Go to full page →

ಕ್ರಿಸ್ತನು ಬಲದಿಂದಲೂ, ಮಹಿಮೆಯಿಂದಲೂ ಪರಲೋಕದಿಂದ ಇಳಿದು ಬರುವನು ಕೊಕಾಘ 161

ಶೀಘ್ರದಲ್ಲಿಯೇ ಮೂಡಣ ದಿಕ್ಕಿನಲ್ಲಿ ಮನುಷ್ಯನ ಅಂಗೈನ ಅರ್ಧದಷ್ಟು ಅಳತೆಯಲ್ಲಿ ಚಿಕ್ಕದಾದ ಕಪ್ಪು ಮೋಡ ಕಂಡುಬರುವುದು. ಇದು ರಕ್ಷಕನನ್ನು ಆವರಿಸಿಕೊಂಡಿರುವ ಮೋಡವಾಗಿದ್ದು, ದೂರದಲ್ಲಿ ಕತ್ತಲೆಯಿಂದ ಮರೆಮಾಡಿರುವಂತೆ ಕಾಣುತ್ತದೆ. ಇದು ಮನುಷ್ಯಕುಮಾರನಾದ ಕ್ರಿಸ್ತನ ಗುರುತೆಂದು ದೇವಜನರಿಗೆ ಗೊತ್ತಾಗುವುದು. ಅದು ಭೂಮಿಗೆ ಹತ್ತಿರವಾಗುತ್ತಿದ್ದಂತೆ, ಭಕ್ತರು ಅದನ್ನು ಗಂಭೀರವಾದ ಮೌನದಿಂದ ದಿಟ್ಟಿಸುತ್ತಿರುವರು. ಮೋಡವು ಹತ್ತಿರ ಬರುತ್ತಿದ್ದಂತೆ, ಹೆಚ್ಚಾಗಿ ಪ್ರಕಾಶಿಸುತ್ತಾ ವೈಭವದಿಂದ ಕೂಡಿದ್ದು ಒಂದು ಮಹಾಬಿಳಿಯ ಮೋಡವಾಗುತ್ತದೆ. ಆ ಮೋಡದ ಕೆಳಭಾಗವು ದಹಿಸುವ ಬೆಂಕಿಯಂತೆ ಪ್ರಜ್ವಲಿಸಿದರೆ, ಅದರ ಮೇಲೆ ಒಡಂಬಡಿಕೆಯ ಮುಗಿಲಬಿಲ್ಲು ಇರುತ್ತದೆ. ಯೇಸುಕ್ರಿಸ್ತನು ಜಯಶಾಲಿಯಾದ ಮಹಾವೀರನಂತೆ ಬರುವನು. ಕೊಕಾಘ 161.1

ಎಣಿಸಲಾಗದಷ್ಟು ಅಸಂಖ್ಯಾತರಾದ ದೂತರು ದಿವ್ಯವಾದ ಮಧುರಗಾನದೊಂದಿಗೆ ದೇವರೊಂದಿಗೆ ಬರುವರು. ಯಾವ ಕವಿಯೂ ಆ ದೃಶ್ಯವನ್ನು ವರ್ಣಿಸಲಾರನು ಮತ್ತು ಅದರ ವೈಭವವನ್ನು ನರಮನುಷ್ಯನು ಎಂದಿಗೂ ಗ್ರಹಿಸಿಕೊಳ್ಳಲಾರನು. ರಾಜಾಧಿರಾಜನಾದ ಕ್ರಿಸ್ತನು ಮೇಘಗಳೊಂದಿಗೆ ಅಗ್ನಿಜ್ವಾಲೆಯಿಂದ ಆವರಿಸಲ್ಪಟ್ಟು ಇಳಿದು ಬರುವನು. ಆಗ ಆಕಾಶವು ಸುರಳಿಯಂತೆ ಸುತ್ತಲ್ಪಟ್ಟು ಎಲ್ಲಿಯೋ ಹೋಗಿಬಿಟ್ಟಿತು. ಭೂಮಿಯು ಆತನ ಮುಂದೆ ಕಂಪಿಸುವುದು. ಪ್ರತಿಯೊಂದು ಬೆಟ್ಟ ಮತ್ತು ದ್ವೀಪಗಳು ತಮ್ಮ ಸ್ಥಳವನ್ನು ಬಿಟ್ಟು ಕದಲುವವು (ಗ್ರೇಟ್ ಕಾಂಟ್ರೊವರ್ಸಿ (640-642). ಕೊಕಾಘ 161.2