ನಮ್ಮಲ್ಲಿ ಶುದ್ಧವಾದ, ನಿರ್ಮಲವಾದ ಪ್ರೀತಿಯಿದ್ದಲ್ಲಿ, ನಮ್ಮ ಹೃದಯವು ಆತ್ಮೀಕವಾಗಿ ಉನ್ನತ ಬೆಳವಣಿಗೆ ಹಾಗೂ ದೈವೀಕ ವಿಷಯಗಳ ಬಗ್ಗೆ ಹೆಚ್ಚಿನ ಜ್ಞಾನ ಪಡೆದುಕೊಳ್ಳಲು ಬಯಸುತ್ತದೆ. ಆಗ ನಾವು ಪರಿಪೂರ್ಣತೆಯಲ್ಲಿ ಮಾತ್ರ ತೃಪ್ತಿ ಹೊಂದುತ್ತೇವೆ. ಕ್ರೈಸ್ತರೆನಿಸಿಕೊಳ್ಳುವ ಅನೇಕರು ಈ ಜೀವನದ ನಶಿಸಿ ಹೋಗುವ ಮತ್ತು ಕ್ಷುಲ್ಲಕ ವಿಷಯಗಳ ಬಗ್ಗೆ ಹೊಂದಿರುವ ಮಹತ್ವಾಕಾಂಕ್ಷೆ ಮತ್ತು ಉತ್ಸಾಹವನ್ನು ಆತ್ಮೀಕವಿಷಯಗಳ ಜ್ಞಾನ ಪಡೆಯುವುದರಲ್ಲಿ ಹೊಂದಿರುವುದಿಲ್ಲ. ಆದುದರಿಂದ ಅವರು ಪಡೆದುಕೊಳ್ಳಬಹುದಾದ ದೈವೀಕ ಬಲ ಹೊಂದಿಕೊಳ್ಳುವುದಿಲ್ಲ. ಅವರು ದೇವರಾಜ್ಯಕ್ಕಾಗಿಯೂ ಮತ್ತು ಆತನ ನೀತಿಗಾಗಿಯೂ ತವಕಪಡುವ ಉದ್ದೇಶ ಹೊಂದಿರುವುದಿಲ್ಲ. ಆದುದರಿಂದ ದೈವಭಕ್ತಿಯು ಅವರಿಗೆ ಒಂದು ಮರೆಮಾಡಲ್ಪಟ್ಟ ನಿಗೂಢತೆಯಾಗಿದ್ದು, ಅದನ್ನು ಅವರು ಅರ್ಥಮಾಡಿಕೊಳ್ಳಲಾರರು. ಅವರು ಪ್ರಾಯೋಗಿಕ ಜ್ಞಾನದಿಂದ ಕ್ರಿಸ್ತನನ್ನು ತಿಳಿದಿರುವುದಿಲ್ಲ. KanCCh 221.1
ದೈವೀಕ ವಿಷಯಗಳ ಬಗ್ಗೆ ಬೆಳವಣಿಗೆ ಹೊಂದಿಲ್ಲದೆ ಬಲಹೀನರಾಗಿದ್ದು ಅದರಲ್ಲಿಯೇ ತೃಪ್ತಿ ಹೊಂದಿರುವವರು ಇದ್ದಕ್ಕಿದ್ದಂತೆ ಪರಲೋಕಕ್ಕೆ ಎತ್ತಲ್ಪಡಲಿ. ಅಲ್ಲಿನ ಪರಿಪೂರ್ಣವಾದ ಪವಿತ್ರ ಸ್ಥಿತಿ, ಎಲ್ಲರಲ್ಲಿಯೂ ತುಂಬಿರುವ ಪ್ರೀತಿ, ಸಂತೋಷ ಹೊರಹೊಮ್ಮುವ ಮುಖಗಳು, ದೇವರು ಹಾಗೂ ಯಜ್ಞದ ಕುರಿಯಾದ ಕ್ರಿಸ್ತನಿಗೆ ಸ್ತುತಿಸ್ತೋತ್ರ ಸಲ್ಲಿಸುವ ಮನಮೋಹಕವಾದ ಮತ್ತು ಮಧುರವಾದ ಗಾಯನ, ಭಕ್ತರಮುಖದಲ್ಲಿ ಪರಲೋಕದಿಂದ ಬಂದ ನಿರಂತರವಾಗಿ ಪ್ರತಿಫಲಿಸುವ ಬೆಳಕು ಇವೆಲ್ಲವುಗಳನ್ನು ಅವರು ಕಣ್ಣಾರೆ ಕಾಣುವಂತಾಗಲಿ. ಇದಕ್ಕಿಂತಲೂ ಉನ್ನತವಾದ ಸಂತೋಷದ ಅನುಭವ ಇದೆ ಎಂದು ಅವರಿಗೆ ಮನವರಿಕೆಯಾಗಲಿ. ಅವರು ದೇವರ ಆನಂದವನ್ನು ಹೆಚ್ಚಾಗಿ ಪಡೆದುಕೊಂಡಷ್ಟು, ಉನ್ನತವಾದ ನಿತ್ಯವಾದ ಆನಂದ ಅನುಭವಿಸುವ ಸಾಮರ್ಥ್ಯ ಅವರಲ್ಲಿ ಹೆಚ್ಚಾಗುತ್ತದೆ. ಇಂತಹ ವ್ಯಕ್ತಿಗಳು ಪರಲೋಕದ ದೇವದೂತರೊಂದಿಗೆ ಸೇರಿ, ಅವರ ಗಾಯನದಲ್ಲಿ ಭಾಗಿಯಾಗಿ ದೇವರು ಹಾಗೂ ಯಜ್ಞದಕುರಿಯಾದ ಕ್ರಿಸ್ತನಿಂದ ಬರುವ ಮಹಾಮಹಿಮೆಯನ್ನು ತಾಳಿಕೊಳ್ಳಬಲ್ಲರೇ? ಎಂದು ಶ್ರೀಮತಿ ವೈಟಮ್ಮನವರು ಪ್ರಶ್ನಿಸುತ್ತಾರೆ. ಓ ಇಲ್ಲ. ಎಂದಿಗೂ ಇಲ್ಲ~ ಪರಲೋಕದ ಅನುಭವ ಪಡೆದುಕೊಳ್ಳಲೆಂದು ಹಾಗೂ “ಲೋಕದಲ್ಲಿ ದುರಾಶೆಯಿಂದುಂಟಾದ ಕೆಟ್ಟತನಕ್ಕೆ ತಪ್ಪಿಸಿಕೊಂಡು, ದೈವ ಸ್ವಭಾವದಲ್ಲಿ ಪಾಲನ್ನು ಹೊಂದುವವರಾಗಬೇಕೆಂಬ ಉದ್ದೇಶದಿಂದ ದೇವರು....” ಅವರಿಗೆ ಕೃಪಾಕಾಲವನ್ನು ಹೆಚ್ಚಾಗಿ ಕೊಟ್ಟಿದ್ದಾನೆ (2 ಪೇತ್ರನು 1:4). ಆದರೆ ಅವರು ತಮ್ಮೆಲ್ಲಾ ಶಕ್ತಿ, ಸಾಮರ್ಥ್ಯವನ್ನು ಸ್ವಾರ್ಥದ ವ್ಯವಹಾರದಲ್ಲಿ ಉಪಯೋಗಿಸಿಕೊಂಡು ಲೋಕದ ಜಂಜಾಟದಲ್ಲಿ ಮುಳುಗಿದ್ದಾರೆ. ಇದರಿಂದಾಗಿ ಅವರು ದೇವರಿಗೆ ಸಂಪೂರ್ಣವಾಗಿ ಸೇವೆ ಮಾಡಲಾರರು. ಲೋಕದ ವ್ಯಾಪಾರ ವ್ಯವಹಾರಗಳು ಅವರಿಗೆ ಪ್ರಾಮುಖ್ಯವಾಗಿದ್ದು, ತಮ್ಮೆಲ್ಲಾ ಸಾಮರ್ಥ್ಯವನ್ನು ಅದಕ್ಕಾಗಿ ಉಪಯೋಗಿಸುತ್ತಾರೆ. ಆದರೆ ದೇವರಿಗೆ ಅಲ್ಪಸಮಯ ಮೀಸಲಿಡುತ್ತಾರೆ. ಇಂತವರು “ಮೈಲಿಗೆಯಾದವನು ತನ್ನನ್ನು ಇನ್ನೂ ಮೈಲಿಗೆ ಮಾಡಿಕೊಳ್ಳಲಿ, ನೀತಿವಂತನು ಇನ್ನೂ ನೀತಿಯನ್ನು ಅನುಸರಿಸಲಿ.” (ಪ್ರಕಟನೆ 22:11) ಎಂಬ ಅಂತಿಮ ತೀರ್ಮಾನದ ನಂತರ ಬದಲಾವಣೆ ಹೊಂದಬೇಕಾಗಿದೆಯೇ? ಅಂತಹ ಸಮಯ ಬರಲಿದೆ. KanCCh 221.2
ಆತ್ಮೀಕ ವಿಷಯಗಳಲ್ಲಿ ಆನಂದಪಡುವವರು ಮಾತ್ರ ಪರಲೋಕಕ್ಕೆ ಹೋಗುತ್ತಾರೆ. ಅಂತವರು ಪರಲೋಕದ ಪವಿತ್ರವಾದ ಹಾಗೂ ಅತಿಶಯವಾದ ಮಹಿಮೆಯಿಂದ ಭಾವೋದ್ವೇಗಕ್ಕೆ ಒಳಗಾಗಿ ಪರವಶರಾಗುವುದಿಲ್ಲ. ನಿಮಗೆ ಈ ಲೋಕದ ಶಿಕ್ಷಣದಲ್ಲಿ ಕಲೆ, ವಿಜ್ಞಾನ, ವಾಣಿಜ್ಯ ವಿಷಯಗಳಲ್ಲಿ ಅತ್ಯುತ್ತಮ ಜ್ಞಾನವಿರಬಹುದು, ಸಂಗೀತದಲ್ಲಿ ಮತ್ತು ಪುಸ್ತಕ ಬರೆಯುವ ಸಾಮರ್ಥ್ಯವಿರಬಹುದು. ನಮ್ಮ ನಡವಳಿಕೆಯು ಸಹೋದ್ಯೋಗಿಗಳಲ್ಲಿ ಮೆಚ್ಚುಗೆ ತರಬಹುದು. ಆದರೆ ಇವೆಲ್ಲವೂ ಪರಲೋಕಕ್ಕೆ ನಿಮ್ಮನ್ನು ಸಿದ್ಧಮಾಡಿಕೊಳ್ಳುವುದಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ? ದೇವರ ನ್ಯಾಯಾಲಯದ ಮುಂದೆ ನಿಲ್ಲಲು ಇವು ಹೇಗೆ ನಿಮ್ಮನ್ನು ಸಿದ್ಧ ಮಾಡುತ್ತವೆ? KanCCh 222.1