ನಿಮ್ಮ ಮಕ್ಕಳಿಗೆ ಕೊಡಬೇಕಾದ ಯೋಗ್ಯವಾದ ತರಬೇತಿಯನ್ನು ನೀವು ನಿರ್ಲಕ್ಷಿಸಲಾಗದು. ಅವರ ದೋಷಪೂರಿತ ಸ್ವಭಾವವು ನಿಮ್ಮ ಅಪನಂಬಿಕೆಯನ್ನು ತೋರಿಸುತ್ತದೆ. ನಿಮ್ಮ ಮಕ್ಕಳ ಕೆಟ್ಟತನವನ್ನು ನೀವು ಸರಿಪಡಿಸಲು ವಿಫಲರಾದಲ್ಲಿ, ಅವರ ಅವಿಧೇಯತೆ ನಿಮಗೆ ತೋರುವ ಆಗೌರವ, ಒರಟು ಮಾತುಗಳು- ಇವೆಲ್ಲಾ ನಿಮಗೆ ಕೆಟ್ಟ ಹೆಸರು ತರುವುದಲ್ಲದೆ, ಜೀವನದಲ್ಲಿ ನೋವು ತರುತ್ತದೆ. ನಿಮ್ಮ ಮಗುವಿನ ಮುಂದಿನ ಭವಿಷ್ಯವು ಮುಖ್ಯವಾಗಿ ನಿಮ್ಮ ಕೈಯಲ್ಲಿದೆ. ತಂದೆ ತಾಯಿಯರಾದ ನೀವು ಮಕ್ಕಳ ಲಾಲನೆ ಪಾಲನೆಯಲ್ಲಿ ಹಾಗೂ ಸರಿಯಾಗಿ ಬೆಳೆಸಬೇಕಾದ ನಿಮ್ಮ ಕರ್ತವ್ಯದಲ್ಲಿ ವಿಫಲರಾದಲ್ಲಿ, ಅವರನ್ನು ನೀವು ಸೈತಾನನ ವಶಕ್ಕೆ ಒಪ್ಪಿಸಿದಂತಾಗುತ್ತದೆ ಹಾಗೂ ಅವರು ಇತರರನ್ನು ನಾಶ ಮಾಡುವುದರಲ್ಲಿ ಶತ್ರುವಿನ ಏಜೆಂಟುಗಳಾಗುತ್ತಾರೆ. ಬದಲಾಗಿ ನಿಮ್ಮ ಮಕ್ಕಳಿಗೆ ನೀವೇ ಉತ್ತಮವಾದ ಮಾದರಿಯಾಗಿದ್ದು, ನಂಬಿಕೆಯಿಂದ ಅವರಿಗೆ ಬುದ್ಧಿವಾದ ಹೇಳಿ ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾಡಿದಾಗ ಅವರನ್ನು ಕ್ರಿಸ್ತನ ಬಳಿಗೆ ನಡೆಸಬಹುದು. ಆಗ ನಿಮ್ಮ ಮಕ್ಕಳು ಇತರರಮೇಲೆ ಉತ್ತಮಪ್ರಭಾವ ಬೀರಬಹುದು. ಇದರಿಂದ ಇನ್ನೂ ಅನೇಕರು ದೇವರರಾಜ್ಯಕ್ಕೆ ರಕ್ಷಿಸಲ್ಪಡುವರು. KanCCh 243.3
ಮಕ್ಕಳೊಂದಿಗೆ ನೀವು ಸರಳತೆಯಿಂದ ವರ್ತಿಸಬೇಕೆಂದು ದೇವರು ಬಯಸುತ್ತಾನೆ. ಹಿರಿಯರಿಗಿರುವಂತ ದೀರ್ಘಕಾಲದ ಅನುಭವ ಮಕ್ಕಳಿಗಿಲ್ಲವೆಂಬುದನ್ನು ನಾವು ಮರೆಯುತ್ತೇವೆ. ಎಲ್ಲಾ ವಿಷಯಗಳಲ್ಲಿಯೂ ಮಕ್ಕಳು ತಮ್ಮ ಮಾತಿನಂತೆ ನಡೆಯದಿದ್ದಲ್ಲಿ, ಅವರಿಗೆ ಬಯ್ಯಬೇಕೆಂದು ನಾವು ಬಯಸುತ್ತೇವೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗದು. ಬದಲಾಗಿ ಅವರನ್ನು ಪ್ರಾರ್ಥನೆಯಲ್ಲಿ ರಕ್ಷಕನ ಬಳಿಗೆ ಕರೆದುತರಬೇಕು. ಅನಂತರ ದೇವರ ಆಶೀರ್ವಾದವು ಮಕ್ಕಳಲ್ಲಿದೆ ಎಂದು ದೃಢವಿಶ್ವಾಸದಿಂದ ತಿಳಿದುಕೊಳ್ಳಿರಿ. KanCCh 243.4
ಕುಟುಂಬಪ್ರಾರ್ಥನೆಯನ್ನೂ ಒಳಗೊಂಡಂತೆ ಎಲ್ಲಾ ಸಮಯದ ಪ್ರಾರ್ಥನೆಯನ್ನು ಮಕ್ಕಳು ಗೌರವಿಸಬೇಕು. ಬೆಳಿಗ್ಗೆ ಕೆಲಸಕ್ಕಾಗಿ ಮನೆಯನ್ನು ಬಿಡುವುದಕ್ಕೆ ಮೊದಲು ತಂದೆತಾಯಿಯರು ಆ ದಿನವೆಲ್ಲಾ ಕಾಪಾಡಿ ರಕ್ಷಿಸಬೇಕೆಂದು ದೇವರಲ್ಲಿ ಪ್ರಾರ್ಥಿಸಬೇಕು. ದೀನಭಾವದಿಂದ ದೇವರ ಬಳಿಗೆ ಬರಬೇಕು. ನಂಬಿಕೆಯಿಂದ ಎಲ್ಲರೂ ಒಟ್ಟಾಗಿ ಪ್ರಾರ್ಥನೆಯಲ್ಲಿ ಭಾಗವಹಿಸಿ, ದೇವರ ಆಶೀರ್ವಾದಕ್ಕಾಗಿ ಬೇಡಿಕೊಳ್ಳಬೇಕು. ಈ ವಿಧವಾಗಿ ದೇವರಿಗೆ ಪ್ರತಿಷ್ಠಿಸಲ್ಪಟ್ಟ ಮಕ್ಕಳನ್ನು ದೇವದೂತರು ಕಾಪಾಡುತ್ತಾರೆ. ಬೆಳಿಗ್ಗೆ ಹಾಗೂ ಸಾಯಂಕಾಲ ಮನಃಪೂರ್ವಕ ಪ್ರಾರ್ಥನೆ ಮತ್ತು ದೃಢನಂಬಿಕೆಯಿಂದ ತಮ್ಮ ಮಕ್ಕಳ ಸುತ್ತಲೂ ಕೃಪಾಬೇಲಿ ಹಾಕಬೇಕೆಂದು ಪ್ರಾರ್ಥಿಸುವುದು ಕ್ರೈಸ್ತ ತಂದೆ ತಾಯಿಯರ ಕರ್ತವ್ಯವಾಗಿದೆ. ದೇವರಿಗೆ ಮೆಚ್ಚಿಕೆಯಾದ ರೀತಿಯಲ್ಲಿ ಹೇಗೆ ಜೀವಿಸಬೇಕೆಂಬುದನ್ನು ಮಕ್ಕಳಿಗೆ ತಾಳ್ಮೆಯಿಂದಲೂ ಹಾಗೂ ಕರುಣೆಯಿಂದಲೂ ತಿಳಿಯಹೇಳಬೇಕು. KanCCh 244.1
ಪ್ರತಿದಿನವೂ ಸಹ ಪವಿತ್ರಾತ್ಮನ ದೀಕ್ಷಾಸ್ನಾನ ಹೊಂದಿಕೊಳ್ಳುವುದು ಉತ್ತಮವಾದ ಅವಕಾಶವೆಂದು ಮಕ್ಕಳಿಗೆ ತಿಳಿಸಬೇಕು. ದೇವರ ಈ ಉದ್ದೇಶಗಳನ್ನು ನಡೆಸಲು ಬೇಕಾದ ಸಹಾಯಕ್ಕಾಗಿ ಕ್ರಿಸ್ತನಲ್ಲಿ ಭರವಸೆ ಇಡಬೇಕು. ಪ್ರಾರ್ಥನೆಯ ಮೂಲಕ ನೀವು ಉತ್ತಮ ಅನುಭವ ಪಡಕೊಳ್ಳುವುದು ಮಾತ್ರವಲ್ಲದೆ ನಿಮ್ಮ ಮಕ್ಕಳಿಗಾಗಿ ನೀವುಮಾಡುವ ಸೇವೆಯು ಯಶಸ್ವಿಯಾಗುತ್ತದೆ. KanCCh 244.2
ತಮ್ಮ ಮಕ್ಕಳ ಬಾಲ್ಯದ ಕ್ರಮಬದ್ಧ ಬದಲಾವಣೆ, ಯೌವನದಲ್ಲಿ ಅವರು ಎದುರಿಸುವ ಆಪತ್ತಿನ ಸಮಯದಲ್ಲಿ ಎಡೆಬಿಡದೆ ತಾಯಿಯು ಪ್ರಾರ್ಥಿಸಬೇಕು. ತನ್ನ ಪ್ರಾರ್ಥನೆಯು ಮಕ್ಕಳ ಜೀವನದಲ್ಲಿ ಎಂತಹ ಪರಿಣಾಮ ಉಂಟುಮಾಡಿದೆ ಎಂಬುದನ್ನು ಆಕೆಯು ನ್ಯಾಯತೀರ್ಪಿನ ದಿನದಲ್ಲಿ ಮಾತ್ರ ತಿಳಿದುಕೊಳ್ಳುವಳು. ತಾಯಿ ನಂಬಿಕೆಯಿಂದ ಕ್ರಿಸ್ತನಲ್ಲಿ ದೃಢಭರವಸೆ ಇಟ್ಟಲ್ಲಿ, ಆಕೆಯ ಮಗನು ಶೋಧನೆಯಿಂದ ತಪ್ಪಿಸಿಕೊಳ್ಳುವನು ಹಾಗೂ ಮಗಳು ಪಾಪಮಾಡದಂತೆ ದೇವರು ಅವಳನ್ನು ಕಾಪಾಡುವನು. ಯೌವನಸ್ಥರಾದ ಮಕ್ಕಳಲ್ಲಿ ಬಲವಾದ ಮನೋವಿಕಾರ ಆಥವಾ ಲೈಂಗಿಕ ಪ್ರೇಮ ಉಂಟಾಗುವಾಗ ತಾಯಿಯ ಪ್ರೀತಿ, ಮನಃಪೂರ್ವಕವಾದ ನಿರ್ಧಾರ, ದೃಢವಾದ ಪ್ರಭಾವವು ಮಕ್ಕಳನ್ನು ಆ ಪಾಪದಿಂದ ತಪ್ಪಿಸುವುದು. KanCCh 244.3
ನಿಮ್ಮ ಮಕ್ಕಳಿಗೆ ಮಾಡಬೇಕಾದ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದಾಗ ನಿಮಗೆ ಸಹಾಯ ಮಾಡುವಂತೆ ಮಕ್ಕಳೊಂದಿಗೆ ದೇವರಲ್ಲಿ ಬೇಡಿಕೊಳ್ಳಿರಿ. “ತಂದೆಯೇ, ನನ್ನ ಕರ್ತವ್ಯ ನಾನು ಮಾಡಿದ್ದೇನೆ; ನಿನ್ನ ಕಾರ್ಯವನ್ನು ನೀನು ಮಕ್ಕಳ ವಿಷಯದಲ್ಲ ಮಾಡು, ಅದನ್ನು ಮಾಡಲು ನನ್ನಿಂದ ಸಾಧ್ಯವಿಲ್ಲ” ಎಂದು ಕೇಳಿಕೊಳ್ಳಿರಿ. ಅವರು ತಮ್ಮ ಸ್ವಭಾವಗಳನ್ನು ಹತೋಟಿಯಲ್ಲಿಟ್ಟು ಕೊಳ್ಳುವಂತೆಯೂ ಹಾಗೂ ಪರಿಶುದ್ಧಾತ್ಮನ ಸಹಾಯದಿಂದ ಉತ್ತಮವಾದ ವ್ಯಕ್ತಿಗಳಾಗುವಂತೆ ದೇವರಲ್ಲಿ ಬೇಡಿಕೊಳ್ಳಿರಿ. ತಾಯಿಯರಾದ ನಿಮ್ಮ ಪ್ರಾರ್ಥನೆಯನ್ನು ದೇವರು ಕೇಳುತ್ತಾನೆ. ನಿಮ್ಮ ಪ್ರಾರ್ಥನೆಗೆ ಪ್ರೀತಿಯಿಂದ ಉತ್ತರಿಸಲು ಆತನು ಬಯಸುತ್ತಾನೆ. ದೇವರು ತನ್ನವಾಕ್ಯದ ಮೂಲಕ ನಿಮ್ಮ ಮಕ್ಕಳ ತಪ್ಪುದೋಷಗಳನ್ನು ಸರಿಪಡಿಸಬೇಕೆಂದು ಆದೇಶಕೊಟ್ಟಿದ್ದಾನೆ. ಅವರ ಕಣ್ಣೀರಿಗೆ ನೀವು ಮನಕರಗಬಾರದು, ಈ ವಿಷಯದಲ್ಲಿ ದೇವರ ವಾಕ್ಯದಲ್ಲಿ ತಿಳಿಸಿರುವುದನ್ನು ಅನುಸರಿಸಬೇಕು. KanCCh 244.4