Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಬೆಳಿಗ್ಗೆ ಹಾಗೂ ಸಾಯಂಕಾಲದ ಆರಾಧನೆ

    ತಂದೆ-ತಾಯಿಯರೇ ಬೆಳಿಗ್ಗೆ ಹಾಗೂ ಸಾಯಂಕಾಲ ನಿಮ್ಮ ಮಕ್ಕಳೊಂದಿಗೆ ಸೇರಿ ನಿಮ್ಮೆಲ್ಲಾ ಬೇಡಿಕೆಗಳನ್ನು ದೇವರ ಮುಂದೆ ಇಟ್ಟು ಆತನ ಸಹಾಯಕ್ಕಾಗಿ ಬೇಡಿಕೊಳ್ಳಿರಿ. ನಮ್ಮ ಪ್ರೀತಿಪಾತ್ರರಾದ ಮಕ್ಕಳು ಎಲ್ಲೆಲ್ಲಿಯೂ ಶೋಧನೆಗಳಿಗೆ ಎದುರಾಗುತ್ತಾರೆ. ಪ್ರತಿದಿನವೂ ದೊಡ್ಡವರು ಚಿಕ್ಕವರೆನ್ನದೆ ಎಲ್ಲರ ಮಾರ್ಗದಲ್ಲಿ ಕಿರಿಕಿರಿ, ತೊಂದರೆ, ಆಸೆ ಆಮಿಷಗಳು ತುಂಬಿಕೊಂಡಿವೆ. ತಾಳ್ಮೆ, ಪ್ರೀತಿ ಹಾಗೂ ಸಂತೋಷದ ಜೀವಿತವನ್ನು ಜೀವಿಸುವವರು ಪ್ರಾರ್ಥಿಸಲೇಬೇಕು. ದೇವರಿಂದ ನಿರಂತರವಾದ ಸಹಾಯ ಹೊಂದಿದಾಗ ಮಾತ್ರ ನೀವು ನಿಮ್ಮ ಮೇಲೆ ಜಯಸಾಧಿಸಬಹುದು.KanCCh 176.1

    ಈಗಲೇ ನಿಮ್ಮ ಕುಟುಂಬವು ಪ್ರಾರ್ಥನಾ ಕುಟುಂಬವಾಗುವ ಸಮಯವಾಗಿದೆ. ನಾಸ್ತಿಕತೆ, ಧರ್ಮದಲ್ಲಿ ನಿಷ್ಟೆಯಿಲ್ಲದಿರುವುದು, ಸಿನಿಕತನ, ಅಧರ್ಮ, ಪಾಪಭ್ರಷ್ಟತೆ ಎಲ್ಲೆಲ್ಲಿಯೂ ಕಂಡುಬರುತ್ತಿದೆ. ಜೀವನದಲ್ಲಿ ದೇವರಿಗೆ ವಿರುದ್ಧವಾಗಿ ದಂಗೆಯೇಳುವ ಮನೋಭಾವವಿದೆ. ಪಾಪಕ್ಕೆ ದಾಸರಾದಾಗ, ನಮ್ಮೆಲ್ಲಾ ನೈತಿಕ ಶಕ್ತಿಯು ಸೈತಾನನ ಸರ್ವಾಧಿಕಾರದ ಹತೋಟಿಯಲ್ಲಿರುತ್ತದೆ. ಅಂತಹ ವ್ಯಕ್ತಿಯು ವೈರಿಯ ಶೋಧನೆಗಳಿಗೆ ಆಸೆ ಆಮಿಷಗಳಿಗೆ ಒಳಗಾಗುವ ಸಂಭವ ಹೆಚ್ಚಾಗಿರುತ್ತದೆ. ಅವನು ದೇವರಲ್ಲಿ ಆತುಕೊಂಡಲ್ಲಿ ಆತನ ಬಲಿಷ್ಠ ಕೈಗಳು ಅವನನ್ನು ರಕ್ಷಿಸುತ್ತದೆ. ಇಲ್ಲದಿದ್ದಲ್ಲಿ ಆ ಮನುಷ್ಯನು ಸಂಪೂರ್ಣವಾಗಿ ಮಹಾವೈರಿಯಾದ ಸೈತಾನನು ಹೇಳಿದ ಕಡೆಗೆ ಹೋಗುತ್ತಾನೆ.KanCCh 176.2

    ಇಷ್ಟೆಲ್ಲಾ ಇದ್ದಾಗ್ಯೂ, ಮಹಾಭಯಂಕರ ಸಂಕಟದ ಸಮಯದಲ್ಲಿ ಜೀವಿಸುತ್ತಿದ್ದರೂ, ಕ್ರೈಸ್ತರೆಂದು ಹೇಳಿಕೊಳ್ಳುವ ಅನೇಕರಲ್ಲಿ ಕುಟುಂಬ ಪ್ರಾರ್ಥನೆಯಿಲ್ಲ. ಅವರು ಮನೆಯಲ್ಲಿ ದೇವರನ್ನು ಗೌರವಿಸುವುದಿಲ್ಲ: ತಮ್ಮ ಮಕ್ಕಳಿಗೆ ದೇವರನ್ನು ಪ್ರೀತಿಸುವಂತೆಯೂ ಭಯಭಕ್ತಿಯಿಂದ ನಡೆದುಕೊಳ್ಳುವಂತೆಯೂ ಬೋಧಿಸುವುದಿಲ್ಲ. ಅನೇಕರು ಈ ಕಾರಣದಿಂದ ದೇವರಿಂದ ಬಹಳ ದೂರ ಹೋಗಿದ್ದಾರೆ ಮತ್ತು ಆತನ ಬಳಿಗೆ ಬರುವಾಗ ಅಪರಾಧ ಭಾವನೆಯು ಇವರಲ್ಲಿ ಕಂಡುಬರುತ್ತದೆ. ಅವರು ಧೈರ್ಯದಿಂದ ದೇವರ ಕೃಪಾಸನದ ಮುಂದೆ ಬರುವುದಿಲ್ಲ (ಇಬ್ರಿಯ 4:16) ಹಾಗೂ ಕೋಪವೂ, ವಾಗ್ವಾದವೂ ಇಲ್ಲದೆ ಭಕ್ತಿಪೂರ್ವಕವಾಗಿ ಕೈಗಳನ್ನೆತ್ತಿ ಪ್ರಾರ್ಥಿಸುವುದಿಲ್ಲ (1 ತಿಮೊಥೆಯ 2:8), ಅವರು ದೇವರೊಂದಿಗೆ ಸಜೀವವಾದ ಹಾಗೂ ಆತ್ಮೀಕ ಸಂಬಂಧ ಹೊಂದಿರುವುದಿಲ್ಲ. ಅವರು ಬಲವಿಲ್ಲದ ಭಕ್ತಿಯ ವೇಷ ಹೊಂದಿರುವವರಾಗಿದ್ದಾರೆ.KanCCh 176.3

    ಪ್ರಾರ್ಥನೆಯ ಅಗತ್ಯವಿಲ್ಲ ಎಂಬ ಭಾವನೆ ನಮ್ಮ ಆತ್ಮಗಳನ್ನು ನಾಶಪಡಿಸುವುದಕ್ಕೆ ಸೈತಾನನು ಉಪಯೋಗಿಸುವ ಅತ್ಯಂತ ಯಶಸ್ವಿಯಾದ ವಂಚನೆಗಳಲ್ಲಿ ಒಂದಾಗಿದೆ. ಪ್ರಾರ್ಥನೆಯು ಜ್ಞಾನ ವಿವೇಕದ ಬುಗ್ಗೆಯೂ ಬಲ, ಸಮಾಧಾನ ಹಾಗೂ ಸಂತೋಷದ ಮೂಲಕರ್ತನೂ ಆಗಿರುವ ದೇವರೊಂದಿಗೆ ನಾವು ಮಾತನಾಡುವ ಸಂಪರ್ಕವಾಗಿದೆ. “ಕ್ರಿಸ್ತನು ಭೂಲೋಕದಲ್ಲಿದ್ದಾಗ... ತಂದೆಯಾದ ದೇವರಿಗೆ ಬಲವಾಗಿ ಕೂಗುತ್ತಾ ಕಣ್ಣೀರು ಸುರಿಸುತ್ತಾ ಪ್ರಾರ್ಥಿಸಿದನು” (ಇಬ್ರಿಯ 5:7). “ಎಡೆಬಿಡದೆ ಪ್ರಾರ್ಥನೆ ಮಾಡಿರಿ; ಎಲ್ಲಾದರಲ್ಲಿಯೂ ಕೃತಜ್ಞತಾ ಸ್ತುತಿ ಮಾಡಿರಿ...” ಎಂದು ಪೌಲನು ಎಚ್ಚರಿಸುತ್ತಾನೆ (1 ಥೆಸಲೋನಿಕ 5:17) “... ನೀತಿವಂತನ ಅತ್ಯಾಸಕ್ತಿಯುಳ್ಳ ವಿಜ್ಞಾಪನೆಯು ಬಹುಬಲವಾಗಿದೆ” ಎಂದು ಯಾಕೋಬನು ಹೇಳುತ್ತಾನೆ (5:16).KanCCh 177.1

    ತಂದೆ ತಾಯಿಯರು ಪ್ರಾಮಾಣಿಕವಾದ ಹಾಗೂ ಮನಃಪೂರ್ವಕವಾದ ಪ್ರಾರ್ಥನೆಯಿಂದ ತಮ್ಮ ಮಕ್ಕಳ ಸುತ್ತಲೂ ಬೇಲಿ ಹಾಕಬೇಕು. ದೇವರು ತಮ್ಮ ಮಕ್ಕಳೊಂದಿಗೆ ಇರುತ್ತಾನೆ ಹಾಗೂ ಪವಿತ್ರ ದೇವದೂತರು ನಮ್ಮನ್ನು ಹಾಗೂ ನಮ್ಮ ಮಕ್ಕಳನ್ನು ಸೈತಾನನ ಕ್ರೂರ ಹಿಡಿತದಿಂದ ರಕ್ಷಿಸುತ್ತಾರೆಂಬ ಸಂಪೂರ್ಣ ನಂಬಿಕೆಯಿಂದ ನೀವು ಪ್ರಾರ್ಥಿಸಬೇಕು. ಪ್ರತಿಯೊಂದು ಕುಟುಂಬದಲ್ಲಿ ಬೆಳಿಗ್ಗೆ ಹಾಗೂ ಸಾಯಂಕಾಲದಲ್ಲಿ ಪ್ರಾರ್ಥನೆ ಮಾಡುವುದಕ್ಕೆ ಒಂದು ನಿರ್ದಿಷ್ಟ ಸಮಯವಿರಬೇಕು. ಬೆಳಿಗ್ಗೆ ಆಹಾರ ತೆಗೆದುಕೊಳ್ಳುವುದಕ್ಕೆ ಮೊದಲು, ಕಳೆದ ರಾತ್ರಿಯೆಲ್ಲಾ ಪ್ರಾಣವನ್ನು ರಕ್ಷಿಸಿದ ಪರಲೋಕ ತಂದೆಗೆ ಸ್ತೋತ್ರ ಅರ್ಪಿಸುವುದಕ್ಕೆ ಮತ್ತು ಆ ದಿನದ ಕೆಲಸಕಾರ್ಯಗಳಿಗೆ ದೇವರ ಮಾರ್ಗದರ್ಶನ ಮತ್ತು ರಕ್ಷಣೆಗಾಗಿ ತಂದೆತಾಯಿಯರು ತಮ್ಮ ಮಕ್ಕಳೊಂದಿಗೆ ಒಟ್ಟಾಗಿ ಸೇರುವುದು ಎಷ್ಟೊಂದು ಯುಕ್ತವಾಗಿದೆಯಲ್ಲವೇ! ಹಾಗೂ ಸಾಯಂಕಾಲದಲ್ಲಿ ಮತ್ತೊಮ್ಮೆ ಕುಟುಂಬದವರೆಲ್ಲರೂ, ಆ ದಿನದಲ್ಲಿ ದೇವರು ಸುರಿಸಿದ ಆಶೀರ್ವಾದಕ್ಕಾಗಿ ಆತನನ್ನು ಕೃತಜ್ಞತೆಯಿಂದ ಸ್ತುತಿಸುವುದು ಎಷ್ಟೊಂದು ಯೋಗ್ಯವಾಗಿದೆಯಲ್ಲವೇ!KanCCh 177.2

    ಪ್ರತಿದಿನ ಬೆಳಿಗ್ಗೆ ತಂದೆ-ತಾಯಿಯರು ನೀವು ಹಾಗೂ ನಿಮ್ಮ ಮಕ್ಕಳು ಆ ದಿನಕ್ಕೆ ದೇವರಿಗೆ ನಮ್ಮನ್ನು ಸಮರ್ಪಿಸಿಕೊಳ್ಳಬೇಕು. ತಿಂಗಳು ಇಲ್ಲವೆ ವರ್ಷಗಳನ್ನು ಲೆಕ್ಕ ಹಾಕಬೇಡಿ, ಅದು ನಿಮ್ಮದಲ್ಲ. ಸಂಕ್ಷಿಪ್ತವಾದ ಒಂದುದಿನ ನಿಮಗೆ ಕೊಡಲ್ಪಟ್ಟಿದೆ. ಅದು ಈ ಲೋಕದಲ್ಲಿ ನಿಮ್ಮ ಆಯುಷ್ಯದ ಕೊನೆಯ ದಿನವೋ ಎಂಬಂತೆ ಗುರುವಾದ ದೇವರಿಗೆ ನಿಮ್ಮ ಸೇವೆ ಮಾಡಬೇಕು. ಆ ದಿನದ ನಿಮ್ಮೆಲ್ಲಾ ಯೋಜನೆಗಳನ್ನು ದೇವರ ಮುಂದೆ ಹಾಕಿ. ಯಾವುದನ್ನು ಮಾಡಬೇಕು ಅಥವಾ ಯಾವುದನ್ನು ಮಾಡಬಾರದು ಎಂದು ಆತನು ಸೂಚಿಸುತ್ತಾನೆ. ನಿಮ್ಮ ಯೋಜನೆಗೆ ಬದಲಾಗಿ ದೇವರ ಯೋಜನೆಗಳನ್ನು ಒಪ್ಪಿಕೊಳ್ಳಿ. ಹಾಗಾದಲ್ಲಿ ನ್ಮ್ಮ ಜೀವನವು ದೈವೀಕ ಮಾದರಿಯಂತೆ ಹೆಚ್ಚೆಚ್ಚಾಗಿ ರೂಪಿಸಲ್ಪಡುತ್ತದೆ. ಆಗ “ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ, ಯೋಜನೆಗಳನ್ನೂ ಕ್ರಿಸ್ತಯೇಸುವಿನಲ್ಲಿ ಕಾಯುವುದು” (ಫಿಲಿಪ್ಪಿ 4:7).KanCCh 177.3

    ತಂದೆ ಅಥವಾ ತಂದೆಯು ಇಲ್ಲದಾಗ ತಾಯಿಯು ಸತ್ಯವೇದದಲ್ಲಿ ಆಸಕ್ತಿಕರವಾದ ಹಾಗೂ ಸುಲಭವಾಗಿ ಅರ್ಥವಾಗುವ ಭಾಗಗಳನ್ನು ಆರಿಸಿಕೊಂಡು ಕುಟುಂಬ ಪ್ರಾರ್ಥನೆ ನಡೆಸಬೇಕು. ಅದು ಸಂಕ್ಷಿಪ್ತವಾಗಿರಬೇಕು. ಹೆಚ್ಚು ವಚನಗಳಿರುವ ಅಧ್ಯಾಯವನ್ನು ಓದುವುದು ಮತ್ತು ಉದ್ದವಾದ ಪ್ರಾರ್ಥನೆ ಮಾಡುವುದು ಆಯಾಸಕರವಾಗುತ್ತದೆ. ಮತ್ತು ಅದು ಎಷ್ಟು ಬೇಗನೆ ಮುಗಿಯುವುದೋ ಎಂಬ ಭಾವನೆ ಮಕ್ಕಳಲ್ಲಿ ಬರಬಹುದು. ಕುಟುಂಬ ಪ್ರಾರ್ಥನೆ ಪ್ರಯಾಸಕರವೂ, ಆಯಾಸ ತರುವಂತದ್ದೂ, ಆಸಕ್ತಿ ಇಲ್ಲದ್ದೂ ಆಗಿದ್ದಲ್ಲಿ ಮತ್ತು ಮಕ್ಕಳು ಆ ಸಮಯ ಯಾಕಾದರೂ ಬರುತ್ತದೆಂಬ ಭಾವನೆ ಬೆಳೆಸಿಕೊಂಡಲ್ಲಿ, ದೇವರಿಗೆ ಅಗೌರವ ಉಂಟಾಗುತ್ತದೆ.KanCCh 178.1

    ಕುಟುಂಬ ಪ್ರಾರ್ಥನೆಯು ಹೆಚ್ಚು ಆಸಕ್ತಿಕರವಾಗಿರುವಂತೆ ತಂದೆ-ತಾಯಿಯರು ಮಾಡಬೇಕು. ಈ ಸಮಯವು ಆ ದಿನದ ಅತ್ಯಂತ ಸಂತೋಷಕರವೂ, ಉಲ್ಲಾಸಕರವೂ ಆಗಿರಬೇಕು. ಇದರ ಬಗ್ಗೆ ಮೊದಲೇ ಸಿದ್ಧತೆ ಮಾಡಿಕೊಂಡಿದ್ದಲ್ಲಿ ಅದು ಆತ್ಮೀಕವಾಗಿ ಪ್ರಯೋಜನಕರವೂ, ಆಸಕ್ತಿಕರವೂ ಆಗಿರುವಂತೆ ಮಾಡಬಹುದು. ಕಾಲದಿಂದಕಾಲಕ್ಕೆ ಆರಾಧನೆಯಲ್ಲಿ ಬದಲಾವಣೆ ಆಗುತ್ತಿರಬೇಕು. ಓದಿದ ವಾಕ್ಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು. ಹಾಗೂ ಎಲ್ಲರೂ ಮನಃಪೂರ್ವಕವಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು. ದೇವರಿಗೆ ಸ್ತೋತ್ರ ಮಾಡುವಂತಹ ಹಾಡುಗಳನ್ನು ಹಾಡಬಹುದು. ಪ್ರಾರ್ಥನೆಯು ಚಿಕ್ಕದಾಗಿದ್ದು, ವಿಷಯಕ್ಕೆ ಸಂಬಂಧಪಟ್ಟಿರಬೇಕು. ಪ್ರಾರ್ಥಿಸುವವರು ಸರಳವಾದ ಹಾಗೂ ಮನಃಪೂರ್ವಕವಾದ ಮಾತುಗಳಿಂದ ದೇವರು ಮಾಡಿದ ಉಪಕಾರಗಳಿಗೆ ಕೃತಜ್ಞತೆ ಸಲ್ಲಿಸಬೇಕು ಮತ್ತು ಆತನ ಸಹಾಯ ಬೇಡಿಕೊಳ್ಳಬೇಕು. ಮಕ್ಕಳೂ ಸಹ ದೇವರ ವಾಕ್ಯ ಓದಿ ಪ್ರಾರ್ಥಿಸಬೇಕು. ಕುಟುಂಬದಲ್ಲಿ ಮಾಡಿದ ಇಂತಹ ಆರಾಧನೆ ಹೇಗೆ ಪ್ರಯೋಜನಕಾರಿಯಾಯಿತೆಂಬುದನ್ನು ಪರಲೋಕದಲ್ಲಿ ಮಾತ್ರ ತಿಳಿಯಬಹುದು.KanCCh 178.2

    *****