ಅಡ್ವೆಂಟಿಸ್ಟ್ ಕ್ರೈಸ್ತರು ಕ್ರಿಸ್ತನ ಸ್ವರೂಪದಲ್ಲಿ ಹೊಂದಿಕೊಳ್ಳುವುದಕ್ಕೆ ಬದಲಾಗಿ, ಲೋಕದೊಂದಿಗೆ ಒಂದಾಗುವ ಅಪಾಯವು ಶ್ರೀಮತಿ ವೈಟಮ್ಮನವರಿಗೆ ದರ್ಶನದಲ್ಲಿ ತೋರಿಸಲ್ಪಟ್ಟಿತು. ಕ್ರಿಸ್ತನ ಬರೋಣವು ಅತಿ ಶೀಘ್ರದಲ್ಲಿ ಆಗುವ ಸಮಯದಲ್ಲಿ ನಾವಿದ್ದೇವೆ. ಆದರೆ ಆ ಕಾಲವು ಇನ್ನೂ ಬಹುದೂರದಲ್ಲಿದೆ ಎಂಬ ಭಾವನೆಯನ್ನು ನಮ್ಮಲ್ಲಿ ಹುಟ್ಟಿಸುವುದು ವಿರೋಧಿಯಾದ ಸೈತಾನನ ಉದ್ದೇಶವಾಗಿದೆ. ದೇವರಾಜ್ಞೆಗಳನ್ನು ಕೈಕೊಂಡು, ಮಹಾಮಹಿಮೆ ಹಾಗೂ ಶಕ್ತಿಯಿಂದ ಮೇಘರೂಢನಾಗಿ ಪರಲೋಕದಿಂದ ಬರುವ ನಮ್ಮ ರಕ್ಷಕನ ಎರಡನೇ ಬರೋಣಕ್ಕಾಗಿ ಕಾದುಕೊಂಡಿರುವವರ ಮೇಲೆ ಮನಸ್ಸಿನಲ್ಲಿ ಊಹಿಸಲಾಗುವ ಎಲ್ಲಾರೀತಿಯಲ್ಲಿ ದಾಳಿಮಾಡುತ್ತಾನೆ. ಅವನು ಸಾಧ್ಯವಾದಷ್ಟು ಜನರು ದೇವರನ್ನು ಬಿಟ್ಟು ಈ ಲೋಕದ ಸಂಪ್ರದಾಯ ಆಚರಣೆಗಳನ್ನು ರೂಢಿಸಿಕೊಂಡು ಅದರಲ್ಲಿಯೇ ಮಗ್ನರಾಗುವಂತೆ ಮಾಡುತ್ತಾನೆ. ಸತ್ಯವನ್ನು ಅನುಸರಿಸುತ್ತೇವೆಂದು ಹೇಳಿಕೊಳ್ಳುವ ಅನೇಕರ ಹೃದಯ ಹಾಗೂ ಮನಸ್ಸುಗಳು ಈ ಲೋಕದ ಆಶಾಪಾಶಗಳಿಂದ ನಿಯಂತ್ರಿಸಲ್ಪಡುವುದನ್ನು ಶ್ರೀಮತಿ ವೈಟಮ್ಮನವರು ಆ ದರ್ಶನದಲ್ಲಿ ನೋಡಿದಾಗ ಬಹಳ ದಿಗಿಲುಪಟ್ಟರು. ಅವರು ಸ್ವಾರ್ಥಿಗಳೂ, ಸುಖಭೋಗಗಳಲ್ಲಿ ಆಸಕ್ತಿಯುಳ್ಳವರಾಗಿದ್ದು, ನಿಜವಾದ ದೈವಭಕ್ತಿ ಹಾಗೂ ಪ್ರಾಮಾಣಿಕತೆ ಅವರಲ್ಲಿರಲಿಲ್ಲ. KanCCh 69.1