ಅಧ್ಯಾಯ-25 — ಮನೆಯಲ್ಲಿ ದೈವೀಕ ಪ್ರಭಾವ
ನಮ್ಮ ಕುಟುಂಬದಲ್ಲಿ ದೇವರ ರಕ್ಷಣೆಯನ್ನು ನೀವು ಹೊಂದಿರಬಹುದು. ಆದರೆ ಅದರಲ್ಲಿ ನಂಬಿಕೆಯಿಡಬೇಕು, ಅದಕ್ಕಾಗಿ ಜೀವಿಸಬೇಕು ಹಾಗೂ ದೇವರಲ್ಲಿ ನಿರಂತರವಾಗಿ ನೆಲೆಗೊಂಡಿರುವ ವಿಶ್ವಾಸ ಹಾಗೂ ಭರವಸೆ ಇರಬೇಕು. ದೇವರ ವಾಕ್ಯವು ನಮ್ಮ ಮೇಲೆ ಹೇರುವ ನಿಯಂತ್ರಣ ನಮ್ಮ ಒಳ್ಳೆಯದಕ್ಕಾಗಿಯೇ ಇದೆ. ಅದು ನಮ್ಮ ಕುಟುಂಬಗಳಲ್ಲಿ ಮಾತ್ರವಲ್ಲ, ನೆರೆಹೊರೆಯಲ್ಲಿ ಸಂತೋಷ ಹೆಚ್ಚಿಸುತ್ತದೆ. ಇದು ನಮ್ಮ ಅಭಿರುಚಿಯನ್ನು ಸಂಸ್ಕರಿಸುತ್ತದೆ. ನಮ್ಮ ನಿರ್ಣಯಗಳನ್ನು ಪವಿತ್ರಗೊಳಿಸುತ್ತದೆ ಮತ್ತು ಮನಸ್ಸಿಗೆ ಶಾಂತಿ ಒದಗಿಸುತ್ತದೆ ಹಾಗೂ ಅಂತ್ಯದಲ್ಲಿ ನಿತ್ಯಜೀವ ನೀಡುತ್ತದೆ. ನಮ್ಮ ಸೇವೆ ಮಾಡುವ ದೇವದೂತರು ನಮ್ಮ ಮನೆಗಳಲ್ಲಿ ಕಾಲ ಕಳೆಯುತ್ತಾರೆ ಮತ್ತು ನಮ್ಮ ದೈವೀಕ ಜೀವನದ ಬೆಳವಣಿಗೆಯ ಸಮಾಚಾರವನ್ನು ಸಂತೋಷದಿಂದ ಪರಲೋಕಕ್ಕೆ ಒಯ್ಯುತ್ತಾರೆ. ಅಲ್ಲಿ ನಮ್ಮೆಲ್ಲರ ಲೆಕ್ಕ ಇಡುವ ದೇವದೂತನು ಈ ವಿಷಯವನ್ನು ಸಂತೋಷದಿಂದ ಬರೆಯುತ್ತಾನೆ.KanCCh 175.1
ಕ್ರಿಸ್ತನ ಆತ್ಮನು ನಮ್ಮ ಕುಟುಂಬಜೀವನದಲ್ಲಿ ನಿರಂತರವಾಗಿ ಪ್ರಭಾವ ಬೀರುತ್ತಾನೆ. ಸ್ತ್ರೀ ಪುರುಷರು ಸತ್ಯ ಹಾಗೂ ಪ್ರೀತಿಯೆಂಬ ಪರಲೋಕದ ಪ್ರಭಾವಕ್ಕೆ ತಮ್ಮ ಹೃದಯಗಳನ್ನು ತೆರೆದಲ್ಲಿ, ಇವುಗಳು ಮರುಭೂಮಿಯಲ್ಲಿ ಹರಿಯುವ ನೀರಿನತೊರೆಗಳಂತೆ ಎಲ್ಲರಿಗೂ ಚೈತನ್ಯ ನೀಡುತ್ತವೆ. ಹಾಗೂ ಬರಡು ಭೂಮಿಯಲ್ಲಿ ಹಸಿರು ಕಾಣುವಂತೆ ಮಾಡುತ್ತವೆ.KanCCh 175.2
ಮನೆಯಲ್ಲಿ ಧರ್ಮ, ಪ್ರಾರ್ಥನೆ, ದೇವರಾಧನೆ ಅಲಕ್ಷ್ಯ ಮಾಡುವುದು ಮತ್ತು ಮಕ್ಕಳನ್ನು ದೈವಭಕ್ತಿಯಲ್ಲಿ ಬೆಳೆಯುವಂತೆ ಮಾಡುವುದರಲ್ಲಿ ನಿರ್ಲಕ್ಷ್ಯ ತೋರುವುದು ದೇವರಿಗೆ ಅತ್ಯಂತ ಅಸಂತೋಷ ಉಂಟುಮಾಡುತ್ತದೆ. ಒಂದು ವೇಳೆ ನಿಮ್ಮ ಮಕ್ಕಳಲ್ಲಿ ಒಬ್ಬರು ನದಿಯಲ್ಲಿ ಸೆಳೆತಕ್ಕೆ ಸಿಲುಕಿ ಮುಳುಗುತ್ತಿದ್ದಲ್ಲಿ, ನೀವು ಅವರನ್ನು ರಕ್ಷಿಸಲು ಏನೆಲ್ಲಾ ಪ್ರಯತ್ನ ಮಾಡುತ್ತೀರಲ್ಲವೇ? ಎಷ್ಟೆಲ್ಲಾ ಪ್ರಾರ್ಥಿಸುವಿರಲ್ಲವೇ? ಅವನ ಪ್ರಾಣ ಉಳಿಸುವುದಕ್ಕೆ ಎಷ್ಟೊಂದು ಉತ್ಸಾಹ ತೋರಿಸುತ್ತೀರಲ್ಲವೇ! ಆದರೆ ಇಲ್ಲಿ ನಿಮ್ಮ ಮಕ್ಕಳು ಕ್ರಿಸ್ತನನ್ನು ಬಿಟ್ಟು ದೂರ ಹೋಗಿದ್ದಾರೆ, ರಕ್ಷಣೆ ಕಳೆದುಕೊಂಡಿದ್ದಾರೆ. ಬಹುಶಃ ಅವರು ಒರಟಾಗಿ, ಕೆಟ್ಟವರಾಗಿ ಬೆಳೆದು ಅಡ್ವೆಂಟಿಸ್ಟ್ ಸಭೆಯ ಹೆಸರಿಗೆ ಅವಮಾನ ತರುವವರೂ ಆಗಿರಬಹುದು. ಅವರು ಈ ಲೋಕದಲ್ಲಿ ದೇವರಿಂದ ದೂರವಾಗಿ ಆತ್ಮೀಕವಾಗಿ ನಾಶವಾಗುತ್ತಿದ್ದಾರೆ. ಆದರೆ ತಂದೆ-ತಾಯಿಯರು ನೀವು ಅದರ ಬಗ್ಗೆ ಚಿಂತಿಸದೆ, ಅಲಕ್ಷ್ಯ ಮಾಡುತ್ತಿದ್ದೀರಿ.KanCCh 175.3
ಜನರು ದೂರವಾಗುವಂತೆ ಮಾಡಲು ಸೈತಾನನು ಏನೆಲ್ಲಾ ಪ್ರಯತ್ನಗಳನ್ನು ಕಲ್ಪಿಸುತ್ತಾನೆ. ಅವರು ದೈನಂದಿನ ವ್ಯವಹಾರಗಳಲ್ಲಿಯೇ ಮಗ್ನರಾಗಿ ಧಾರ್ಮಿಕ ಜೀವನವನ್ನು ಮರೆತಿರುವಾಗ, ಅವನು ತನ್ನ ಉದ್ದೇಶದಲ್ಲಿ ಯಶಸ್ವಿಯಾಗುತ್ತಾನೆ. ಜನರ ಮನಸ್ಸನ್ನು ಸೈತಾನನು ವ್ಯಾಪಾರ, ವ್ಯವಹಾರ, ಕೆಲಸ ಕಾರ್ಯಗಳಲ್ಲಿ ಮುಳುಗಿರುವಂತೆ ಮಾಡಿದಾಗ, ಅವರು ಸತ್ಯವೇದ ಓದುವುದಿಲ್ಲ. ಪ್ರಾರ್ಥಿಸುವುದಿಲ್ಲ ಹಾಗೂ ಬೆಳಿಗ್ಗೆ ಮತ್ತು ಸಂಜೆ ದೇವರಿಗೆ ಕೃತಜ್ಞತಾಬಲಿಪೀಠ ಕಟ್ಟುವಂತ ಕುಟುಂಬಪ್ರಾರ್ಥನೆ ಇರುವುದಿಲ್ಲ. ಮಹಾವಂಚಕನಾದ ಸೈತಾನನ ಈ ಕುತಂತ್ರಗಳನ್ನು ಕೆಲವರು ಮಾತ್ರ ಅರಿತಿದ್ದಾರೆ! ಆದರೆ ಬಹಳಷ್ಟು ಜನರು ಇದರ ಬಗ್ಗೆ ತಿಳಿದಿಲ್ಲ.KanCCh 175.4