ಅಧ್ಯಾಯ-7 — ಇಗೋ ನಾನಿದ್ದೇನೆ, ನನ್ನನ್ನು ಕಳುಹಿಸು
ಕಳ್ಳನು ರಾತ್ರಿಯಲ್ಲಿ ಸದ್ದುಮಾಡದೆ ಬರುವಂತೆ, ಈ ಲೋಕವೂ ಸಹ ರಹಸ್ಯವಾಗಿ ಕಣ್ಣಿಗೆಕಾಣದಷ್ಟು ಸೂಕ್ಷ್ಮವಾಗಿ ಅಂತ್ಯವಾಗುತ್ತದೆ. ಇತರರಂತೆ ನಾವು ನಿದ್ರಿಸದೆ, ಯಾವಾಗಲೂ ಎಚ್ಚರವಾಗಿರುವಂತೆ ದೇವರು ನಮ್ಮನ್ನು ಆಶೀರ್ವದಿಸಲಿ. ಸತ್ಯವು ಶೀಘ್ರದಲ್ಲಿಯೇ ವೈಭವದಿಂದ ಜಯಗಳಿಸುತ್ತದೆ ಹಾಗೂ ದೇವರೊಂದಿಗೆ ಜೊತೆ ಕೆಲಸಗಾರರಾಗಿರುವವರು ಅದರೊಂದಿಗೆ ವಿಜಯ ಹೊಂದುತ್ತಾರೆ. ಸಮಯವು ಅತಿ ಸಮೀಪವಾಗಿದೆ; ಕತ್ತಲೆಯು ಶೀಘ್ರದಲ್ಲಿಯೇ ಬರುತ್ತದೆ. ಆಗ ಯಾರೂ ಸಹ ಕೆಲಸ ಮಾಡಲಾಗದು. ವರ್ತಮಾನದ ಸತ್ಯದ ಬೆಳಕಿನಲ್ಲಿ ಈಗ ಸಂತೋಷಿಸುವವರು, ಈ ಸತ್ಯವನ್ನು ಇತರರಿಗೆ ತ್ವರೆಯಿಂದ ತಿಳಿಸಬೇಕು. “ನಾನು ಯಾರನ್ನು ಕಳುಹಿಸಲಿ?” ಎಂದು ಕರ್ತನು ಕೇಳುತ್ತಾನೆ. ಸತ್ಯಕ್ಕಾಗಿ ತ್ಯಾಗಮಾಡಲು ಬಯಸುವವರು “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದು ಉತ್ತರಿಸಬೇಕು (ಯೆಶಾಯ 6:8).KanCCh 41.1
ನಮ್ಮ ನೆರೆಯವರು ಮತ್ತು ಸ್ನೇಹಿತರಿಗೆ ಅಲ್ಪ ಪ್ರಮಾಣದಲ್ಲಿ ಮಾತ್ರ ಸುವಾರ್ತಾಸೇವೆ ಮಾಡಿದ್ದೇವೆ. ನಮ್ಮ ದೇಶದ ಪ್ರತಿಯೊಂದು ಹಳ್ಳಿ, ಪಟ್ಟಣ, ನಗರಗಳಲ್ಲಿ ಕ್ರಿಸ್ತನ ಸತ್ಯದ ಬಗ್ಗೆ ತಿಳಿಯದಿರುವ ಅಸಂಖ್ಯಾತ ಜನರಿದ್ದಾರೆ. ಅಲ್ಲದೆ ಇತರ ದೇಶಗಳಲ್ಲಿಯೂ ಸುವಾರ್ತೆ ಎಂಬ ಬೀಜವನ್ನುಬಿತ್ತಲು ನೆಲ ಹದ ಮಾಡಬೇಕಾಗಿದೆ.KanCCh 41.2
ಸಂಕಟದ ಸಮಯ ಹಾಗೂ ಕನಸಿನಲ್ಲಿಯೂ ಕಾಣದಿರುವಂತ ಹಿಂಸೆಯ ಸಮಯವು ಇನ್ನೇನು ಹತ್ತಿರದಲ್ಲಿದೆ. ದೇವರ ವಿರುದ್ಧ ಹೋರಾಟ ಮಾಡುವಂತೆ ಸೈತಾನನು ಜನರನ್ನು ಪ್ರೇರಿಸಿ ಮುನ್ನಡೆಸುತ್ತಿದ್ದಾನೆ. ಮಾನವರು ಸೈತಾನನ ಶಕ್ತಿಗಳೊಂದಿಗೆ ಸೇರಿ ದೇವರ ಆಜ್ಞೆಗಳನ್ನು ನಿರರ್ಥಕಪಡಿಸಲು ಪ್ರಯತ್ನಿಸುತ್ತಿದ್ದಾರೆ. ಲೋಕದ ನಿವಾಸಿಗಳು ಜಲಪ್ರಳಯದಿಂದ ನೋಹನ ಕಾಲದಲ್ಲಿ ನಾಶವಾದವರಂತೆಯೂ ಹಾಗೂ ಬೆಂಕಿ ಗಂಧಕಗಳಿಂದ ಸುಟ್ಟು ಹೋದಂತ ಸೊದೋಮ್, ಗೊಮೋರ ಪಟ್ಟಣಗಳ ಜನರಂತೆ ಅತಿ ದುಷ್ಟರಾಗುತ್ತಿದ್ದಾರೆ. ಸೈತಾನನ ಶಕ್ತಿಗಳು ಜನರ ಮನಸ್ಸನ್ನು ಪರಲೋಕ ಕಡೆಯಿಂದ ಈ ಪ್ರಾಪಂಚಿಕ ಲೋಕದ ಆಕರ್ಷಣೆಯ ಬಲೆಗೆ ತಿರುಗಿಸುತ್ತಿದ್ದಾರೆ. ವೈರಿಯಾದ ಸೈತಾನನು ತನ್ನ ಉದ್ದೇಶಕ್ಕೆ ಪೂರಕವಾದಂತ ರೀತಿಯಲ್ಲಿ ಜಗತ್ತಿನ ಆಗುಹೋಗುಗಳನ್ನು ವ್ಯವಸ್ಥೆಗೊಳಿಸುತ್ತಿದ್ದಾನೆ. ಇಂದಿನ ಫ್ಯಾಷನ್ ಅಂದರೆ ಬಳಕೆಯಲ್ಲಿರುವ ಪದ್ಧತಿಗಳಾದ ವ್ಯಾಪಾರ, ವ್ಯವಹಾರ, ಉದ್ದಿಮೆ, ಲೌಕಿಕ ವಿಷಯಗಳು, ಕ್ರೀಡೆ- ಮುಂತಾದವುಗಳಲ್ಲಿ ಸ್ತ್ರೀ ಪುರುಷರು ಮುಳುಗಿ ಹೋಗಿದ್ದಾರೆ. ಅಶ್ಲೀಲ ಪುಸ್ತಕಗಳು, ಸಿನಿಮಾ, ಟಿ.ವಿ., ಇಂಟರ್‍ನೆಟ್, ಮೊಬೈಲ್ ಮುಂತಾದ ವ್ಯರ್ಥವಾದ ಕಾರ್ಯಗಳು ಮನುಷ್ಯನ ನಿರ್ಣಾಯಕ ಶಕ್ತಿಯನ್ನು ಅಂದರೆ ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂದು ನಿರ್ಧರಿಸುವ ಸಾಮರ್ಥ್ಯವನ್ನು ನಾಶಮಾಡುತ್ತಿವೆ. ನಾಶನಕ್ಕೆ ನಡೆಸುವ ಅಗಲವಾದ ಮಾರ್ಗದಲ್ಲಿ ಬಹಳಷ್ಟು ಜನರು ಹೋಗುವರು. ಜಗತ್ತಿನಲ್ಲಿ ತುಂಬಿರುವ ಕ್ರೌರ್ಯ, ಹಿಂಸೆ, ದುಂದೌತಣ, ಕುಡುಕತನ ಮುಂತಾದವುಗಳು ಕ್ರೈಸ್ತ ಸಭೆಗೂ ಕಾಲಿಟ್ಟಿವೆ. ನೀತಿಯೆಂಬ ದೈವೀಕ ಮಾನದಂಡವಾದ ದೇವರಾಜ್ಞೆಗಳು ಅಪ್ರಯೋಜನಕರ ಎಂದು ತಿರಸ್ಕರಿಸಲ್ಪಟ್ಟಿವೆ. KanCCh 41.3
ಅಂತ್ಯಕಾಲದ ಬಗ್ಗೆ ತಿಳಿಸಲಾಗಿರುವ ಪ್ರವಾದನೆಗಳು ನೆರವೇರುವ ತನಕ ನಾವು ಅವುಗಳ ಬಗ್ಗೆ ತಿಳಿಸಲು ಕಾದುಕೊಂಡಿರಬೇಕೇ? ಪ್ರವಾದನೆಗಳು ನೆರವೇರಿದ ನಂತರ ನಮ್ಮ ಮಾತುಗಳಿಗೆ ಯಾವ ಬೆಲೆಯಿರುತ್ತದೆ? ದೇವರಾಜ್ಞೆಗಳನ್ನು ಮೀರಿನಡೆದವರ ಮೇಲೆ ಆತನ ದಂಡನೆಯ ತೀರ್ಪು ಉಂಟಾಗುವವರೆಗೆ ನಾವು ಅವುಗಳಿಂದ ತಪ್ಪಿಸಿಕೊಳ್ಳುವುದು ಹೇಗೆಂದು ಅವರಿಗೆ ತಿಳಿಸಲು ಕಾದುಕೊಂಡಿರಬೇಕೆ? ಹಾಗಿದ್ದಲ್ಲಿ ದೇವರ ವಾಕ್ಯದ ಮೇಲೆ ನಮ್ಮ ನಂಬಿಕೆ ಎಲ್ಲಿದೆ? ಪ್ರವಾದನೆಗಳಲ್ಲಿ ತಿಳಿಸಿರುವ ಸಂಗತಿಗಳು ನೆರವೇರಿದ ನಂತರ ನಾವು ಅವುಗಳಲ್ಲಿ ನಂಬಿಕೆ ಇಡಬೇಕೇ? “ಕರ್ತನ ಮಹಾದಿನವು ಹತ್ತಿರದಲ್ಲಿದೆ, ಬಾಗಿಲಲ್ಲಿಯೇ ಅದೆ” ಎಂದು ತೋರಿಸುವ ಬೆಳಕು ಸ್ಪಷ್ಟವಾಗಿ ನಮಗೆ ತಿಳಿಸಲ್ಪಟ್ಟಿದೆ. ಸಮಯವು ಮೀರುವ ಮೊದಲೇ ನಾವು ಅದನ್ನು ಓದಿ ಅರ್ಥ ಮಾಡಿಕೊಳ್ಳೋಣ.KanCCh 42.1