ಸೋಮಾರಿತನದಿಂದ ಬಹಳಷ್ಟು ಪಾಪಗಳುಂಟಾಗುತ್ತದೆಂದು ಶ್ರೀಮತಿ ವೈಟಮ್ಮನವರಿಗೆ ದರ್ಶನದಲ್ಲಿ ತೋರಿಸಲಾಯಿತು. ಚಟುವಟಿಕೆಯಿಂದಿರುವವರಿಗೆ ಶತ್ರುವಾದ ಸೈತಾನನು ಪ್ರೇರಿಸುವ ಶೋಧನೆಗಳಿಗೆ ಗಮನನೀಡಲು ಸಮಯ ಇರುವುದಿಲ್ಲ. ಆದರೆ ಸೋಮಾರಿಯಾದ ಮನಸ್ಸು ಮತ್ತು ಕೈಗಳು ಈಗಾಗಲೇ ಸೈತಾನನ ಅಧೀನದಲ್ಲಿರುತ್ತವೆ. ಮನಸ್ಸನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದಿದ್ದಲ್ಲಿ, ಅದು ಅಯೋಗ್ಯವೂ, ಅಸಭ್ಯವೂ ಆದ ಅಶ್ಲೀಲ ವಿಷಯಗಳ ಬಗ್ಗೆ ಚಿಂತಿಸುತ್ತದೆ. ಸೋಮಾರಿತನವು ಪಾಪವೆಂದು ತಂದೆ-ತಾಯಿಯರು ಮಕ್ಕಳಿಗೆ ಬೋಧಿಸಬೇಕು. KanCCh 234.1
ಮಕ್ಕಳನ್ನು ಯಾವುದೇ ಕೆಲಸಮಾಡದಂತೆ ಸೋಮಾರಿಗಳಾಗಿ ಜೀವನದಲ್ಲಿ ಯಾವುದೇ ಗುರಿಯಿಲ್ಲದಂತೆ ಬೆಳೆಸುವುದು ಅಥವಾ ಅವರ ಇಷ್ಟದಂತೆ ಬೇಕಾದದ್ದನ್ನು ಮಾಡುವುದಕ್ಕೆ ಬಿಡುವುದಕ್ಕಿಂತ ಅವರನ್ನು ಕೆಟ್ಟತನಕ್ಕೆ ನಡೆಸುವುದು ಬೇರೆ ಯಾವುದೂ ಇಲ್ಲ. ಮಕ್ಕಳ ಮನಸ್ಸು ಕ್ರಿಯಾತ್ಮಕವಾಗಿರುವುದರಿಂದ, ಅದನ್ನು ಒಳ್ಳೆಯ ಹಾಗೂ ಉಪಯುಕ್ತವಾದ ರೀತಿಯಲ್ಲಿ ಉಪಯೋಗಿಸದಿದ್ದಲ್ಲಿ, ಅನಿವಾರ್ಯವಾಗಿ ಅವರು ಕೆಟ್ಟದ್ದಕ್ಕೆ ಗಮನ ನೀಡುವರು. ಮಕ್ಕಳಿಗೆ ಮನರಂಜನೆ ಅಗತ್ಯ. ಆದುದರಿಂದ ಅವರು ಪ್ರತಿದಿನವೂ ನಿಗದಿತ ಸಮಯದಲ್ಲಿ ಶಾರೀರಿಕ ಶ್ರಮದಲ್ಲಿ ತೊಡಗಬೇಕು ಮತ್ತು ಓದುವುದಕ್ಕೂ ಹಾಗೂ ಅಧ್ಯಯನ ಮಾಡುವುದಕ್ಕೂ ಕಲಿಸಬೇಕು. ಮಕ್ಕಳ ವಯಸ್ಸಿಗೆ ತಕ್ಕಂತೆ ಕೆಲಸಮಾಡುವಂತೆ ನೋಡಿಕೊಳ್ಳಬೇಕು. ಅಲ್ಲದೆ ಉಪಯುಕ್ತವೂ, ಆಸಕ್ತಿಕರವೂ ಆದ ಪುಸ್ತಕಗಳನ್ನು ಒದಗಿಸಬೇಕು. KanCCh 234.2
ಮಕ್ಕಳು ಸಾಮಾನ್ಯವಾಗಿ ಯಾವುದೇ ಕೆಲಸವನ್ನಾದರೂ ಬಹಳ ಉತ್ಸಾಹದಿಂದ ಆರಂಭಿಸುತ್ತಾರೆ. ಆದರೆ ಶೀಘ್ರದಲ್ಲಿಯೇ ಅದರ ಬಗ್ಗೆ ಬೇಸರಗೊಂಡು, ಹೊಸದಾದ ಬೇರೆ ಕೆಲಸಮಾಡಲು ಬಯಸುವರು. ಈ ರೀತಿಯಲ್ಲಿ ಅವರು ಒಂದೇಬಾರಿಗೆ ಅನೇಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಶೀಘ್ರದಲ್ಲಿಯೇ ನಿರಾಶೆಗೊಂಡು ಎಲ್ಲವನ್ನೂ ಅರ್ಧದಲ್ಲಿಯೇ ನಿಲ್ಲಿಸುವರು. ಎಲ್ಲವೂ ಅಪೂರ್ಣವಾಗಿ ಉಳಿಯುವುದು. ತಮ್ಮ ಮಕ್ಕಳನ್ನು ತಾಳ್ಮೆಯಿಂದ ಶಿಸ್ತಿಗೆ ಒಳಪಡಿಸುವುದಕ್ಕೆ ತಂದೆತಾಯಿಯರು ಹೆಚ್ಚು ಗಮನ ಕೊಡಬೇಕು. ಮಕ್ಕಳಿಗೆ ಹೇಳುವ ಉತ್ತೇಜಕರವಾದ ಮಾತುಗಳು, ಸರಿಯಾದ ಸಮಯದಲ್ಲಿ ಮಾಡುವ ಅಲ್ಪಸಹಾಯದಿಂದ ಅವರಲ್ಲಿ ಸಮಸ್ಯೆ ಮತ್ತು ನಿರಾಶೆ ಎಷ್ಟೋ ಮಟ್ಟಿಗೆ ಕಡಿಮೆಯಾಗುತ್ತವೆ. ತಾವು ಕೈಗೆತ್ತಿಕೊಂಡ ಕೆಲಸವು ಯಶಸ್ವಿಯಾಗಿ ಮುಕ್ತಾಯವಾದದ್ದನ್ನು ಕಂಡು ಸಂತೋಷದಿಂದ ತೃಪ್ತರಾಗುವ ಮಕ್ಕಳು, ಇದರಿಂದ ಉತ್ತೇಜನಗೊಂಡು ಇನ್ನೂ ಹೆಚ್ಚಿನ ಕೆಲಸಕ್ಕೆ ಆಸಕ್ತಿ ತೋರಿಸುವರು. KanCCh 234.3
ಚಿಕ್ಕಂದಿನಿಂದಲೇ ಬಹಳ ಮುದ್ದಿನಿಂದ ಮಕ್ಕಳನ್ನು ಓಲೈಸಿ ಬೆಳೆಸಿದಲ್ಲಿ, ಅವರು ಯಾವಾಗಲು ಇದನ್ನೇ ಬಯಸುವರು. ಅವರ ಈ ನಿರೀಕ್ಷೆಗಳು ಈಡೇರದಿದ್ದಲ್ಲಿ, ನಿರಾಸೆಯಿಂದ ಹತಾಶೆಗೊಳ್ಳುವರು. ಈ ಪ್ರವೃತ್ತಿಯು ಅವರ ಜೀವನದಾದ್ಯಂತ ಕಂಡುಬರುವುದು. ಅವರು ಅಸಹಾಯಕರಾಗಿ ಇತರರು ತಮಗೆ ಸಹಾಯ ಮಾಡಬೇಕೆಂದು ನಿರೀಕ್ಷಿಸುತ್ತಾರೆ. ಅವರನ್ನು ವಿರೋಧಿಸಿದಲ್ಲಿ, ಅವರು ಯೌವನಸ್ಥರಾಗಿದ್ದರೂ, ಇದನ್ನು ಮನಸ್ಸಿಗೆ ಹಚ್ಚಿಕೊಂಡು ತಮ್ಮನ್ನು ಗದರಿಸಿದರೆಂದು ತಿಳಿಯುತ್ತಾರೆ. ಯಾವುದೂ ಸಹ ತಮ್ಮ ಎಣಿಕೆಗೆ ತಕ್ಕಂತೆ ನಡೆಯುವುದಿಲ್ಲವೆಂದು ತಿಳಿದು ಗುಣಗುಟ್ಟುತ್ತಾ ಕೋಪದಿಂದ ಕೆರಳಿ ದುಗುಡಗೊಳ್ಳುತ್ತಾರೆ. KanCCh 235.1
ಗಂಡುಮಕ್ಕಳು ಹಾಯಾಗಿ ಕುಳಿತು ಕಾಲಕಳೆಯುವುದಕ್ಕೆ ಬಿಟ್ಟು, ಮನೆಯ ಇತರೆಲ್ಲಾ ಕೆಲಸಗಳನ್ನು ತಾನೊಬ್ಬಳೇ ಮಾಡುವ ಮಹಿಳೆ ತನಗೆ ಮಾತ್ರವಲ್ಲದೆ, ಕುಟುಂಬಕ್ಕೆ ಗಂಭೀರವಾದ ಅನ್ಯಾಯ ಮಾಡಿಕೊಳ್ಳುತ್ತಾಳೆ. ಹೆಂಡತಿಯರು ಹಾಗೂ ತಾಯಂದಿರು ತಮ್ಮ ಕುಟುಂಬಗಳಲ್ಲಿ ದಾಸಿಯರಾಗಿರಬೇಕೆಂದು ದೇವರು ಎಂದೂ ಇಚ್ಛಿಸಿಲ್ಲ. ಮಕ್ಕಳಿಂದ ಕೆಲಸ ಮಾಡಿಸದೆ, ಕೆಲಸದ ಅತಿಭಾರದಿಂದ ನರಳುವ ಮಹಿಳೆಯರು ಬೇಗನೆ ವಯಸ್ಸಾದಂತೆ ಕಾಣುತ್ತಾರಲ್ಲದೆ, ಅಕಾಲ ಮರಣವನ್ನು ಹೊಂದುವ ಸಾಧ್ಯತೆ ಹೆಚ್ಚು. ಇದರಿಂದಾಗಿ ಮಕ್ಕಳಿಗೆ ತಾಯಿಯ ಅಗತ್ಯ ಹೆಚ್ಚಾಗಿಬೇಕಿರುವ ಸಂದರ್ಭದಲ್ಲಿ ಅವರು ತಾಯಿಯಿಲ್ಲದೆ ಅನಾಥರಾಗುತ್ತಾರೆ. ಇದಕ್ಕೆ ಯಾರು ಹೊಣೆ? ಯಾರನ್ನು ದೂಷಿಸುವುದು? ಗಂಡಂದಿರು ತಮ್ಮ ಹೆಂಡತಿಯರು ಸಂತೋಷವಾಗಿರುವಂತೆ ಸಾಧ್ಯವಾದಷ್ಟು ಕೆಲಸದ ಭಾರವನ್ನು ಹೊತ್ತುಕೊಳ್ಳಬೇಕು. ಮಕ್ಕಳು ಸೋಮಾರಿಯಾಗುವಂತೆ ಅವಕಾಶ ನೀಡಿದಲ್ಲಿ, ಶೀಘ್ರವಾಗಿ ಅದು ಅವರಿಗೆ ಅಭ್ಯಾಸವಾಗಿ ಪರಿಣಮಿಸುವುದು. KanCCh 235.2