ಶ್ರೀಮತಿ ವೈಟಮ್ಮನವರು ಒಂದು ಕನಸಿನಲ್ಲಿ ಜನರ ಗುಂಪನ್ನು ಕಂಡರು. ಆ ಜನರು ಶ್ರೀಮತಿ ವೈಟಮ್ಮನವರು ಕೊಟ್ಟ ಅತ್ಯಂತ ಗಂಭೀರವಾದ ಎಚ್ಚರಿಕೆಯ ಪ್ರಭಾವವನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದ್ದರು. “ನಾವು ಸಹೋದರಿ ವೈಟಮ್ಮನವರ ಪವಿತ್ರಾತ್ಮ ಪ್ರೇರಿತ ಸಾಕ್ಷಿಗಳನ್ನು ನಂಬುತ್ತೇವೆ. ಆದರೆ ಕೆಲವೊಂದು ಪ್ರಕರಣಗಳಲ್ಲಿ ಅವರು ಯಾವುದೇ ದೇವದರ್ಶನದಲ್ಲಿ ಕಾಣದಿರುವಂತ ವಿಷಯಗಳನ್ನು ತಿಳಿಸಿದಾಗ, ಅವುಗಳಿಗೆ ಅಷ್ಟೊಂದು ಮಹತ್ವವಿಲ್ಲ. ಅವು ಯಾವುದೇ ವ್ಯಕ್ತಿ ಮಾತಾಡಿದಂತ ವಾಕ್ಯಗಳೇ ಹೊರತು ಪವಿತ್ರಾತ್ಮ ಪ್ರೇರಿತವಲ್ಲ” ಎಂದು ಆ ಗುಂಪಿನ ಜನರು ಮಾತಾಡಿಕೊಳ್ಳುತ್ತಿದ್ದರು. ಆಗ ಶ್ರೀಮತಿ ವೈಟಮ್ಮನವರು ಪವಿತ್ರಾತ್ಮ ಪ್ರೇರಿತರಾಗಿ ಎದ್ದುನಿಂತು ಕರ್ತನ ಹೆಸರಿನಲ್ಲಿ ಅಂತಹ ಮಾತುಗಳನ್ನಾಡುತ್ತಿದ್ದವರನ್ನು ಗದರಿಸಿದರು. KanCCh 89.4
ಶ್ರೀಮತಿ ವೈಟಮ್ಮನವರಿಂದ ಇಂತಹ ಗಂಭೀರ ಎಚ್ಚರಿಕೆ ಪಡೆದುಕೊಂಡವರು “ಇದು ಸಹೋದರಿ ವೈಟಮ್ಮನವರ ವೈಯಕ್ತಿಕ ಅಭಿಪ್ರಾಯ, ಆದ್ದರಿಂದ ನಾವು ನಮ್ಮದೇ ಆದ ತೀರ್ಮಾನದಂತೆ ನಡೆಯುತ್ತೇವೆ” ಎಂದು ಹೇಳಿ, ಅದೇ ಪಾಪದಲ್ಲಿ ನಡೆಯುತ್ತಿದ್ದಲ್ಲಿ, ದೇವರ ಸಲಹೆಗಳನ್ನು ಅವರು ಧಿಕ್ಕರಿಸುತ್ತಾರೆ. ಇದರ ಪರಿಣಾಮವಾಗಿ ಅವರು ದೇವರಸೇವೆಗೆ ಅಡ್ಡಿಯಾಗುವುದಲ್ಲದೆ, ನಾಶವಾಗುತ್ತಾರೆಂದು ಶ್ರೀಮತಿ ವೈಟಮ್ಮನವರಿಗೆ ದರ್ಶನದಲ್ಲಿ ತಿಳಿದುಬಂತು. ಕೆಲವರು ತಮ್ಮ ಅಭಿಪ್ರಾಯಗಳನ್ನು ಸಮರ್ಥಿಸಿಕೊಳ್ಳಲು ಇಚ್ಛಿಸುವಾಗ, ಪ್ರವಾದನಾ ಆತ್ಮ ಪ್ರೇರಿತ ಬರಹಗಳನ್ನು ಬಲವಾಗಿ ಉದಾಹರಿಸುತ್ತಾರೆ. ಆದರೆ ಅವರ ಅಭಿಪ್ರಾಯಗಳಿಗೆ ವಿರುದ್ಧವಾದ ಅಥವಾ ಅವರ ನಡೆನುಡಿಗಳನ್ನು ಪ್ರಶ್ನಿಸುವಂತ ಹೇಳಿಕೆಗಳು ಬಂದಾಗ, ಇವು ಶ್ರೀಮತಿ ವೈಟಮ್ಮನವರ ವೈಯಕ್ತಿಕ ಅಭಿಪ್ರಾಯವೇ ಹೊರತು, ಪರಲೋಕದಿಂದ ಬಂದದ್ದಲ್ಲವೆಂದು ಹೇಳುತ್ತಾರೆ. KanCCh 90.1
ಅಂತಹ ಸಹೋದರರಿಗೆ ಶ್ರೀಮತಿ ವೈಟಮ್ಮನವರು ತಮ್ಮ ಮತ್ತು ಜನರ ನಡುವೆ ತಲೆಹಾಕಬಾರದೆಂದೂ ಮತ್ತು ದೇವರು ಜನರಿಗೆ ಕೊಡುವ ದೈವೀಕ ಬೆಳಕನ್ನು ದೂರಮಾಡಬಾರದೆಂದು ವಿನಂತಿಸಿಕೊಂಡಿದ್ದರು. ಶ್ರೀಮತಿ ವೈಟಮ್ಮನವರ ಪುಸ್ತಕಗಳನ್ನು ಖಂಡಿಸುವುದರ ಮೂಲಕ ಅವುಗಳಲ್ಲಿರುವ ಶಕ್ತಿ, ಸಾಮಥ್ರ್ಯ ಮತ್ತು ಪ್ರಮುಖ ವಿಷಯಗಳನ್ನು ತೆಗೆದುಹಾಕಬಾರದು. ನಮಗೆ ಅನುಕೂಲವಾಗುವ ರೀತಿಯಲ್ಲಿ ಅವರ ಬರಹಗಳನ್ನು ವಿರೂಪಗೊಳಿಸಿ, ಪರಲೋಕದಿಂದ ಬಂದ ಬೆಳಕು ಯಾವುದು ಮತ್ತು ಮನುಷ್ಯ ಜ್ಞಾನದಿಂದ ವ್ಯಕ್ತವಾದ ಆಲೋಚನೆಗಳು ಯಾವುದು ಎಂಬುದನ್ನು ಗ್ರಹಿಸುವ ಸಾಮಥ್ರ್ಯ ನಮಗಿದೆ ಎಂದು ನಾವು ಹೇಳಿಕೊಳ್ಳಬಾರದು. ಶ್ರೀಮತಿ ವೈಟಮ್ಮನವರ ಪುಸ್ತಕಗಳು ದೇವರವಾಕ್ಯಕ್ಕೆ ಅನುಗುಣವಾಗಿಲ್ಲದಿದ್ದಲ್ಲಿ, ಅವುಗಳನ್ನು ತಿರಸ್ಕರಿಸಿ. ಕ್ರಿಸ್ತನು ಮತ್ತು ಸೈತಾನನು ಎಂದಿಗೂ ಸಹ ಒಟ್ಟಾಗಲು ಸಾಧ್ಯವಿಲ್ಲ. ದೇವರ ನಿಮಿತ್ತ ಯಾರೂ ಸಹ ಮನುಷ್ಯ ಕಲ್ಪಿತ ಕುತರ್ಕ ಸಂದೇಹಗಳಿಂದ ಜನರ ಮನಸ್ಸನ್ನು ಗಲಿಬಿಲಿಗೊಳಿಸಬಾರದು. ನಿಮಗಿರುವ ಆತ್ಮೀಕ ಜ್ಞಾನದ ಕೊರತೆಯ ಕಾರಣದಿಂದ, ದೇವರು ಪವಿತ್ರಾತ್ಮನ ಮೂಲಕ ಕೊಟ್ಟಿರುವ ಶ್ರೀಮತಿ ವೈಟಮ್ಮನವರ ಪ್ರವಾದನಾ ಆತ್ಮನ ಪುಸ್ತಕಗಳನ್ನು ಒಂದು ಅಡ್ಡಗಲ್ಲಾಗಿ ಮಾಡಿ ಅನೇಕರು ಎಡವಿ ಬೀಳುವಂತೆ ಮಾಡಬಾರದು. KanCCh 90.2