Go to full page →

“ನೀವು ಉಪವಾಸ ಮಾಡುವಾಗ ಕಪಟಿಗಳಂತೆ ಮುಖವನ್ನು ಸಪ್ಪಗೆ ಮಾಡಿಕೊಳ್ಳಬೇಡಿರಿ.” MBK 90

ದೇವರ ವಾಕ್ಯವು ನಿಯಮಿಸುವ ಉಪವಾಸವು ಸಾಂಪ್ರದಾಯಕ್ಕಿಂತಲೂ ವಿಶೇಷವಾದದ್ದು. ಸುಮ್ಮನೇ ಊಟವನ್ನು ವರ್ಜಿಸಿ, ಗೋಣಿತಟ್ಟನ್ನು ಉಟ್ಟು, ತಲೆಯ ಮೇಲೆ ಬೂದಿಯನ್ನು ಹಾಕಿಕೊಳ್ಳುವುದಲ್ಲ. ಪಾಪಕ್ಕಾಗಿ ಯಥಾರ್ಥವಾದ ವ್ಯಥೆಯಿಂದ ಉಪವಾಸಮಾಡುವವನು ಎಂದಿಗೂ ಬಹಿರಂಗವಾಗಿ ಪ್ರದರ್ಶಿಸುವುದಿಲ್ಲ. MBK 90.1

ದೇವರು ನಮ್ಮನ್ನು ಉಪವಾಸ ವ್ರತವನ್ನಾಚರಿಸುವಂತೆ ಹೇಳುವುದು, ಆತ್ಮದ ಪಾಪಕ್ಕಾಗಿ ದೇಹವನ್ನು ಹಿಂಸಿಸುವುದಕ್ಕಲ್ಲ, ದೇವರು ಮುಂದೆ ನಮ್ಮ ಹೃದಯವನ್ನು ತಗ್ಗಿಸಿಕೊಂಡು, ಪಾಪದ ಘೋರ ಸ್ವಭಾವವನ್ನು ನಿಗ್ರಹಿಸಿ, ಆತನ ಕ್ಷಮೆಯನ್ನು ಹೊಂದುವಂತೆ ಸಹಾಯಿಸುವುದು ಆಗಿದೆ. “ನಿಮ್ಮ ಬಟ್ಟೆಗಳನ್ನಲ್ಲ, ನಿಮ್ಮ ಹೃದಯಗಳನ್ನು ಹರಿದುಕೊಂಡು ನಿಮ್ಮ ದೇವರಾದ ಯೆಹೋವನ ಕಡೆಗೆ ತಿರುಗಿಕೊಳ್ಳಿರಿ.” ಯೋವೇಲ 2:13, ಎಂಬುದೇ ಇಸ್ರಾಯೇಲರಿಗೆ ಆತನ ಆಜ್ಞೆಯಾಗಿತ್ತು. MBK 90.2

ದೇಹವನ್ನು ದಂಡಿಸುವುದರಿಂದ ನಮಗೆ ಯಾವ ಪ್ರಯೋಜನವೂ ಆಗುವುದಿಲ್ಲ, ಅಥವಾ ನಮ್ಮ ಸ್ವಂತ ಕ್ರಿಯೆಗಳಿಂದ ದೇವಜನರೊಂದಿಗೆ ಸ್ವಾಸ್ಥ್ಯವನ್ನು ಕೊಂಡುಕೊಳ್ಳುವುದಾಗಲೀ ಅಥವ ನಮ್ಮ ಯೋಗ್ಯತೆಯಿಂದ ಹೊಂದುತ್ತೇವೆಂದು ಹೊಹಳಿಕೊಳ್ಳುವುದಾಗಲೀ ಯಾವ ಪ್ರಯೊಜನವನ್ನೂ ಉಂಟುಮಾಡದು. “ದೇವರಿಗೆ ಮೆಚ್ಚಿಗೆಯಾದ ಕೆಲಸಗಳನ್ನು ನಾವು ನಡಿಸಬೇಕಾದರೆ ಏನು ಮಾಡಬೇಕೆಂದು,” ಕ್ರಿಸ್ತನು ಪ್ರಶ್ನಿಸಲ್ಪಟ್ಟಾಗ, “ದೇವರು ಮೆಚ್ಚುವ ಕೆಲಸ ಯಾವುದೆಂದರೆ ಆತನು ಕಳುಹಿಸಿಕೊಟ್ಟವನನ್ನು ನೀವು ನಂಬುವುದೇ” (ಯೋಹಾನ 6:28-29) ಎಂದು ಉತ್ತರವಿತ್ತನು. ಪಶ್ಚಾತ್ತಾಪ ಅಥವಾ ಮಾನಸಾಂತರವೆಂದರೆ ಆತ್ಮಪರಿತ್ಯಾಗ ಮಾಡಿ ಕ್ರಿಸ್ತನ ಕಡೆಗೆ ತಿರುಗುವುದೇ ಆಗಿದೆ; ನಂಬಿಕೆಯಿಂದ ಆತನು ನಮ್ಮಲ್ಲಿ ವಾಸಿಸುವಂತೆ ಆತನನ್ನು ಅಂಗೀಕರಿಸಿಕೊಂಡರೆ, ಸತ್ಕ್ರಿಯೆಗಳು ನಮ್ಮಲ್ಲಿ ವ್ಯಕ್ತವಾಗುತ್ತವೆ. “ಆದರೆ ನೀನು ಉಪವಾಸ ಮಾಡುವಾಗ ತಲೆಗೆ ಎಣ್ಣೆ ಹಚ್ಚಿಕೊಂಡು ಮುಖವನ್ನು ತೊಳಕೋ. ಹೀಗೆ ಮಾಡಿದರೆ ನೀನು ಉಪವಾಸಿಯೆಂದು ಜನರಿಗೆ ಕಾಣದೆ ಹೋದಾಗ್ಯೂ ಅಂತರಂಗದಲ್ಲಿರುವ ನಿನ್ನ ತಂದೆಗೆ ಉಪವಾಸಿಯೆಂದು ಕಾಣಿಸಿಕೊಳ್ಳುವಿ” ಎಂದು ಯೇಸು ಹೇಳಿದನು. ದೇವರ ಮಹಿಮೆಗಾಗಿ ನಾವು ಏನನ್ನು ಮಾಡಿದರೂ ಉಲ್ಲಾಸವಾಗಿ ಮಾಡಬೇಕು, ವ್ಯಸನದಿಂದಲೂ ಮತ್ತು ಜೋಲುಮೋರೆಯಿಂದಲೂ ಮಾಡಬಾರದು. ಯೇಸು ಕ್ರಿಸ್ತನ ಮತದಲ್ಲಿ ವಿಷಣ್ಣತೆಯೆಂಬುದೇ ಇಲ್ಲ. ಕ್ರೈಸ್ತರು ಶೋಕಭರಿತರಾಗಿ ತಮ್ಮ ಕರ್ತನಲ್ಲಿ ಆಶಾಭಂಗ ಪಟ್ಟೆನೆಂಬ ಭಾವನೆಯನ್ನು ಕಲ್ಪಿಸಿದರೆ, ಆತನ ಗುಣಗಳನ್ನು ಅಪಾರ್ಥಪಡಿಸಿ, ಆತನ ವಿರೋಧಿಗಳಿಗೆ ಕುತರ್ಕಕ್ಕೆ ಆಸ್ಪದ ಕೊಡುವವರಾಗಿದ್ದಾರೆ. ಮಾತಿನಲ್ಲಿ ದೇವರನ್ನು ನಮ್ಮ ತಂದೆಯೆಂದು ಅವರು ಹೇಲಿದರೂ, ವಿಷಣ್ಣತೆಯಿಂದಲೂ ಮತ್ತು ವ್ಯಥೆಯಿಂದಲೂ ಲೋಕಕ್ಕೆ ತಾವು ತಬ್ಬಲಿಗಳೆಂಬ ತೋರ್ಕೆಯನ್ನುಂಟುಮಾಡುವವರಾಗಿದ್ದಾರೆ. MBK 90.3

ಕ್ರಿಸ್ತನು ತನ್ನ ಸೇವೆಯು ಆಕರ್ಷಣೀಯವಾಗಿರಬೇಕೆಂದು ಇಚ್ಛಿಸುತ್ತಾನೆ. ಸ್ವಾರ್ಥತ್ಯಾಗಗಳೂ ಮತ್ತು ಗುಪ್ತವಾದ ಹೃದಯದ ವೇದನೆಗಳೂ ಕನಿಕರವುಳ್ಳ ರಕ್ಷಕನಿಗೆ ಪ್ರತ್ಯಕ್ಷವಾಗಲಿ. ಹೊರೆಗಳನ್ನು ಕ್ರೂಜೆಯ ಪಾದಕ್ರಾಂತ ಮಾಡಿ, ನಮ್ಮನ್ನು ಮೊದಲು ಪ್ರೀತಿಸಿದಾತನ ಪ್ರೀತಿಯಲ್ಲಿ ಉಲ್ಲಾಸಿಸುತ್ತಾ ನಮ್ಮ ಪಥದಲ್ಲಿ ಹೋಗುವ. ದೇವರಿಗೂ ಮತ್ತು ಆತ್ಮಕ್ಕೂ ಮಧ್ಯದಲ್ಲಿ ನಡೆಯುತ್ತಿರುವ ರಹಸ್ಯ ಕಾರ್ಯವನ್ನು ಮನುಷ್ಯರು ತಿಳಿಯಲಾರರು, ಆದರೂ ಹೃದಯದಲ್ಲಿ ಆತ್ಮನ ಕ್ರಿಯೆಯ ಫಲವು ಎಲ್ಲರಿಗೂ ವ್ಯಕ್ತವಾಗುವುದು; ಹೇಗೆಂದರೆ “ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆಯು ನಿನಗೆ ಫಲವನ್ನು ಕೊಡುವನು.” MBK 91.1