Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  ಉಳಿದ ಸಭೆ

  ಜೆಕರ್ಯನು ನೋಡಿದ ಮಹಾಯಾಜಕ ಯೆಹೋಶುವನು ಮತ್ತು ದೂತನ ದರ್ಶನವು ಮಹಾದೋಷಪರಿಹಾರಕ ದಿನದ ಮುಕ್ತಾಯದ ಸಮಯದಲ್ಲಿ ದೇವರ ಮಕ್ಕಳು ಎದುರಿಸುವ ಅನುಭವಕ್ಕೆ ಅನ್ವಯವಾಗುತ್ತದೆ. ಉಳಿದ ಸಭೆಯು ಮಹಾಶೋಧನೆ ಮತ್ತು ಸಂಕಟ ಅನುಭವಿಸುವುದು. ದೇವರಾಜ್ಞೆಗಳನ್ನು ಕೈಕೊಂಡು ಯೇಸುವಿನಲ್ಲಿ ನಂಬಿಕೆ ಇಡುವವರು ಘಟಸರ್ಪನಾದ ಸೈತಾನನು ಹಾಗೂ ಅವನ ದುಷ್ಟದೂತರ ಕೋಪಕ್ಕೆ ಗುರಿಯಾಗುವರು. ಈ ಲೋಕದ ಜನರು ತನ್ನ ಪ್ರಜೆಗಳೆಂದು ಸೈತಾನನು ಎಣಿಸುತ್ತಾನೆ, ಧರ್ಮಭ್ರಷ್ಟರಾದ ಪ್ರೊಟೆಸ್ಟೆಂಟ್ ಸಭೆಗಳ ಮೇಲೆ ಅವನು ತನ್ನ ನಿಯಂತ್ರಣ ಹೊಂದಿದ್ದಾನೆ. ಆದರೆ ದೇವರಾಜ್ಞೆಗಳನ್ನು ಕೈಕೊಂಡು, ಯೇಸುವಿನ ವಿಷಯವಾದ ಸಾಕ್ಷಿ ಅಂದರೆ ಪ್ರವಾದನಾಆತ್ಮ ಹೊಂದಿರುವ ಚಿಕ್ಕ ಗುಂಪಾದ ಉಳಿದ ಸಭೆಯವರು ಅವನ ಅಧಿಕಾರಕ್ಕೆ ಪ್ರತಿಭಟನೆ ವ್ಯಕ್ತಪಡಿಸುತ್ತಾರೆ. ಇವರನ್ನು ಈ ಲೋಕದಿಂದ ನಿರ್ಮೂಲ ಮಾಡಿದಲ್ಲಿ, ಅವನ ಜಯವು ಪೂರ್ಣವಾಗುತ್ತದೆ. ಹಿಂದೆ ಸೈತಾನನು ಅನ್ಯ ಜನಾಂಗಗಳ ಮೂಲಕ ಇಸ್ರಾಯೇಲ್ಯರನ್ನು ನಾಶಮಾಡಲು ಹೇಗೆ ಪ್ರೇರಿಸಿದನೋ, ಅದೇರೀತಿಯಲ್ಲಿ ಇನ್ನೇನು ಸ್ವಲ್ಪ ಸಮಯದಲ್ಲಿ ಅವನು ಲೋಕದ ದುಷ್ಟಶಕ್ತಿಗಳು ದೇವರಮಕ್ಕಳನ್ನು ನಾಶಮಾಡುವಂತೆ ಪ್ರೇರಿಸುವನು. ಎಲ್ಲರೂ ಸಹ ದೇವರಾಜ್ಞೆಗಳನ್ನು ಉಲ್ಲಂಘಿಸಿ ಮಾನವನು ಮಾಡುವ ಶಾಸನಗಳಿಗೆ ವಿಧೇಯರಾಗಬೇಕೆಂಬ ಕಾನೂನು ಶೀಘ್ರದಲ್ಲಿಯೇ ಬರಲಿದೆ. ಯಾರು ದೇವರಿಗೆ ಸತ್ಯವಂತರಾಗಿ ನಡೆದು ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಾರೋ ಅಂತವರಿಗೆ ಬೆದರಿಕೆ ಹಾಗೂ ಉಗ್ರವಾದ ಖಂಡನೆ ಉಂಟಾಗುವುದು. ಅಲ್ಲದೆ ಅವರು ಗಡಿಪಾರಾಗಿ ದೇಶಭ್ರಷ್ಟರಾಗುವರು. ಅವರು ತಂದೆತಾಯಿಯರು, ಸಹೋದರರು, ರಕ್ತಸಂಬಂಧಿಗಳು ಹಾಗೂ ಸ್ನೇಹಿತರಿಂದ ದ್ರೋಹಕ್ಕೊಳಗಾಗಿ ಹಿಡಿದುಕೊಡಲ್ಪಡುವರು. KanCCh 456.1

  ದೇವರ ಕರುಣೆಯು ಮಾತ್ರ ಅವರ ಏಕೈಕ ನಿರೀಕ್ಷೆ ಹಾಗೂ ಪ್ರಾರ್ಥನೆಯು ಮಾತ್ರ ಅವರ ಏಕೈಕ ರಕ್ಷಣೆಯಾಗಿದೆ. ದೇವದೂತನ ಮುಂದೆ ಯೆಹೋಶುವನು ಹೇಗೆ ಬೇಡಿಕೊಂಡನೋ, ಅದೇ ರೀತಿಯಲ್ಲಿ ಉಳಿದಸಭೆ ಅಂದರೆ ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆಯು ಕುಗ್ಗಿಹೋದ ಹೃದಯದಿಂದಲೂ ಹಾಗೂ ಪ್ರಾಮಾಣಿಕವಾದ ನಂಬಿಕೆಯಿಂದಲೂ, ತಮ್ಮ ವಕೀಲನೂ ಮಧ್ಯಸ್ಥಗಾರನೂ ಆದ ಕ್ರಿಸ್ತನ ಮೂಲಕ ಕ್ಷಮೆ ಹಾಗೂ ಬಿಡುಗಡೆಗಾಗಿ ದೈನ್ಯದಿಂದ ಬೇಡಿಕೊಳ್ಳುವುದು. ತಮ್ಮ ಪಾಪಮಯ ಜೀವಿತದ ಬಗ್ಗೆ ಅವರು ಸಂಪೂರ್ಣವಾಗಿ ತಿಳಿದುಕೊಂಡಿದ್ದಾರೆ ಹಾಗೂ ತಮ್ಮ ಬಲಹೀನತೆ ಮತ್ತು ಅಯೋಗ್ಯತನದ ಅರಿವು ಅವರಿಗಿದೆ. ಶೋಧಕನಾದ ಸೈತಾನನು ಯೆಹೋಶುವನ ಬಳಿಯಲ್ಲಿ ನಿಂತು ಅವರ ಮೇಲೆ ದೂರುಹೊರಿಸಿದಂತೆ ದೇವರಮಕ್ಕಳ ಮೇಲೆಯೂ ಅವನು ಆಪಾದನೆ ಹೊರಿಸುತ್ತಾನೆ. ಅವರ ಕೊಳೆಯಾದಬಟ್ಟೆ ಮತ್ತು ಅವರ ದೋಷಪೂರಿತ ಗುಣಗಳನ್ನು ಅವರ ಗಮನಕ್ಕೆ ಸೈತಾನನು ತರುತ್ತಾನೆ. ಅವರು ತಮ್ಮ ವಿಮೋಚಕನಿಗೆ ಅಗೌರವ ತಂದಿದ್ದಾರೆಂದು ಅವರ ಬಲಹೀನತೆ, ಮೂರ್ಖತನ, ಪಾಪಗಳು- ಇವೆಲ್ಲವುಗಳನ್ನು ದೇವರಮುಂದೆ ಹೇಳುತ್ತಾನೆ. ನಿಮಗೆ ಯಾವುದೇ ನಿರೀಕ್ಷೆಯಿಲ್ಲ. ನಿಮ್ಮ ಪಾಪದೋಷದ ಕಳಂಕತೆಯನ್ನು ಎಂದಿಗೂ ತೊಳೆದು ಶುದ್ಧಪಡಿಸಲಾಗದೆಂದು ಹೇಳಿ ದೇವರಮಕ್ಕಳನ್ನು ಭಯಪಡಿಸಲು ಅವನು ಪ್ರಯತ್ನಿಸುತ್ತಾನೆ. ಅವರ ನಂಬಿಕೆಯನ್ನು ನಾಶಮಾಡಿ, ಅವರನ್ನು ಶೋಧನೆಗೆ ಒಳಪಡಿಸಿ ಅವರು ದೇವರ ಮೇಲಿನ ನಂಬಿಕೆ, ನಿಷ್ಠೆಯನ್ನು ಬಿಟ್ಟು ಮೃಗದ ಗುರುತು ಹೊಂದುವಂತೆ ಮಾಡಲು ಸೈತಾನನು ಪ್ರಯತ್ನಿಸುತ್ತಾನೆ. ಅವನು ದೇವರ ಮುಂದೆ ಜನರ ವಿರುದ್ಧವಾಗಿ ಆಪಾದನೆ ಹೊರಿಸಿ, ಅವರು ಪಾಪ ಮಾಡಿ ದೈವೀಕರಕ್ಷಣೆ ಕಳೆದುಕೊಂಡಿರುವುದರಿಂದ, ಆಜ್ಞೆಗಳನ್ನು ಉಲ್ಲಂಘಿಸಿದ ಅವರನ್ನು ನಾಶಮಾಡುವುದು ತನ್ನ ಹಕ್ಕೆಂದು ಹೇಳಿಕೊಳ್ಳುತ್ತಾನೆ. ತನ್ನಂತೆಯೇ ಅವರೂ ಸಹ ದೇವರ ದಯೆಯನ್ನು ಕಳೆದು ಕೊಂಡಿದ್ದಾರೆ. “ಈ ಜನರು ಪರಲೋಕದಲ್ಲಿ ನನ್ನ ಸ್ಥಾನ ಹಾಗೂ ನನ್ನೊಂದಿಗೆ ಸೇರಿದ ನನ್ನ ದೂತರ ಸ್ಥಾನ ತೆಗೆದುಕೊಳ್ಳುವವರಲ್ಲವೇ? ದೇವರಾಜ್ಞೆಗಳನ್ನು ಅನುಸರಿಸಿ ನಡೆಯುತ್ತೇವೆಂದು ಹೇಳಿಕೊಳ್ಳುವ ಇವರು ಅವುಗಳ ನೈತಿಕ ಬೋಧೆಗಳನ್ನು ಕೈಕೊಂಡಿದ್ದಾರೆಯೇ? ಇವರು ದೇವರಿಗಿಂತ ತಮ್ಮನ್ನೇ ಹೆಚ್ಚಾಗಿ ಪ್ರೀತಿಸಿಕೊಳ್ಳಲಿಲ್ಲವೇ? ನಿನ್ನ ಸೇವೆಗಿಂತ ತಮ್ಮ ಸ್ವಾರ್ಥಕ್ಕೆ ಗಮನ ಕೊಡಲಿಲ್ಲವೇ? ಇವರು ಲೋಕವನ್ನು ಅದರಲ್ಲಿರುವುಗಳನ್ನು ಪ್ರೀತಿಸಲಿಲ್ಲವೇ? ಅವರ ಸ್ವಾರ್ಥ, ಅಸೂಯೆ, ಪರಸ್ಪರ ದ್ವೇಷ ನೋಡು” ಎಂದು ಸೈತಾನನ ದೇವರ ಮುಂದೆ ನಮಗೆ ವಿರುದ್ಧವಾಗಿ ತಪ್ಪುಹೊರಿಸಿ ದೂರುಹೇಳುತ್ತಾನೆ. KanCCh 456.2

  ದೇವಜನರು ಅನೇಕ ವಿಧವಾಗಿ ಬಹಳ ದೋಷವುಳ್ಳವರಾಗಿದ್ದಾರೆ. ತನ್ನ ಶೋಧನೆಯ ನಿಮಿತ್ತ ಅವರುಮಾಡಿದ ಪಾಪಗಳ ಖಚಿತವಾದ ಜ್ಞಾನವು ಸೈತಾನನಿಗಿದೆ. ಇವುಗಳನ್ನು ಬಹಳ ಉತ್ಪ್ರೇಕ್ಷೆ ಮಾಡುತ್ತಾ “ದೇವರು ನನ್ನನ್ನು ಹಾಗೂ ನನ್ನದೂತರನ್ನು ಪರಲೋಕದಿಂದ ದೊಬ್ಬಿದನು. ಆದರೆ ಅದೇ ಪಾಪಗಳನ್ನು ಮಾಡಿ ದೋಷಿಗಳಾಗಿರುವ ಮಾನವರಿಗೆ ಒಳ್ಳೆಯ ಪ್ರತಿಫಲ ಕೊಡುತ್ತಾನೆ. ಓ ದೇವರೇ, ನ್ಯಾಯವಂತನಾದ ನೀನು ಈ ಅನ್ಯಾಯ ಮಾಡಬಾರದು. ನಿನ್ನ ಸಿಂಹಾಸನವು ನೀತಿ ಹಾಗೂ ನ್ಯಾಯತೀರ್ಪಿನ ಮೇಲೆ ಆಧಾರಗೊಂಡಿಲ್ಲ. ಅವರಿಗೆ ವಿರುದ್ಧವಾಗಿ ಶಿಕ್ಷೆ ಪ್ರಕಟಿಸಬೇಕೆಂದು ನ್ಯಾಯವು ಒತ್ತಾಯಿಸುತ್ತದೆ” ಎಂದು ದೇವರಿಗೆ ಹೇಳುತ್ತಾನೆ.KanCCh 457.1

  ಕ್ರಿಸ್ತನ ಅನುಯಾಯಿಗಳು ಪಾಪಮಾಡಿದಾಗ್ಯೂ ದುಷ್ಟತನಕ್ಕೆ ತಮ್ಮನ್ನು ಒಪ್ಪಿಸಿಕೊಟ್ಟಿಲ್ಲ. ಅವರು ತಮ್ಮ ಪಾಪಗಳನ್ನು ತೆಗೆದುಹಾಕಿದ್ದಾರೆ ಹಾಗೂ ನಮ್ರತೆ ಮತ್ತು ಪಶ್ಚಾತ್ತಾಪದ ಹೃದಯದಿಂದ ದೈವೀಕ ಮಧ್ಯಸ್ಥಗಾರನಾದ ಕ್ರಿಸ್ತನು ತಮ್ಮ ಪರವಾಗಿ ವಾದ ಮಾಡುವಂತೆ ದೇವರ ಕೃಪೆಗಾಗಿ ಬೇಡಿಕೊಂಡಿದ್ದಾರೆ. ಆದರೆ ತನ್ನ ಜನರ ಪಾಪಗಳು ಹಾಗೂ ಅದಕ್ಕಾಗಿ ಅವರು ಪಟ್ಟ ಪಶ್ಚಾತ್ತಾಪವನ್ನು ಬಲ್ಲಾತನಾದ ಕ್ರಿಸ್ತನು ಸೈತಾನನಿಗೆ “ಯೆಹೋವನು ನಿನ್ನನ್ನು ಖಂಡಿಸಲಿ, ಇವರಿಗೆ ನಾನು ನನ್ನ ಪ್ರಾಣಕೊಟ್ಟಿದ್ದಾನೆ. ಅವರನ್ನು ನನ್ನ ಅಂಗೈಯಲ್ಲಿ ಚಿತ್ರಿಸಿಕೊಂಡಿದ್ದೇನೆ” ಎಂದು ಹೇಳುತ್ತಾನೆ.KanCCh 458.1