ಕೆಲವು ತಾಯಂದಿರು ತಮ್ಮ ಎಲ್ಲಾ ಮಕ್ಕಳನ್ನು ಒಂದೇರೀತಿ ಕಾಣುವುದಿಲ್ಲ. ಹಲವಾರು ಸಂದರ್ಭಗಳಲ್ಲಿ ತಮ್ಮ ಮಕ್ಕಳಿಗೆ ಸಂತೋಷತರಬಹುದಾದ ಪ್ರತಿಫಲವನ್ನು ನಿರಾಕರಿಸುತ್ತಾರೆ. ಈ ಕಾರ್ಯದಲ್ಲಿ ಅವರು ಕ್ರಿಸ್ತನನ್ನು ಅನುಕರಣೆ ಮಾಡುವುದಿಲ್ಲ. ಆತನು ಮಕ್ಕಳನ್ನು ಪ್ರೀತಿಸಿದನು; ಅವರ ಭಾವನೆಗಳನ್ನು ಗ್ರಹಿಸಿಕೊಂಡು ಅವರ ಸಂತೋಷ ಮತ್ತು ಕಷ್ಟಸಂಕಟದಲ್ಲಿ ಕರುಣೆ ತೋರಿಸಿದನು. ಮಕ್ಕಳು ಯಾವುದಾದರೂ ಮನರಂಜನೆಯ ಕಾರ್ಯಕ್ರಮಕ್ಕೆ ಹೋಗುವುದಾಗಿ ನಿಮ್ಮನ್ನು ಕೇಳಬಹುದು. ಆಗ ನೀವು ಅವರಿಗೆ “ಅಲ್ಲಿಗೆ ಹೋಗಲು ನಿಮಗೆ ಅನುಮತಿ ನೀಡಲಾರೆ; ನಾನು ನಿಮ್ಮ ರಕ್ಷಣೆಗಾಗಿ ಕಾರ್ಯಮಾಡುತ್ತಿದ್ದೇನೆ; ದೇವರು ನಿಮ್ಮನ್ನು ನನ್ನ ಲಾಲನೆಪಾಲನೆಗೆ ಒಪ್ಪಿಸಿದ್ದಾನೆ. ಆದುದರಿಂದ ನ್ಯಾಯ ವಿಚಾರಣೆಯ ದಿನದಲ್ಲಿ ನಾನು ದೇವರಿಗೆ ಲೆಕ್ಕ ಕೊಡಬೇಕಾಗಿದೆ. ನಿಮ್ಮ ತಾಯಿಯು ತನ್ನ ಕರ್ತವ್ಯದಲ್ಲಿ ವಿಫಲಳಾದಳೆಂದು ಪರಲೋಕದಲ್ಲಿ ನನ್ನ ಹೆಸರು ಬರೆಯಲ್ಪಡಬೇಕೆಂದು ನೀವು ಬಯಸುವಿರಾ? ಮಕ್ಕಳೇ, ಸರಿಯಾದ ಮಾರ್ಗ ಯಾವುದೆಂದು ನಿಮಗೆ ತಿಳಿಸುತ್ತೇನೆ. ನಿಮ್ಮ ತಾಯಿಯ ಮಾತನ್ನು ಮೀರಿ ಕೆಟ್ಟಮಾರ್ಗಕ್ಕೆ ನೀವು ಹೋದರೆ, ಆ ದೋಷ ನನಗಿಲ್ಲ, ಆದರೆ ನೀವು ನಿಮ್ಮ ಪಾಪದ ದೆಸೆಯಿಂದ ಬಾಧೆಪಡುವಿರಿ” ಎಂದು ಹೇಳಬೇಕು. KanCCh 242.2
ಶ್ರೀಮತಿ ವೈಟಮ್ಮನವರು ತಮ್ಮ ಮಕ್ಕಳು ಯಾವುದಾದರೂ ಮನರಂಜನೆಯ ಕಾರ್ಯಕ್ರಮಕ್ಕೆ ಹೋಗಬೇಕೆಂದು ಕೇಳಿದಾಗ ಮೇಲೆ ತಿಳಿಸಿದಂತೆ ಉತ್ತರ ಕೊಡುತ್ತಿದ್ದರು. ಮಕ್ಕಳು ಅಳುತ್ತಾ ಅಮ್ಮ, ನಮಗಾಗಿ ನೀವು ಪ್ರಾರ್ಥಿಸುವುದಿಲ್ಲವೇ? ಎಂದು ಕೇಳಿದಾಗ, ಶ್ರೀಮತಿ ವೈಟಮ್ಮನವರು ಅವರಿಗಾಗಿ ಪ್ರಾರ್ಥಿಸುತ್ತಿದ್ದರು. ಅಲ್ಲದೆ ರಾತ್ರಿಪೂರ್ತಿ ಸೈತಾನನ ಮೇಲೆ ಜಯ ಹೊಂದುವುದಕ್ಕಾಗಿ ಏಕಾಂತವಾಗಿ ಅವರು ದೇವರಲ್ಲಿ ಮೊರೆಯಿಡುತ್ತಿದ್ದರು. ಇದರಿಂದ ಶ್ರೀಮತಿ ವೈಟಮ್ಮನವರಿಗೆ ನಿದ್ರಾಭಂಗವಾದರೂ, ಮಕ್ಕಳು ತಮ್ಮ ಬೇಡಿಕೆಯು ತಪ್ಪೆಂದು ಮನವರಿಕೆ ಮಾಡಿಕೊಂಡಾಗ, ಅವರಿಗೆ ಬಹಳ ಸಂತೋಷವಾಗುತ್ತಿತ್ತು. KanCCh 243.1
ತಂದೆತಾಯಿಯರೇ, ನೀವೂಸಹ ನಿಮ್ಮ ಮಕ್ಕಳ ವಿಷಯದಲ್ಲಿ ಇದೇ ಮಾದರಿ ಅನುಸರಿಸಬೇಕು. ನಿಮ್ಮ ಮಕ್ಕಳನ್ನು ಪರಲೋಕದಲ್ಲಿ ನೀವು ಕಾಣಬೇಕೆಂದು ನಿರೀಕ್ಷಿಸಿದಲ್ಲಿ ಇಂತಹ ಮಾದರಿಯನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಿಮ್ಮ ಮಕ್ಕಳು ನಗರದಿಂದ ದೂರಇರುವಂತ ಸ್ಥಳದಲ್ಲಿ ಶಿಕ್ಷಣ ಪಡೆದುಕೊಳ್ಳಬೇಕು. ಆಗತಾನೇ ಅವರು ಉತ್ತಮವಾದ ಶಿಕ್ಷಣ ಪಡೆಯುತ್ತಾರೆ. ನಗರಗಳಲ್ಲಿರುವ ಸಂಪ್ರದಾಯಗಳು ಮತ್ತು ಆಚರಣೆಗಳು ಸತ್ಯವನ್ನು ಯೌವನಸ್ಥರು ಗ್ರಹಿಸಿಕೊಳ್ಳುವುದಕ್ಕೆ ಸಾಧ್ಯವಾಗದಂತೆ ಮಾಡುತ್ತವೆ. KanCCh 243.2