Go to full page →

ದೇವರಿಗೆ ನಂಬಿಗಸ್ತರಾದವರು ಯಾರೆಂದು ತಿಳಿದು ಬರುವುದು ಕೊಕಾಘ 104

ದೇವರಿಗೆ ತನ್ನದೇ ಆದ ನಂಬಿಗಸ್ತರಾದ ಸೇವಕರಿದ್ದಾರೆ. ಗೋಧಿಯನ್ನು ಹೊಟ್ಟಿನಿಂದ ಬೇರ್ಪಡಿಸುವ ಜರಡಿ ಹಿಡಿಯುವ ಪರೀಕ್ಷೆಯ ಸಮಯದಲ್ಲಿ ಅವರು ಯಾರೆಂದು ತಿಳಿದು ಬರುವುದು. ಅವರು ಈಗ ಯಾರೆಂದು ತಿಳಿದುಬರದೆ ಮರೆಯಾಗಿದ್ದಾರೆ ಮತ್ತು ಬಾಳ್ ಹಾಗೂ ಇತರ ಅನ್ಯದೇವತೆಗಳಿಗೆ ನಮಸ್ಕರಿಸದ ಅಮೂಲ್ಯ ವ್ಯಕ್ತಿಗಳಾಗಿದ್ದಾರೆ. ಈಗ ನಮ್ಮ ಮೇಲೆ ಕೇಂದ್ರೀಕೃತವಾಗಿರುವಂತ ಹೊಳೆಯುವ ಬೆಳಕು ಅವರಿಗೆ ಪ್ರಕಾಶಿಸಿಲ್ಲ. ಆದರೆ ಕಷ್ಟಸಂಕಟದ ಸಮಯದಲ್ಲಿ ಯಥಾರ್ಥ ಕ್ರೈಸ್ತ ಸದ್ಗುಣವೆಂಬ ನಿರ್ಮಲವಾದ ಪ್ರಕಾಶವು ಪ್ರಕಟಗೊಳ್ಳುತ್ತದೆ. ಹಗಲಿನ ಸಮಯದಲ್ಲಿ ಆಕಾಶವನ್ನು ನೋಡಿದಾಗ ಚುಕ್ಕಿಗಳು (ನಕ್ಷತ್ರಗಳು ಕಂಡುಬರುವುದಿಲ್ಲ, ಆದರೆ ಅವು ಗುಮ್ಮಟದಲ್ಲಿ ನೆಲೆನಿಂತಿವೆ. ಆದರೆ ನಮ್ಮ ಕಣ್ಣಿಗೆ ಅವು ಕಾಣುವುದಿಲ್ಲ. ಆದರೆ ರಾತ್ರಿಯಲ್ಲಿ ಅವುಗಳ ಸಹಜವಾದ ಹೊಳಪು ಕಂಡುಬರುತ್ತದೆ (ಟೆಸ್ಟಿಮೊನೀಸ್, ಸಂಪುಟ 5, ಪುಟಗಳು 80, 81, 1882). ಕೊಕಾಘ 104.4

ಹಿಂಸೆ ಉಂಟಾದ ಪ್ರತಿ ಸಮಯದಲ್ಲಿಯೂ, ಅದಕ್ಕೆ ಒಳಗಾದ ಸಾಕ್ಷಿಗಳು ಕ್ರಿಸ್ತನಿಗಾಗಿ ಅಥವಾ ಆತನ ವಿರುದ್ಧವಾಗಿ ನಿರ್ಧಾರ ಮಾಡುತ್ತಾರೆ. ಅನ್ಯಾಯವಾಗಿ ಹಿಂಸೆಗೊಳಗಾದವರಿಗೆ ಅನುಕಂಪ ತೋರಿಸುವವರು ಹಾಗೂ ಅವರಿಗೆ ವಿರೋಧಿಗಳಲ್ಲದವರು ಕ್ರಿಸ್ತನೊಂದಿಗೆ ತಮಗಿರುವ ಪ್ರೀತಿಯನ್ನು ತೋರಿಸುತ್ತಾರೆ (ದಿ ಸೈನ್ಸ್ ಆಫ್ ದಿ ಟೈಮ್ಸ್, ಫೆಬ್ರವರಿ 20, 1901). ಕೊಕಾಘ 104.5

ವಿರೋಧತೆ ಬರಲಿ, ಕ್ರೈಸ್ತಧರ್ಮದ ವಿರುದ್ದ ಇತರರು ಅಸಹನೆ ತೋರಿಸಲಿ, ಹಿಂಸೆ ಆರಂಭವಾಗಲಿ. ಆಗ ಕ್ರಿಸ್ತನಲ್ಲಿ ಸಂಪೂರ್ಣ ನಂಬಿಕೆ ಇಡದವರು ಹಾಗೂ ಆಷಾಢಭೂತಿಗಳು ಚಂಚಲ ಮನಸ್ಸುಳ್ಳವರಾಗಿ ಸಭೆಯನ್ನು ಬಿಟ್ಟುಹೋಗುವರು. ಆದರೆ ನಿಜವಾದ ಕ್ರೈಸ್ತರು ಬಂಡೆಯಂತೆ ದೃಢವಾಗಿ ನಿಲ್ಲುವರು. ಅವರು ಸುಖವಾಗಿದ್ದ ದಿನಗಳಿಗಿಂತಲೂ ಹೆಚ್ಚಾಗಿ ನಂಬಿಕೆಯಲ್ಲಿ ಬಲವಾಗಿಯೂ ಮತ್ತು ನಿರೀಕ್ಷೆಯಲ್ಲಿ ದೃಢವಾಗಿಯೂ ನಿಲ್ಲುವರು (ಗ್ರೇಟ್ ಕಾಂಟ್ರೊವರ್ಸಿ, 602, 1911). ಕೊಕಾಘ 104.6