ಪವಿತ್ರ ಸತ್ಯವೇದದಲ್ಲಿ ಸಾವಿರಾರು ರತ್ನಮಣಿ, ಮುತ್ತು, ಹರಳುಗಳಂತೆ ಸತ್ಯವು ಮರೆಯಾಗಿಡಲ್ಪಟ್ಟಿವೆ. ಸತ್ಯವೆಂಬ ಈ ಗಣಿಯು ಎಂದಿಗೂ ಬರಿದಾಗುವುದಿಲ್ಲ. ನಮ್ರತೆಯ ಹೃದಯಗಳಿಂದ ನಾವು ಸತ್ಯವೇದವನ್ನು ಹೆಚ್ಚಾಗಿ ಹುಡುಕಿದಷ್ಟೂ, ನಮ್ಮ ಆಸಕ್ತಿಯು ಅಷ್ಟೇ ಹೆಚ್ಚಾಗುತ್ತದೆ ಹಾಗೂ ನಾವೂ ಸಹ ಪೌಲನಂತೆಯೇ “ಆಹಾ, ದೇವರ ಐಶ್ವರ್ಯವೂ, ಜ್ಞಾನವೂ, ವಿವೇಕವೂ ಎಷ್ಟೋ ಅಗಾಧ! ಆತನ ತೀರ್ಮಾನಗಳು ಪರಿಶೋಧನೆಗೆ ಎಷ್ಟೋ ಅಗಮ್ಯ! ಆತನ ಮಾರ್ಗಗಳು ಕಂಡುಹಿಡಿಯುವುದಕ್ಕೆ ಎಷ್ಟೋ ಅಸಾಧ್ಯ“ವೆಂದು ಉದ್ಗರಿಸುತ್ತೇವೆ (ರೋಮಾಯ 11:33). KanCCh 74.1
ಯೇಸುಕ್ರಿಸ್ತನು ಹಾಗೂ ಆತನವಾಕ್ಯವು ಪರಿಪೂರ್ಣ ಸಾಮರಸ್ಯವಾಗಿವೆ. ಅವುಗಳನ್ನು ನಾವು ಅಂಗೀಕರಿಸಿ ಅದಕ್ಕೆ ವಿಧೇಯರಾದರೆ, ಕ್ರಿಸ್ತನ ಬೆಳಕಿನಲ್ಲಿ ನಾವು ನಡೆಯುವುದಕ್ಕೆ ಖಚಿತವಾದ ಮಾರ್ಗ ತೆರೆಯುತ್ತದೆ. ದೇವರ ಮಕ್ಕಳು ಆತನ ವಾಕ್ಯವನ್ನು ಗೌರವದಿಂದ ಕಂಡಲ್ಲಿ, ಈ ಲೋಕದಲ್ಲಿರುವ ಸಭೆಯಲ್ಲಿ ನಾವು ಪರಲೋಕವನ್ನು ಕಾಣುತ್ತೇವೆ. ಕ್ರೈಸ್ತರು ದೇವರ ವಾಕ್ಯವನ್ನು ಕಾತರದಿಂದಲೂ ಹಾಗೂ ಆತ್ಮೀಕ ಹಸಿವಿನಿಂದಲೂ ಹುಡುಕಬೇಕು. ಅವರು ಸತ್ಯವೇದದ ಒಂದು ವಾಕ್ಯವನ್ನು ಮತ್ತೊಂದು ವಾಕ್ಯದೊಡನೆ ಹೋಲಿಸುವುದಕ್ಕೂ ಮತ್ತು ಅದನ್ನು ಧ್ಯಾನಮಾಡುವ ಸಮಯಕ್ಕಾಗಿ ಕಾತರದಿಂದ ಕಾದುಕೊಂಡಿರುವರು. ಬೆಳಿಗ್ಗೆ ಕಾತರದಿಂದ ದಿನಪತ್ರಿಕೆ, ವಾರಪತ್ರಿಕೆ, ಕಥಾಪುಸ್ತಕಗಳಿಗಿಂತಲೂ ಹೆಚ್ಚಾಗಿ ವಾಕ್ಯದ ಬೆಳಕಿಗಾಗಿ ಹೆಚ್ಚಿನ ಕುತೂಹಲ ಹೊಂದಿರುವರು. ದೇವಕುಮಾರನ ಮಾಂಸವನ್ನು ತಿಂದು ಆತನ ರಕ್ತವನ್ನು ಕುಡಿಯುವುದು ಅವರ ಮಹಾ ಬಯಕೆಯಾಗಿರುವುದು. ಇದರ ಪರಿಣಾಮವಾಗಿ ಅವರ ಜೀವನವು ದೇವರ ವಾಕ್ಯದ ಸಿದ್ಧಾಂತಗಳಿಗೂ ಹಾಗೂ ಅದರಲ್ಲಿರುವ ವಾಗ್ದಾನಗಳಿಗೂ ಅನುಗುಣವಾಗಿರುವುದು. ಅಲ್ಲಿರುವ ಬುದ್ಧಿವಾದಗಳು ಮತ್ತು ಸಲಹಾಸೂಚನೆಗಳು ಅವರಿಗೆ ಜೀವವೃಕ್ಷದ ಎಲೆಗಳಂತಿರುವುದು. ದೇವರ ವಾಕ್ಯ ಅಂಗೀಕರಿಸಿ, ಅದಕ್ಕೆ ವಿಧೇಯರಾಗಿರುವವರಿಗೆ ಅದು ಬಾವಿಯಲ್ಲಿ ಉಕ್ಕುವ ಒರತೆಯೂ ನಿತ್ಯಜೀವಕ್ಕೆ ನಡೆಸುವ ಜೀವಜಲವೂ ಆಗಿರುವುದು. ಮನಸ್ಸನ್ನು ಮುದಗೊಳಿಸುವ ಕೃಪೆಯೆಂಬ ಜಲಧಾರೆಯು ಅವರ ಮನಸ್ಸು, ದೇಹವನ್ನು ಉಲ್ಲಾಸಗೊಳಿಸಿ ನವಚೈತನ್ಯ ನೀಡುವುದು. ಇದರಿಂದ ಅವರು ತಮ್ಮೆಲ್ಲಾ ಶ್ರಮೆ ಹಾಗೂ ದಣಿವನ್ನು ಮರೆಯುವರು. ಅವರು ದೈವಪ್ರೇರಿತವಾದ ಮಾತುಗಳಿಂದ ಬಲಗೊಳ್ಳುವರು ಹಾಗೂ ಸ್ಫೂರ್ತಿ ಹೊಂದುವರು. KanCCh 74.2
ವಿವಿಧ ರೀತಿಯ ವಿಶಾಲವಾದ ಶೈಲಿ ಹಾಗೂ ವಿಷಯಗಳನ್ನೊಳಗೊಂಡ ಸತ್ಯವೇದವು ಪ್ರತಿಯೊಬ್ಬರ ಮನಸ್ಸಿನಲ್ಲಿ ಆಸಕ್ತಿಹುಟ್ಟಿಸುವ ಮತ್ತು ಎಲ್ಲರ ಹೃದಯಗಳಿಗೆ ವಿನಂತಿಸಿಕೊಳ್ಳುವ ಶಕ್ತಿಹೊಂದಿದೆ. ಸತ್ಯವೇದದಲ್ಲಿ ಅತ್ಯಂತ ಪುರಾತನವಾದ ಚರಿತ್ರೆಯಿದೆ, ಸತ್ಯವಾದ ಜೀವನಚರಿತ್ರೆಯಿದೆ; ದೇಶವನ್ನೂ ನಿಯಂತ್ರಿಸುವಂತ ಸರ್ಕಾರದ ನಿಯಮಗಳಿವೆ; ಕುಟುಂಬವನ್ನು ನಿಯಂತ್ರಿಸುವಂತ ಸಿದ್ಧಾಂತಗಳಿವೆ. ಇವುಗಳನ್ನು ಮಾನವ ಬುದ್ಧಿಯು ಎಂದೂ ಸಹ ಸರಿಗಟ್ಟಲಾರದು. ಸತ್ಯವೇದದಲ್ಲಿ ಅತ್ಯಂತ ಗಂಭೀರವಾದ ತತ್ವಜ್ಞಾನವಿದೆ; ಅತ್ಯಂತ ಮಧುರವಾದ ಹಾಗೂ ಸರ್ವೋನ್ನತವಾದ, ಭಾವಪೂರ್ಣವೂ ಕರುಣಾಜನಕವೂ ಆದ ಕಾವ್ಯವಿದೆ. ಸತ್ಯವೇದದ ಲೇಖನಗಳು ಬೇರೆ ಯಾರೇ ಮಾನವಲೇಖಕನ ಬರವಣಿಗೆಗಿಂತಲೂ ಹೋಲಿಕೆ ಮಾಡಲಾರದಷ್ಟು ಅತ್ಯುನ್ನತವಾಗಿವೆ. ಈ ಚಿಂತನೆಯ ಬೆಳಕಿನಲ್ಲಿ ದೇವರ ವಾಕ್ಯವನ್ನು ಪರಿಗಣಿಸಿ, ಉತ್ಕೃಷ್ಟ ಆಲೋಚನೆಗೆ ಸಂಬಂಧಪಟ್ಟಂತೆ ಇವುಗಳನ್ನು ಗಮನಿಸಿ ಇತರ ಲೇಖಕರ ಪುಸ್ತಕಗಳೊಡನೆ ಹೋಲಿಸಿದಾಗ, ಇವು ಅನಂತವೂ ಅಪರಿಮಿತವೂ ಆದ ಅತ್ಯುತ್ಕೃಷ್ಟ ಮೌಲ್ಯ ಹೊಂದಿವೆ. ಈ ಚಿಂತನೆಯ ಬೆಳಕಿನಲ್ಲಿ ನೋಡಿದಾಗ, ದೇವರ ವಾಕ್ಯದ ಪ್ರತಿಯೊಂದು ವಿಷಯವೂ ಹೊಸದಾದ ಪ್ರಾಮುಖ್ಯತೆ ಹೊಂದಿದೆ. ಅತ್ಯಂತ ಸಾಧಾರಣವಾಗಿ ತಿಳಿಸಲ್ಪಟ್ಟ ಸತ್ಯಗಳಲ್ಲಿ, ಸಮಸ್ತವನ್ನೇ ಆವರಿಸಿಕೊಂಡಿರುವ ಹಾಗೂ ಪರಲೋಕದಷ್ಟು ಉನ್ನತವಾಗಿರುವ ಸಿದ್ಧಾಂತಗಳು ಕಂಡುಬರುತ್ತವೆ. KanCCh 74.3
ಪ್ರತಿದಿನವೂ ಸಹ ನಾವು ಸತ್ಯವೇದದಿಂದ ಹೊಸದಾದ ಯಾವುದಾದರೊಂದನ್ನು ಕಲಿಯಬೇಕು. ದೇವರವಾಕ್ಯದಲ್ಲಿ ನಿತ್ಯಜೀವದ ಮಾತುಗಳು ಇರುವುದರಿಂದ, ಅದನ್ನು ಬಚ್ಚಿಟ್ಟ ನಿಧಿಯಂತೆ ಎಚ್ಚರಿಕೆಯಿಂದ ಹುಡುಕಬೇಕು. ಪರಿಶುದ್ಧವಾದ ಸತ್ಯವೇದದವಾಕ್ಯಗಳನ್ನು ಗ್ರಹಿಸಿಕೊಳ್ಳಲು ಸಾಧ್ಯವಾಗುವಂತೆ, ಜ್ಞಾನವಿವೇಕಕ್ಕಾಗಿ ಪ್ರಾರ್ಥಿಸಬೇಕು. ಇದನ್ನು ನೀವು ಮಾಡಿದಲ್ಲಿ, ದೇವರ ವಾಕ್ಯದಲ್ಲಿ ಹೊಸದಾದ ಮಹಿಮೆಯು ನಿಮಗೆ ಕಂಡುಬರುವುದು. ಸತ್ಯಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ನಿಮಗೆ ಹೊಸದಾದ ಅಮೂಲ್ಯಬೆಳಕು ದೊರಕಿದ ಭಾವನೆ ನಿಮಗಾಗುವುದು. KanCCh 75.1
ಬೈಬಲ್ಲಿನ ಸತ್ಯಗಳನ್ನು ಅಂಗೀಕರಿಸಿಕೊಂಡಾಗ, ನಮ್ಮ ಲೌಕಿಕವಾದ ಮತ್ತು ನೀಚವಾದ ಸಂಗತಿಗಳನ್ನು ಬಿಟ್ಟು ನಮ್ಮ ಮನಸ್ಸು ಉನ್ನತಸ್ಥಾನಕ್ಕೇರುವುದು. ದೇವರ ವಾಕ್ಯವಾದ ಸತ್ಯವೇದವನ್ನು ಯೋಗ್ಯವಾದ ರೀತಿಯಲ್ಲಿ ಗೌರವಿಸಿದಾಗ, ದೊಡ್ಡವರು, ಚಿಕ್ಕವರೆಲ್ಲರೂ ಶೋಧನೆಯನ್ನು ಎದುರಿಸಲು ಬೇಕಾದ ಉತ್ತಮ ಗುಣನಡತೆ, ಸಿದ್ಧಾಂತದಬಲ ಮುಂತಾದವು ದೊರೆಯುವುದು. KanCCh 75.2