ದೇವರ ದೃಷ್ಟಿಯಲ್ಲಿ ಎಂತಹ ಸಮಯದಲ್ಲಿಯೂ ತನ್ನ ಯಥಾರ್ಥತೆಯನ್ನು ಕಾಪಾಡಿಕೊಳ್ಳುವವನೇ ನಿಜವಾದ ಪ್ರಾಮಾಣಿಕ ವ್ಯಕ್ತಿ, ಈ ಲೋಕದಲ್ಲಿ ಬೇಗನೆ ಹಣಗಳಿಸಿ ಶ್ರೀಮಂತರಾಗಬೇಕೆಂದು ಮೋಸದತೂಕ, ಅಳತೆ, ತಕ್ಕಡಿ ಉಪಯೋಗಿಸುವವರು ದೇವರಿಗೆ ಅಸಹ್ಯರು. ಆದಾಗ್ಯೂ ದೇವರಾಜ್ಞೆಗಳನ್ನು ಕೈಕೊಳ್ಳುತ್ತೇವೆಂದು ಹೇಳಿಕೊಳ್ಳುವ ಅನೇಕ ಕ್ರೈಸ್ತವ್ಯಾಪಾರಿಗಳು ಇಂತಹ ಅಸಹ್ಯಕಾರ್ಯ ಮಾಡುತ್ತಿದ್ದಾರೆ. ಒಬ್ಬ ವ್ಯಕ್ತಿಯು ದೇವರೊಂದಿಗೆ ನಿಕಟ ಸಂಬಂಧಹೊಂದಿ, ಸತ್ಯದಿಂದ ಆತನ ಆಜ್ಞೆಗಳನ್ನು ಕೈಕೊಂಡುನಡೆದಲ್ಲಿ, ಅದು ಅವನ ಜೀವನದಲ್ಲಿ ಕಂಡುಬರುವುದು, ಯಾಕೆಂದರೆ ಅವನ ಎಲ್ಲಾ ಕ್ರಿಯೆಗಳು ಕ್ರಿಸ್ತನ ಬೋಧನೆಗಳಿಗೆ ಅನುಗುಣವಾಗಿರುವವು. ಲಾಭಕ್ಕಾಗಿ ಅವನು ತನ್ನ ಗೌರವ ಕಳೆದುಕೊಳ್ಳುವುದಿಲ್ಲ. ಅವನ ಸಿದ್ಧಾಂತಗಳು ಸತ್ಯವೇದದ ಅಸ್ತಿವಾರದ ಮೇಲೆ ಆತುಕೊಂಡಿರುವವು ಹಾಗೂ ಅವನ ಎಲ್ಲಾ ಲೌಕಿಕ ವ್ಯಾಪಾರ ವ್ಯವಹಾರಗಳಲ್ಲಿ ಈ ಸಿದ್ಧಾಂತಗಳನ್ನು ಅವನು ತಪ್ಪದೆ ಅನುಸರಿಸುವನು. ಅವನ ದೃಢವಾದ ಪ್ರಾಮಾಣಿಕತೆಯು ಕಿಲುಬುತೆಗೆದ ಅಪ್ಪಟ ಬಂಗಾರದಂತೆ ಹೊಳೆಯುವುದು. KanCCh 70.3
ಮೋಸ, ಸುಳ್ಳು, ಅಪ್ರಮಾಣಿಕತೆಗಳನ್ನು ಮನುಷ್ಯರ ಕಣ್ಣಿಗೆ ತಪ್ಪಿಸಬಹುದು, ಆದರೆ ದೇವರ ಕಣ್ಣಿಗಲ್ಲ. ಮನುಷ್ಯರ ನೈತಿಕತೆ ಹಾಗೂ ಸ್ವಭಾವಗಳ ಬೆಳವಣಿಗೆಯನ್ನು ಗಮನಿಸುವ ದೇವದೂತರು ಪರಲೋಕದ ಪುಸ್ತಕಗಳಲ್ಲಿ ಈ ಚಿಕ್ಕ ವ್ಯವಹಾರಗಳನ್ನೂ ದಾಖಲಿಸುವರು. ಒಬ್ಬ ಕ್ರೈಸ್ತ ಕೆಲಸಗಾರನು ತನ್ನ ದಿನನಿತ್ಯದ ಕೆಲಸದಲ್ಲಿ ಅಪನಂಬಿಗಸ್ತನಾಗಿದ್ದು ಅದನ್ನು ಅಸಡ್ಡೆ ಮಾಡಿದಲ್ಲಿ, ಅವನ ವ್ಯಾಪಾರದ ಮಾನದಂಡಕ್ಕೆ ಅನುಸಾರವಾಗಿ, ಅವನ ಧರ್ಮವನ್ನೂ ಸಹ ಲೋಕದ ಜನರು ಅಳೆಯುವರು. KanCCh 71.1
ಕ್ರಿಸ್ತನ ಶೀಘ್ರ ಬರೋಣದಲ್ಲಿ ನಂಬಿಕೆಯಿಟ್ಟಿರುವ ಯಾವ ಯಥಾರ್ಥ ಕ್ರೈಸ್ತನೂ ತನ್ನ ದಿನನಿತ್ಯದ ಸಾಧಾರಣ ವ್ಯಾಪಾರವ್ಯವಹಾರದಲ್ಲಿ ಅಲಕ್ಷ್ಯ ಹಾಗೂ ಅಸಡ್ಡೆ ತೋರುವುದಿಲ್ಲ. ಮತ್ತೂ ಸೋಮಾರಿಯಾಗಿರುವುದಿಲ್ಲ. ಬದಲಾಗಿ ತನ್ನ ವ್ಯಾಪಾರದಲ್ಲಿ ಶ್ರದ್ಧೆ ತೋರುತ್ತಾನೆ. ಈ ಜೀವನದ ವಿಷಯಗಳಲ್ಲಿ ನಿರ್ಲಕ್ಷ್ಯತೆ ತೋರುವುದು, ಗಮನನೀಡದಿರುವುದು ತಮ್ಮ ಉತ್ತಮ ಆತ್ಮೀಕಜೀವನಕ್ಕೆ ಸಾಕ್ಷ್ಯಾಧಾರವೂ, ತಾವು ಲೋಕದಿಂದ ಪ್ರತ್ಯೇಕವಾಗಿದ್ದೇವೆಂದು ತಮ್ಮನ್ನು ತಾವೇ ಹೊಗಳಿಕೊಳ್ಳುವವರು ಒಂದು ದೊಡ್ಡಮೋಸಕ್ಕೆ ಒಳಗಾಗಿದ್ದಾರೆ. ಅವರ ನಂಬಿಗಸ್ತಿಕೆ, ಪ್ರಾಮಾಣಿಕತೆಯು ಲೌಕಿಕ ವಿಷಯಗಳ ಮೂಲಕ ಪರೀಕ್ಷಿಸಲ್ಪಡುವುದು. ಒಬ್ಬನು ಸ್ವಲ್ಪದ್ದರಲ್ಲಿ ಪ್ರಾಮಾಣಿಕನಾಗಿದ್ದಲ್ಲಿ, ಹೆಚ್ಚಿನದ್ದರಲ್ಲಿಯೂ ಪ್ರಾಮಾಣಿಕನಾಗಿರುವನು. KanCCh 71.2
ಇಂತಹ ಪ್ರಾಮಾಣಿಕತೆ ಕಾಪಾಡಿಕೊಳ್ಳುವುದರಲ್ಲಿ ಅನೇಕರು ವಿಫಲರಾಗಿ ಲೌಕಿಕತೆಗೆ ಸಂಬಂಧಪಟ್ಟ ವಿಷಯಗಳ ನಿರ್ವಹಣೆಯಲ್ಲಿ ಅವರ ನಿಜವಾದ ಬಣ್ಣ ಬಯಲಾಗುತ್ತದೆ. ಅವರು ತಮ್ಮ ಜೊತೆಗಾರರೊಂದಿಗೆ ವ್ಯವಹರಿಸುವಾಗ ಅಪನಂಬಿಕೆ, ಅಪ್ರಮಾಣಿಕತೆ ಮತ್ತು ಕುತಂತ್ರಗಳನ್ನು ತೋರಿಸುತ್ತಾರೆ. ತಮ್ಮ ಮುಂದಿನ ಭವಿಷ್ಯ ನಿತ್ಯಜೀವವು, ಈ ಲೋಕದಲ್ಲಿ ಅವರು ಹೇಗೆ ವ್ಯವಹರಿಸುತ್ತಾರೆಂಬುದರ ಮೇಲೆ ಆಧಾರಗೊಂಡಿದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಪ್ರಾಮಾಣಿಕತೆಯು ನೀತಿಯೆಂಬ ಸದ್ಗುಣಬೆಳೆಸಿಕೊಳ್ಳುವುದಕ್ಕೆ ಅತ್ಯಗತ್ಯವಾಗಿದೆ. ಅಪ್ರಮಾಣಿಕತೆಯು ಸತ್ಯದಲ್ಲಿ ವಿಶ್ವಾಸವಿಟ್ಟಿದ್ದೇವೆಂದು ಹೇಳಿಕೊಳ್ಳುವ ಅನೇಕರು ಆತ್ಮೀಕಜೀವಿತದಲ್ಲಿ ಆಸಕ್ತಿ ಕಳೆದುಕೊಂಡು ಉಗುರುಬೆಚ್ಚಗಿನ ಸ್ಥಿತಿಗೆ ಬರಲು ಕಾರಣವಾಗುತ್ತದೆ. ಅವರು ದೇವರೊಂದಿಗೆ ಆತ್ಮೀಕಸಂಬಂಧ ಹೊಂದಿರುವುದಿಲ್ಲ ಹಾಗೂ ತಮ್ಮನ್ನು ತಾವೇ ಮೋಸಗೊಳಿಸಿಕೊಳ್ಳುತ್ತಾರೆ. ಸಬ್ಬತ್ತನ್ನು ಕೈಕೊಂಡುನಡೆಯುವ ಅಡ್ವೆಂಟಿಸ್ಟರಲ್ಲಿಯೂ ಪ್ರಾಮಾಣಿಕತೆಯು ದಿಗಿಲುಹುಟ್ಟಿಸುವಂತ ರೀತಿಯಲ್ಲಿ ಕಡಿಮೆಯಾಗುತ್ತಿದೆ ಎಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ. KanCCh 71.3