ತ ಉಪವಾಸವಿದ್ದು... ಬೂದಿ ಬಳಿದುಕೊಂಡು ತನ್ನನ್ನು ತಾನೇ ದೀನ ಮನಸ್ಸಿನಿಂದ ತಗ್ಗಿಸಿಕೊಂಡನು. ಮಧ್ಯಾಹ್ನದಲ್ಲಿ ಪ್ರಕಾಶಿಸುವ ಸೂರ್ಯನ ಬೆಳಕು ನಕ್ಷತ್ರಗಳಿಗಿಂತ ಹೆಚ್ಚು ಪ್ರಕಾಶವುಳ್ಳದ್ದಾಗಿರುವಂತೆ, ದೇವರು ದಾನಿಯೇಲನಿಗೆ ಕೊಟ್ಟ ಜ್ಞಾನವಿವೇಕವು ಜಗತ್ತಿನ ಇತರ ಮಹಾಪುರುಷರ ಜ್ಞಾನವಿವೇಕಗಳಿಗಿಂತ ಎಷ್ಟೋಪಟ್ಟು ಅಧಿಕವಾಗಿತ್ತು. ಆದಾಗ್ಯೂ ಅವನು ಮಾಡಿದ ಪ್ರಾರ್ಥನೆಯು ದೇವರಿಗೆ ಬಹಳ ಮೆಚ್ಚುಗೆಯಾಗಿತ್ತು. ದಾನಿಯೇಲನು ಬಹಳ ದೀನತೆಯಿಂದ ತನ್ನನ್ನು ತಗ್ಗಿಸಿಕೊಂಡು ಕಣ್ಣೀರಿಟ್ಟು ತನಗಾಗಿಯೂ, ತನ್ನ ಜನರಿಗಾಗಿಯೂ ಪ್ರಾರ್ಥಿಸಿದನು.KanCCh 33.3

    ದಾನಿಯೇಲನ ಪ್ರಾರ್ಥನೆಯು ಪರಲೋಕಕ್ಕೆ ಮುಟ್ಟುತ್ತಿರುವಾಗಲೇ, ಗಬ್ರಿಯೇಲ್ ದೇವದೂತನು ಬಂದು ಅವನ ಪ್ರಾರ್ಥನೆಯನ್ನು ದೇವರು ಕೇಳಿದ್ದಾಗಿಯೂ ಹಾಗೂ ಉತ್ತರವು ಆಗಲೇ ಕೊಡಲ್ಪಟ್ಟಿದೆ ಎಂದು ತಿಳಿಸಿದನು. ಬಲಿಷ್ಠನಾದ ಈ ದೇವದೂತನು ದಾನಿಯೇಲನಿಗೆ ಬುದ್ಧಿವಿವೇಕಗಳನ್ನು ಕೊಡುವುದಕ್ಕೂ ಹಾಗೂ ಜಗತ್ತಿನ ಮುಂದಿನ ಚರಿತ್ರೆಯ ರಹಸ್ಯವನ್ನು ತಿಳಿಸುವುದಕ್ಕೂ ದೇವರಿಂದ ಅಪ್ಪಣೆ ಹೊಂದಿ ಬಂದಿದ್ದನು. KanCCh 34.1

    ಪ್ರಾರ್ಥನೆಯ ಮೂಲಕ ದಾನಿಯೇಲನು ಮಾಡಿದ ಭಿನ್ನಹಕ್ಕೆ ಯೆಹೂದ್ಯರಿಗೆ ಅತ್ಯಗತ್ಯವಾದ ಬೆಳಕು ಹಾಗೂ ಸತ್ಯದೊರೆತದ್ದು ಮಾತ್ರವಲ್ಲದೆ, ಜಗತ್ತಿನಲ್ಲಿ ಮುಂದೆ ನಡೆಯಲಿರುವ ಪ್ರಮುಖವಾದ ಮಹಾಘಟನೆಗಳ ದೃಶ್ಯವೂ ಹಾಗೂ ರಕ್ಷಕನಾದ ಕ್ರಿಸ್ತನ ಎರಡನೇ ಬರೋಣದ ದರ್ಶನವೂ ಸಹ ಅವನಿಗೆ ಕೊಡಲ್ಪಟ್ಟಿತು. ತಾವು ಪರಿಶುದ್ಧರೆಂದು ಹೇಳಿಕೊಳ್ಳುವವರು ಸತ್ಯವೇದವನ್ನು ಅಧ್ಯಯನ ಮಾಡಲು ಹಾಗೂ ಅದರಲ್ಲಿನ ಸತ್ಯವನ್ನು ಸ್ಪಷ್ಟವಾಗಿ ತಿಳಿಸುವ ಜ್ಞಾನ ವಿವೇಕಕ್ಕಾಗಿ ದೇವರೊಂದಿಗೆ ಪ್ರಾರ್ಥನೆಯ ಮೂಲಕ ಹೋರಾಡಬೇಕು. ಇಲ್ಲದಿದ್ದಲ್ಲಿ ನಿಜವಾದ ಪರಿಶುದ್ಧತೆ ಏನೆಂದು ಅವರಿಗೆ ತಿಳಿದಿರುವುದಿಲ್ಲ.KanCCh 34.2

    ದಾನಿಯೇಲನು ದೇವರೊಂದಿಗೆ ಮಾತಾಡಿದನು. ಅವನು ದರ್ಶನದಲ್ಲಿ ಪರಲೋಕವನ್ನು ನೋಡಿದನು. ಅವನ ದೀನಸ್ವಭಾವ ಮತ್ತು ಮನಃಪೂರ್ವಕವಾಗಿ ಸತ್ಯವನ್ನು ತಿಳಿದುಕೊಳ್ಳಬೇಕೆಂಬ ತವಕದ ನಿಮಿತ್ತ ಪರಲೋಕದಿಂದ ಅವನಿಗೆ ಇಂತಹ ಉನ್ನತ ಗೌರವ ದೊರೆಯಿತು. ದೇವರವಾಕ್ಯವನ್ನು ಹೃದಯ ಪೂರ್ವಕವಾಗಿ ನಂಬುವವರು ಆತನಚಿತ್ತದ ಜ್ಞಾನಕ್ಕಾಗಿ ಹಸಿದು ಬಾಯಾರಿದವರಾಗಿರುತ್ತಾರೆ. ದೇವರು ಸ್ವತಃ ಸತ್ಯವೂ, ಸತ್ಯದ ಮೂಲ ಕರ್ತನೂ ಆಗಿದ್ದಾನೆ. ತನ್ನನ್ನು ಹುಡುಕುವವರಿಗೆ ದೈವೀಕಬೆಳಕು ನೀಡಿ, ತಾನು ಪ್ರಕಟ ಪಡಿಸಿದ ಸತ್ಯಗಳನ್ನು ಗ್ರಹಿಸಿಕೊಳ್ಳುವಂತೆ ಜ್ಞಾನವನ್ನು ಅವರಿಗೆ ದೇವರು ಕೊಡುತ್ತಾನೆ.KanCCh 34.3

    ಜಗತ್ತಿನ ರಕ್ಷಕನಾದ ಕ್ರಿಸ್ತನು ತಿಳಿಯಪಡಿಸಿದ ಮಹಾಸತ್ಯಗಳು, ಅವುಗಳನ್ನು ಬಚ್ಚಿಟ್ಟ ನಿಧಿಯಂತೆ ಹುಡುಕುವವರಿಗಾಗಿ ಕೊಡಲ್ಪಟ್ಟಿವೆ. ದಾನಿಯೇಲನು ವೃದ್ಧನಾಗಿದ್ದನು. ಬಾಬೆಲ್ ಸಂಸ್ಥಾನದಲ್ಲಿ ಅನ್ಯಚಕ್ರವರ್ತಿಗಳ ಮರುಳುಗೊಳಿಸುವ ಆಸ್ಥಾನದಲ್ಲಿ ಅವನು ತನ್ನ ಜೀವನದ ಬಹುಭಾಗ ಕಳೆದಿದ್ದನು. ಆದಾಗ್ಯೂ ದಾನಿಯೇಲನು ಇಷ್ಟೆಲ್ಲಾ ವೈಭವಗಳನ್ನು ಬಿಟ್ಟು, ಉಪವಾಸದಿಂದ ದೇವರ ಮುಂದೆ ತನ್ನನ್ನು ತಗ್ಗಿಸಿಕೊಂಡು ಉನ್ನತವಾದ ದೇವರ ಉದ್ದೇಶಗಳೇನೆಂದು ತಿಳಿದುಕೊಳ್ಳುವ ಜ್ಞಾನವನ್ನು ಬಯಸಿದನು. ಅವನ ಈ ಭಿನ್ನಹಕ್ಕೆ ಉತ್ತರವಾಗಿ, ಲೋಕದ ಕೊನೆಯ ಕಾಲದಲ್ಲಿ ಜೀವಿಸುವವರಿಗೆ ತಿಳಿಸಬೇಕಾದ ಸತ್ಯದ ಬೆಳಕು ಅವನಿಗೆ ಪರಲೋಕದಿಂದ ಕೊಡಲ್ಪಟ್ಟಿತು. ಅಂದಮೇಲೆ ಪರಲೋಕದಿಂದ ತಿಳಿಸಲ್ಪಟ್ಟ ಈ ಸತ್ಯಗಳನ್ನು ದೇವರು ನಮಗೆ ಮನವರಿಕೆ ಮಾಡಿಕೊಡುವಂತೆ ನಾವು ಹೆಚ್ಚಾದ ಶ್ರದ್ಧೆಯಿಂದ ಮನಃಪೂರ್ವಕವಾಗಿ ಆತನಿಗೆ ಮೊರೆಯಿಡಬೇಕಲ್ಲವೇ?KanCCh 34.4

    ದಾನಿಯೇಲನು ಪರಲೋಕದ ಉನ್ನತ ದೇವರ ಭಯಭಕ್ತಿಯುಳ್ಳ ಸೇವಕನಾಗಿದ್ದನು. ದೀರ್ಘಕಾಲ ಜೀವಿಸಿದ್ದ ಅವನು ತನ್ನ ಒಡೆಯನಿಗೆ ಶ್ರೇಷ್ಠವಾದ ಸೇವೆಮಾಡಿದ್ದನು. ಅವನ ನಿಷ್ಕಳಂಕಸ್ವಭಾವ, ಸ್ವಾಮಿನಿಷ್ಠೆ, ದೀನತೆ - ಇವೆಲ್ಲವೂ ದೇವರಿಗೆ ಮೆಚ್ಚಿಗೆಯಾಗಿದ್ದವು. ದಾನಿಯೇಲನ ಜೀವನವು ಯಥಾರ್ಥವಾದ ಪರಿಶುದ್ಧ ಸ್ವಭಾವಕ್ಕೆ ಒಂದು ಅತ್ಯುತ್ತಮ ಮಾದರಿಯಾಗಿದೆ.KanCCh 35.1